ಅಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಸದಸ್ಯರಾಗಿ ಪಿ.ಪಿ.ವರ್ಗೀಸ್, ಹೆಚ್.ಆದಂ, ಗೀತಾ ಕೋಲ್ಚಾರು ನೇಮಕ
ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ(ಅಕ್ರಮ ಸಕ್ರಮ) ರಾಜ್ಯ ಸರಕಾರ ನಾಲ್ಕು ತಿಂಗಳ ಹಿಂದೆ ರಚಿಸಿದ್ದ ಸಮಿತಿಗೆ ಬದಲಾಗಿ ಇದೀಗ ಹೊಸದಾಗಿ ಸದಸ್ಯರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯ ಸಮಿತಿಗೆ ಜಿ.ಪಂ.ಮಾಜಿ ಸದಸ್ಯ, ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ದರ್ಜಿಮಜಲು ನಿವಾಸಿ ಪಿ.ಪಿ.ವರ್ಗೀಸ್, ಕಾಂಗ್ರೆಸ್ ಹಿರಿಯ ಮುಖಂಡ ಕಡಬ ತಾಲೂಕು ರಾಮಕುಂಜ ಗ್ರಾಮದ ಕಾಜರೊಕ್ಕು ನಿವಾಸಿ ಹೆಚ್.ಆದಂ, ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ, ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಕೋಲ್ಚಾರು ಮನೆಯ ಗೀತಾ ಕೋಲ್ಚಾರು ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ತಹಶೀಲ್ದಾರ್ ಅವರು ಸಮಿತಿಯಲ್ಲಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಈ ಸಂಬಂಧ ಡಿ.18ರಂದು ರಾಜ್ಯ ಸರಕಾರದ ಕಂದಾಯ ಇಲಾಖೆ(ಭೂ ಮಂಜೂರಾತಿ-2) ಪೀಠಾಧಿಕಾರಿ ಮುತ್ತುರಾಜ್ ಎಂ.ಎನ್.ಅವರು ಆದೇಶ ಹೊರಡಿಸಿದ್ದಾರೆ.
ಪಿ.ಪಿ.ವರ್ಗೀಸ್:
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ದರ್ಜಿಮಲು ನಿವಾಸಿಯಾಗಿರುವ ಪಿ.ಪಿ.ವರ್ಗೀಸ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದು ಜಿ.ಪಂ. ಮಾಜಿ ಸದಸ್ಯರಾಗಿ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿ, ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ಭೂ ನ್ಯಾಯಮಂಡಳಿಯ ಮಾಜಿ ಸದಸ್ಯರಾಗಿ, ಕಡಬ ಸಿಎ ಬ್ಯಾಂಕ್ ಮಾಜಿ ನಿರ್ದೇಶಕರಾಗಿ, ನೂಜಿಬಾಳ್ತಿಲ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಈ ಹಿಂದೆ 1 ಸಲ ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಯಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಹೆಚ್.ಆದಂ:
ರಾಮಕುಂಜ ಗ್ರಾಮದ ಕಾಜರೊಕ್ಕು ನಿವಾಸಿಯಾಗಿರುವ ಹೆಚ್.ಆದಂ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಸಕ್ರೀಯರಾಗಿ ಕೆಲಸ ಮಾಡುತ್ತಿದ್ದಾರೆ. ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಉಪಾಧ್ಯಕ್ಷರಾಗಿ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಸದಸ್ಯರಾಗಿ, ಆಲಂಕಾರು ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷರಾಗಿ, ಮಾಜಿ ನಿರ್ದೇಶಕರಾಗಿ, ಆತೂರು ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷರಾಗಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಗೀತಾ ಕೋಲ್ಚಾರು:
ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾಗಿರುವ ಗೀತಾ ಕೋಲ್ಚಾರ್ರವರು ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆಲೆಟ್ಟಿ ಗ್ರಾಮದ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆಯಾಗಿ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಕೋಲ್ಚಾರು ಮನೆಯ ಗೀತಾ ಅವರ ಪತಿ ಚಂದ್ರಶೇಖರ ಗೌಡರು ಕೃಷಿಕರಾಗಿದ್ದು, ಪುತ್ರಿ ಅಕ್ಷಿತಾ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮಗ ಅಕ್ಷಯ್ ಸುಳ್ಯದಲ್ಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದಾರೆ.
ಈ ಹಿಂದೆ ಬಿಜೆಪಿ ಸದಸ್ಯರ ನೇಮಕ ಆಗಿತ್ತು:
ಕಾಂಗ್ರೆಸ್ ಪಟ್ಟಿ ಸಲ್ಲಿಕೆ ವಿಳಂಬವಾದ ಹಿನ್ನೆಲೆಯಲ್ಲಿ ಈ ಹಿಂದೆ ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರ ಶಿಫಾರಸ್ಸಿನ ಮೇರೆಗೆ ಬಿಜೆಪಿ ಸದಸ್ಯರ ನೇಮಕ ಆಗಿತ್ತು. ಬಿಜೆಪಿ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಅರಂತೋಡಿನ ಬಿಜೆಪಿ ನಾಯಕಿ ಭಾರತಿ ಪುರುಷೋತ್ತಮ ಹಾಗೂ ನ್ಯಾಯವಾದಿ ಜಗದೀಶ್ ಡಿ.ಪಿ.ನಾರ್ಣಕಜೆ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ ಸೆ.12ರಂದು ಆದೇಶ ಆಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿ ಮುಖಂಡರ ನೇಮಕ ಆಗಿರುವುದು ಬಹಿರಂಗಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸುಳ್ಯ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಪಕ್ಷದ ಜಿಲ್ಲಾ ವಲಯ ಉಸ್ತುವಾರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿ, ಈ ಆದೇಶಕ್ಕೆ ತಡೆ ನೀಡಿ ಕಾಂಗ್ರೆಸ್ ಬೆಂಬಲಿತ ಹೊಸ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸುವಂತೆ ಆಗ್ರಹಿಸಿ ಸದಸ್ಯರ ಪಟ್ಟಿ ಸಲ್ಲಿಸಿದ್ದರು.
ಕಾಂಗ್ರೆಸ್ನಿಂದ 2 ಪಟ್ಟಿ ಸಲ್ಲಿಕೆ:
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕಡಬ ಹಾಗೂ ಸುಳ್ಯ ಬ್ಲಾಕ್ ವ್ಯಾಪ್ತಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಅಕ್ರಮ ಸಕ್ರಮ ಸಮಿತಿಗೆ ಎರಡೂ ಬ್ಲಾಕ್ಗಳಿಂದಲೂ ಹೆಸರು ಸೂಚಿಸಲಾಗಿತ್ತು. ಸುಳ್ಯ ಬ್ಲಾಕ್ನಿಂದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ನಗರ ಪಂಚಾಯತ್ ಮಾಜಿ ಸದಸ್ಯ ದಿನೇಶ್ ಅಂಬೆಕಲ್ಲು ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಜಿ.ಕೃಷ್ಣಪ್ಪ ಅವರ ಆಪ್ತ ಆದಂ ರಾಮಕುಂಜ ಅವರ ಹೆಸರು ಕಳಿಸಲಾಗಿತ್ತು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಳಿಸಿದ್ದ ಪಟ್ಟಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್ರವರ ಹೆಸರು ಶಿಫಾರಸು ಮಾಡಲಾಗಿತ್ತು. ಡಾ| ರಘು ಅವರ ಮೂಲಕ ಮಾಜಿ ಸಚಿವ ಬಿ.ರಮಾನಾಥ ರೈಯವರಲ್ಲಿಗೆ ಹೋಗಿ ಅಲ್ಲಿಂದ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಸತ್ಯಕುಮಾರ್ ಅಡಿಂಜ, ಪವಿತ್ರ ಕುದ್ವ ಹಾಗೂ ಬಾಲಕೃಷ್ಣ ಬಳ್ಳೇರಿಯವರ ಹೆಸರನ್ನು ಸೂಚಿಸಲಾಗಿತ್ತು ಎಂದು ಹೇಳಲಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೂತ್ರವೊಂದನ್ನು ಮುಂದಿಟ್ಟು ಸುಳ್ಯ ಬ್ಲಾಕ್ ಅಧ್ಯಕ್ಷರು ಸೂಚಿಸಿದ್ದ ಒಬ್ಬರು, ಕಡಬ ಬ್ಲಾಕ್ ಅಧ್ಯಕ್ಷರು ಸೂಚಿಸಿದ್ದ ಒಬ್ಬರು ಹಾಗೂ ಜಿ.ಕೃಷ್ಣಪ್ಪ ಅವರು ಸೂಚಿಸಿದ್ದ ಒಬ್ಬರನ್ನು ಸದಸ್ಯರನ್ನಾಗಿಸಲು ಸೂಚಿಸಿದ್ದರು ಎಂದು ವರದಿಯಾಗಿತ್ತು. ಅದರಂತೆ ಈಗ ಗೀತಾ ಕೋಲ್ಚಾರ್, ಪಿ.ಪಿ.ವರ್ಗೀಸ್ ಹಾಗೂ ಆದಂ ರಾಮಕುಂಜ ಅವರನ್ನು ಅಕ್ರಮ ಸಕ್ರಮ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.