ಸೈನಸೈಟಿಸ್ ತಲೆನೋವಿನಿಂದ ಬಳಲುತ್ತಿದ್ದೀರಾ ? ಈ ಲೇಖನ ಓದಿ

0

ಮನೆಮದ್ದು:

*ತುಲಸೀ ಎಲೆಗಳನ್ನು ನೀರಿನಲ್ಲಿ ಕುದಿಸಿ, ಮೂಗಿನ ಮೂಲಕ ಆವಿ ತೆಗೆದುಕೊಳ್ಳುವುದು.
*ಕುದಿಯುವ ನೀರಿಗೆ ಲವಂಗ, ಪುದಿನ, ಎಳ್ಳೆಣ್ಣೆ, ನೀಲಗಿರಿ ಎಣ್ಣೆ ಹಾಕಿ ಆವಿತೆಗೆದುಕೊಳ್ಳುವುದು.
*ಸ್ವಲ್ಪ ಬಿಸಿನೀರಿಗೆ ಉಪ್ಪು ಹಾಕಿ ಗಂಟಲು ಮುಕ್ಕಳಿಸುವುದು.
*ನೀರುಳ್ಳಿ ಹಚ್ಚಿ ನೀರಿಗೆ ಹಾಕಿ, ಕುದಿಸಿ ಆವಿ ತೆಗೆದುಕೊಳ್ಳಿ.
*ಬಿಸಿನೀರನ್ನು ತಣಿಸಿ, ಶುಂಠೀರಸ ಮತ್ತು ಜೇನು ಸೇರಿಸಿ ಮೂರರಿಂದ ನಾಲ್ಕು ಹನಿ ದಿನಕ್ಕೆ ಮೂರು- ನಾಲ್ಕು ಸಲ ಮೂಗಿಗೆ ಬಿಡುವುದು.
*ನೋವಿನ ಭಾಗಕ್ಕೆ ( ಹಣೆ, ಕೆನ್ನೆ) ಬಿಸಿನೀರಿನ ಸೇಕ ಕೊಡುವುದು.
*ಯೋಗದಲ್ಲಿನ ಕಪಾಲಭಾತಿ, ಜಲನೇತಿ, ಓಂಕಾರದ ಅಭ್ಯಾಸ

ಅಯ್ಯಯ್ಯೋ, ಎಂಥಾ ಕೆಟ್ಟ ತಲೆನೋವಪ್ಪಾ.. ನೆಗಡಿ, ಮೂಗು ಬಂದ್ ಆಗ್ತದೆ..ಆಗಾಗ ತಲೆನೋವು. ತಲೆ ಕೆಳಗೆ ಹಾಕಿದರೆ ಭಾರ ಅನ್ನಿಸಿ ಬಿಡ್ತದೆ. ಎಲ್ಲಾ ಔಷಧ ತಿಂದಾಯ್ತು. ಒಮ್ಮೆ ಕಡಿಮೆ ಆಗ್ತದೆ, ಮತ್ತೆ ಶುರು ಆಗ್ತದೆ. ಇದಕ್ಕೆ ಪರಿಹಾರವೇ ಇಲ್ಲವೇ? ಎಂದು ಚಿಂತಿಸುತ್ತಾ ಕುಳಿತವರಿಗೆ ಇದು ಸೈನಸೈಟಿಸ್ ಆಗಿರಬಹುದು ಎಂಬ ಅರಿವು ಹುಟ್ಟಿಸಿ, ಇದಕ್ಕೊಂದು ಪರಿಹಾರ ಇದೆ ಎಂದು ಆತ್ಮ ವಿಶ್ವಾಸ ತುಂಬಲು ಈ ಲೇಖನ.

ಸೈನಸ್‌ಗಳೆಂದರೆ ತಲೆಬುರುಡೆಯ ಕೆಲವು ಎಲುಬುಗಳಲ್ಲಿರುವ ಟೊಳ್ಳಾದ ಭಾಗಗಳು. ಹಣೆಯ ಭಾಗದಲ್ಲಿ ಎರಡು ಫ್ರಾಂಟಲ್ ಸೈನಸ್, ಮೂಗಿನ ಆರಂಭದ
ಇಕ್ಕೆಲಗಳಲ್ಲಿ ಇಥಮಾಯಿಡ್ ಸೈನಸ್, ಕೆನ್ನೆಗಳ ಎಲುಬುಗಳ ಒಳಗೆ ಮ್ಯಾಕ್ಸಿಲ್ಲರಿ ಸೈನಸ್ ಇರುತ್ತವೆ. ಇವುಗಳ ಒಳಭಾಗವನ್ನು ಆವರಿಸಿರುವ ಶ್ಲೇಷ್ಮಲ ಪೊರೆಯ ಉರಿಯೂತ(ಇನ್ ಫ್ಲಾಮ್ಮೇಶನ್)ವನ್ನು ಸೈನಸೈಟಿಸ್ ಎನ್ನುತ್ತೇವೆ. ಇದರಲ್ಲಿ ಮುಚ್ಚಿದ ಮತ್ತು ತೆರೆದ ಎಂಬ ಎರಡು ವಿಧಗಳಿವೆ.

ತೆರೆದ ವಿಧದಲ್ಲಿ ಮ್ಯೂಕಸ್ ಅಥವಾ ಕಫವು ಮೂಗಿನ ಕಡೆಗೆ ಜಾರುತ್ತದೆ. ಮುಚ್ಚಿದ ವಿಧದಲ್ಲಿ ಹೀಗೆ ಜಾರಿ ಹೋಗದೆ, ಸೈನಸ್ ಭಾಗಗಳಲ್ಲೇ ಸಂಗ್ರಹವಾಗುತ್ತದೆ. ಸೈನಸ್ ಉರಿಯೂತಕ್ಕೆ ಸೂಕ್ಷ್ಮಾಣು ಸೋಂಕು ಮೊದಲ ಕಾರಣ. ಇದು ಉಂಟಾಗಲು ಈಜುವುದು, ತಲೆಯ ಭಾಗಕ್ಕೆ ಏಟು ಬೀಳುವುದು, ಹಲ್ಲುಗಳ ಸಮಸ್ಯೆಯ ದೆಸೆಯಿಂದ ಅಥವಾ ಹಲ್ಲು ಕೀಳುವುದು ಆದ ನಂತರ, ಕಿವಿ-ಗಂಟಲು ಸೋಂಕು ಇತ್ಯಾದಿ ಕಾರಣಗಳಿರಬಹುದು. ವೈರಸ್, ಬ್ಯಾಕ್ಟೀರಿಯಾ ಸೂಕ್ಷ್ಮಾಣುಗಳು ಸೋಂಕು ಉಂಟುಮಾಡಬಹುದು. ಈಜುಕೊಳದಲ್ಲಿನ ಕ್ಲೋರಿನ್ ರಾಸಾಯನಿಕವು ಉರಿಯೂತಕ್ಕೆ ಕಾರಣವಾಗಿರಬಹುದು. ಆಘಾತದಿಂದ ತಲೆಯ ಭಾಗದ ಎಲುಬುಗಳು ಮುರಿತಕ್ಕೆ ಒಳಗಾಗಿ ಸೋಂಕು ಹರಡಬಹುದು. ಎರಡನೆಯ ಕಾರಣ, ಸೈನಸ್ ದ್ವಾರಗಳಲ್ಲಿ ತಡೆ ಉಂಟಾಗುವುದು. ಇದಕ್ಕೆ ಮೂಗಿನಿಂದ ರಕ್ತಸ್ರಾವ ಆದಾಗ ವೈದ್ಯರು ಮಾಡುವ ಮೂಗಿನ ಪ್ಯಾಕಿಂಗ್, ಓರೆಕೋರೆಯಾಗಿರುವ ಮೂಗಿನ ಮಧ್ಯದ ಗೋಡೆ(ಸೆಪ್ಟಮ್), ಊದಿಕೊಂಡ ಮೂಗಿನೊಳಗಿನ ಗೊರಸುಗಳು, ಅಲರ್ಜಿಯಿಂದಾಗಿ ಸೈನಸ್‌ನೊಳಗಿನ ಪೊರೆಗಳು ಊದಿಕೊಳ್ಳುವುದು, ಮೂಗಿನೊಳಗೆ ಕಾಣಿಸಿಕೊಳ್ಳುವ ಪಾಲಿಪ್ ಗುಳ್ಳೆಗಳು, ಸೈನಸ್ ಭಾಗದ ಅಥವಾ ಆಸುಪಾಸಿನ ಗಡ್ಡೆಗಳು, ದಪ್ಪಗಾದ ಅಡಿನಾಯಿಡ್ ಮೂಲಕಾರಣಗಳು. ಇವುಗಳು ಉಂಟುಮಾಡುವ ಅಡಚಣೆಯಿಂದಾಗಿ ಸೈನಸ್ ಭಾಗದ ಸ್ರಾವಗಳು ಸರಿಯಾಗಿ ಹರಿದು ಹೋಗುವುದಿಲ್ಲ. ಮೂರನೆಯದು, ಸಾಮಾನ್ಯ ಕಾರಣಗಳಾದ ಶೀತ ಅಥವಾ ಶುಷ್ಖ ವಾತಾವರಣ, ಮಾಲಿನ್ಯ, ಹೊಗೆ, ಧೂಳು, ಜನಸಂದಣಿ, ಪೌಷ್ಟಿಕಾಂಶದ ಕೊರತೆ, ಸಕ್ಕರೆ ಕಾಯಿಲೆ ಹಾಗೂ ರೋಗನಿರೋಧಕ ಶಕ್ತಿಯ ಕೊರತೆ ಉಂಟು ಮಾಡುವ ಕಾಯಿಲೆ ಅಥವಾ ಸ್ಟಿರಾಯ್ಡ್, ಮಿಥೋಟ್ರೆಕ್ಸೇಟ್‌ನಂತಹ ಔಷಧಗಳು. ಸಾಧಾರಣ ಸ್ವರೂಪದ್ದು ಅಥವಾ ಕೀವುಸ್ರಾವಗಳಿಂದ ಕೂಡಿರುವ ತೀವ್ರ ಸ್ವರೂಪದ್ದಾಗಿಯೂ ಸೈನಸೈಟಿಸ್ ವ್ಯಕ್ತವಾಗಬಹುದು, ಬೆಳವಣಿಗೆ ಹೊಂದಬಹುದು. ಆರಂಭದಲ್ಲಿ ನೀರಿನಂತಹ ನೆಗಡಿಯಿಂದ ಕೂಡಿದ್ದು, ನಂತರದ ಅವಽಯಲ್ಲಿ ಕೀವು ಉಂಟಾದ ಸ್ಥಿತಿ ತಲುಪಬಹುದು.

ತೀವ್ರಸ್ವರೂಪದ ಮ್ಯಾಕ್ಸಿಲ್ಲರಿ ಸೈನಸ್ ಉರಿಯೂತದಲ್ಲಿ ಜ್ವರ, ಸುಸ್ತು, ಮೈಕೈನೋವು, ತಲೆನೋವು ಬರುವುದು. ಈ ತಲೆನೋವಿನ ಸ್ವರೂಪ ಹೇಗಿರುತ್ತದೆಯೆಂದರೆ ಮೇಲ್ದವಡೆಯಿಂದ ವಸಡು ಮತ್ತು ಹಲ್ಲುಗಳಿಗೆ ಹರಿಯುವ ನೋವು ಆಗಿರಬಹುದು. ಕೆಮ್ಮುವುದು, ಜಗಿಯುವುದರಿಂದ ನೋವು ಹೆಚ್ಚಾಗಬಹುದು. ಕೆಲವು ಸಲ ಹುಬ್ಬುಗಳ ಮೇಲ್ಭಾಗಕ್ಕೆ ನೋವು ಹರಿಯುವುದು. ಕೆನ್ನೆಗಳು ಕೆಂಪಾಗಿ ಊದಿಕೊಳ್ಳಲೂಬಹುದು. ಮೂಗಿನಿಂದ ಹಾಗೂ ಗಂಟಲೊಳಗೆ ಅಥವಾ ಬಾಯಿಯ ಒಳ ಮೇಲ್ಭಾಗದಲ್ಲಿ ಸ್ರಾವ ಇರಬಹುದು. ತೀವ್ರಸ್ವರೂಪದ ಫ್ರಾಂಟಲ್ ಸೈನಸೈಟಿಸ್‌ನಲ್ಲಿ ಹಣೆಯ ಭಾಗದಲ್ಲಿ ನೋವು, ಬೆಳಗ್ಗೆ ಶುರುವಾಗಿ, ಮಧ್ಯಾಹ್ನ ಸೂರ‍್ಯ ನೆತ್ತಿ ಮೇಲೆ ಬಂದಾಗ ಹೆಚ್ಚಾಗಿದ್ದು, ನಂತರ ಸಂಜೆಗೆ ಕಡಿಮೆಯಗುತ್ತಾ ಹೋಗುತ್ತದೆ. ಇದಕ್ಕೆ ಆಫೀಸ್ ತಲೆನೋವು ಎಂಬ ಹೆಸರೂ ಇದೆ; ಆಫೀಸ್ ಅವಧಿಯಲ್ಲಿ ಹೆಚ್ಚಾಗುವುದರಿಂದ. ಆಯುರ್ವೇದದಲ್ಲಿ ಸೂರ‍್ಯಾವರ್ತ ಶಿರಶೂಲ ಎಂದಿದ್ದಾರೆ. ಹಣೆಯ ಮಧ್ಯಭಾಗದಲ್ಲಿ ಒತ್ತಿದಾಗ ನೋವು ಹೆಚ್ಚಿರುತ್ತದೆ. ಕಣ್ಣಿನ ಮೇಲಿನ ರೆಪ್ಪೆಗಳ ಊತ, ಸಾಮಾನ್ಯ ಬೆಳಕಿಗೆ ಕಣ್ಣು ತೆರೆಯಲು ಕಷ್ಟವಾಗುವುದು, ಮೂಗಿನ ಒಳ ಮಧ್ಯಬಾಗದಲ್ಲಿ ನೆಗಡಿಯ ತೆಳ್ಳನೆಯ ಎಳೆಗಳು ಇರುತ್ತವೆ. ತೀವ್ರಸ್ವರೂಪದ ಇಥಮಾಯಿಡ್ ಸೈನಸ್ ಉರಿಯೂತದಲ್ಲಿ ಮೂಗಿನ ಮಧ್ಯದ ಗೊರಸಿನಲ್ಲಿ, ಮೂಗು ಮತ್ತು ಕಣ್ಣಿನ ಮಧ್ಯಭಾಗದಲ್ಲಿ, ಕಣ್ಣಿನ ಒಳಗೆ ನೋವು ಕಾಣಿಸಿಕೊಳ್ಳುವುದು. ಕಣ್ಣಿನ ಚಲನೆಗಳಿಂದ ನೋವು ಹೆಚ್ಚುವುದು. ರೆಪ್ಪೆಗಳ ಊತ ಕಾಣಿಸಿಕೊಳ್ಳಬಹುದು. ಕಣ್ಣೀರು ಅಽಕವಾಗಿ ಬರುವುದು. ಮೂಗಿನ ಒಳ ಮೇಲ್ಭಾಗದಲ್ಲಿ ಕೀವು ಸಂಗ್ರಹವಾಗುವುದು. ಕಣ್ಣು ಗುಡ್ಡೆಯ ಪೂರ್ಣಪ್ರಮಾಣದ ಉರಿಯೂತ ಇದರಲ್ಲಿ ಕಾಣಿಸಿಕೊಳ್ಳಬಹುದಾದ ಒಂದು ಜಟಿಲತೆ. ಮೂಗಿನ ಒಳ ಮಧ್ಯ ಗೊರಸುಗಳ ಊತ ಇರುವುದು.

ಇವೆಲ್ಲದರಲ್ಲೂ, ಒದಗುವ ಕಾಂಪ್ಲಿಕೇಶನ್‌ಗಳು- ಮೆದುಳಿನ ಹೊರ ಆವರಣದ ಉರಿಯೂತ, ಕಣ್ಣಿನ ನರದ ಮೇಲೆ ತೊಂದರೆ ಉಂಟುಮಾಡಿ ಆಗುವ ಕುರುಡುತನ, ಮೆದುಳಿನಲ್ಲಿ ಕೀವು ಉಂಟಾಗುವುದು, ಕಿವಿ-ಗಂಟಲಿನ ತೊಂದರೆಗಳು ಇತ್ಯಾದಿ. ದೀರ್ಘಕಾಲೀನ ಸೈನಸ್ ಉರಿಯೂತದಲ್ಲಿ, ತಿಂಗಳಾನುಗಟ್ಟಲೆ, ವರ್ಷಾನುಗಟ್ಟಲೆ, ಮರುಕಳಿಸುತ್ತಿರುವ ಸೈನಸೈಟಿಸ್. ಸೈನಸ್‌ಗಳ ಒಳಗೆ ಸ್ರಾವಗಳ ಶೇಖರಣೆ. ಸೈನಸ್ ಭಾಗಗಳಲ್ಲಿನ ಕಫವನ್ನು ಹೊರದೂಡುವುದಕ್ಕೆ ಸಹಾಯಕವಾದ ಕೂದಲಿನಿಂದ ಕೂಡಿದ ಶ್ಲೇಷ್ಮಲ ಪೊರೆಯ ನಾಶ. ದೀರ್ಘಕಾಲೀನ ಸೈನಸೈಟಿಸ್‌ನಲ್ಲಿ ತೀವ್ರಸ್ವರೂಪದಲ್ಲಿ ಇದ್ದಂತೆ ಲಕ್ಷಣಗಳು ತೀವ್ರವಾಗಿರುವುದಿಲ್ಲ. ಮೂಗಿನಿಂದ ಕೀವುಮಿಶ್ರಿತ ಸ್ರಾವ ಹಾಗೂ ಕೆಲವು ಸಲ ದುರ್ವಾಸನೆ ಬರುತ್ತಿರುತ್ತದೆ. ರೋಗಿಗೆ ವಾಸನೆ ಗೊತ್ತಾಗದಿರುವುದು. ಇದರಲ್ಲಿ ತಲೆನೋವು ಇಲ್ಲದೇ ಇರಬಹುದು.

ಮಕ್ಕಳಲ್ಲಂತೂ ಈ ಸಮಸ್ಯೆ ಮತ್ತೆ ಮತ್ತೆ ಕಾಣಿಸಿಕೊಂಡಾಗ, ವರ್ಷಕ್ಕೆ ಹತ್ತಾರು ಬಾರಿ ಮಕ್ಕಳ ವೈದ್ಯರಲ್ಲಿಗೆ ಅಲೆದಲೆದು ಸುಸ್ತಾಗುವ ಹೆತ್ತವರು, ಮತ್ತೆ ಮತ್ತೆ ಮಕ್ಕಳಿಗೆ ಅವರ ಕರುಳನ್ನೂ ದೇಹವನ್ನೂ ಹದಗೆಡಿಸಿ ಅವರ ಭವಿಷ್ಯಕ್ಕೆ ಮಾರಕವಾಗುವ ಆಂಟಿಬಯೋಟಿಕ್ ತಿನ್ನಿಸಿ ನಿರಾಳರಾಗುವ ತಾಯಂದಿರು! ಆಯುರ್ವೇದ ಔಷಧ ನೀಡುವಾಗ ಮಗುವಿನ ಸುರಕ್ಷತೆಯ ಪ್ರಶ್ನೆ ಎತ್ತುವ ಕೆಲವರಿಗೆ, ಬಣ್ಣಬಣ್ಣದ ಆಂಟಿಬಯೋಟಿಕ್ ತಿನ್ನಿಸುವಾಗಲಂತೂ ಅದ್ಭುತ ಆತ್ಮವಿಶ್ವಾಸ! ಪಾಪ! ಅವರಿಗೆ ತಿಳಿಯದು! ಆಂಟಿಬಯೋಟಿಕ್ ಪ್ರಯೋಜನಕ್ಕೆ ಬರುವುದು ಕೇವಲ ಬ್ಯಾಕ್ಟೀರಿಯ ಸೂಕ್ಷ್ಮಾಣು ಸೋಂಕಿನಲ್ಲಿ ಮಾತ್ರ; ವೈರಸ್ ಸೋಂಕು ಮತ್ತು ಅಲರ್ಜಿ ಸಂದರ್ಭಗಳಲ್ಲಿ ಅಲ್ಲ.
ನಾವು ರೋಗಿ ಪರೀಕ್ಷೆಯ ಮೂಲಕ ಎರಡು ಪ್ರಶ್ನೆಗಳಿಗೆ ಕಾರಣಗಳನ್ನು ಕಂಡುಕೊಳ್ಳುತ್ತೇವೆ. ಅಡಚಣೆಯ ಕಾರಣ ಏನು? ಅಲರ್ಜಿ ಇದೆಯಾ? ನಂತರ ಕಫಜ ಶಿರೋರೋಗ ಎಂದು ನಾವು ಪರಿಗಣಿಸಿದರೆ ನಸ್ಯಕರ್ಮ, ವಮನ ಕರ್ಮ, ತೀಕ್ಷ್ಣಗಂಡೂಷ ಮತ್ತು ಕವಲ(ಔಷಧದಲ್ಲಿ ಬಾಯಿ ಮುಕ್ಕಳಿಸುವುದು), ಘೃತಪಾನ(ಔಷಧಿಯ ತುಪ್ಪವನ್ನು ಸೇವನೆಗೆ ನೀಡುವುದು), ಸ್ವೇದನ, ಧೂಮಪಾನ, ತಲೆಗೆ ಲೇಪ, ತೀಕ್ಷ್ಣ ಬಸ್ತಿ( ಔಷಧಿಯ ಎನಿಮಾ ಕೊಡುವುದು), ಅಗ್ನಿಕರ್ಮ ಇತ್ಯಾದಿ ಚಿಕಿತ್ಸೆಗಳನ್ನು ರೋಗಿಯ ಸ್ಥಿತಿ, ರೋಗದ ಅವಸ್ಥೆ, ರೋಗಿಯ ಪ್ರಕೃತಿಗಳನ್ನು ನೋಡಿಕೊಂಡು ನೀಡುತ್ತೇವೆ. ಸೂರ‍್ಯಾವರ್ತ ತಲೆನೋವಿನಲ್ಲಿ ಮೇಲಿನ ಚಿಕಿತ್ಸೆಗಳಲ್ಲದೆ, ಆಹಾರದ ನಂತರ ಘೃತಪಾನ, ಪರಿಷೇಕ(ಶಿರೋಧಾರಾ), ಶಿರೋಬಸ್ತಿ, ವಿರೇಚನ, ಆಸ್ಥಾಪನ ಬಸ್ತಿ, ಅನುವಾಸನ ಬಸ್ತಿಗಳನ್ನು ಅಳವಡಿಸಿಕೊಳ್ಳುತ್ತೇವೆ. ಪಾಲಿಪ್ ಗುಳ್ಳೆಗಳು ಇದ್ದಲ್ಲಿ ಶಸಚಿಕಿತ್ಸೆ ಇಲ್ಲದೇ ಕೇವಲ ಆಯುರ್ವೇದ ಕ್ಷಾರಚಿಕಿತ್ಸೆಯಿಂದ ನಿವಾರಿಸಬಹುದಾಗಿದೆ. ಸೈನಸ್ ತಲೆನೋವು ಇರುವವರು ಮಾಂಸ, ಪಿಜ್ಜಾ, ಮೊಸರು, ಟೊಮಾಟೋ, ಚಾಕೋಲೇಟ್, ಗ್ಲುಟನ್ ಅಂಶ ಇರುವ ಗೋಧಿ- ಮೈದಾ, ಧಾನ್ಯ, ಬಾಳೆಹಣ್ಣುಗಳ ಸೇವನೆಯನ್ನು ತ್ಯಜಿಸಬೇಕು. ದ್ರಾಕ್ಷೆ, ನೀರುಳ್ಳಿ, ಬೆಳ್ಳುಳ್ಳಿ, ಅನನಾಸು, ಪಂಪ್‌ಕಿನ್ ಸೀಡ್(ಕೆಂಬುಡೆ ಬೀಜಗಳು), ಶುಂಠಿ- ಕಾಯಿಲೆ ಗುಣಪಡಿಸಲು ಸಹಕಾರಿ. ಪಂಪ್‌ಕಿನ್ ಸೀಡ್‌ಗಳಲ್ಲಿ ಸತು ಮತ್ತು ರಂಜಕದ ಅಂಶ ಅಽಕವಾಗಿದೆ. ಅನನಾಸಿನಲ್ಲಿರುವ ಬ್ರೋಮೆಲೇಯಿನ್ ಎಂಬ ಕಿಣ್ವ ಉರಿಯೂತ ನಿವಾರಕ. ಆಯುರ್ವೇದದ ಪ್ರಾಣ ಟ್ಯಾಬ್ಲೆಟ್, ಅಶ್ವಗಂಧಾ ಹಾಗೂ ಅರಸಿನದ ಸೇವನೆ ಅತ್ಯಂತ ಉಪಕಾರಿ. ಮಕ್ಕಳಲ್ಲಿ ಮರುಕಳಿಸುವ ಈ ರೀತಿ ಸಮಸ್ಯೆಗಳಿಗೆ ಪ್ರಸಾದಿನೀ ಸ್ವರ್ಣಪ್ರಾಶನ ಗುಣಕಾರಿ.

ಬರಹ:
ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ.ಘಿ ಬಿ.ಎ.ಎಂ.ಎಸ್., ಎಂ.ಎಸ್.(ಆಯು)
ಮೊಬೈಲ್: 9740545979

LEAVE A REPLY

Please enter your comment!
Please enter your name here