






ಕಡಬ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಪುತ್ತಿಲಬೈಲಡ್ಕ ಸರಕಾರಿ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಡಿ.30ರಂದು ನಡೆಯಿತು.
ಬೆಳಿಗ್ಗೆ ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿನಯ್‌ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟ್ರಮಣ ಗೌಡ ಬೈಲು ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬಿಳಿನೆಲೆ ಗ್ರಾ.ಪಂ.ಉಪಾಧ್ಯಕ್ಷ ಶಿವಶಂಕರ ಅವರು ಶುಭಹಾರೈಸಿದರು. ಶಾಲಾ ಮುಖ್ಯಗುರು ಲೋಕನಾಥ್, ಬಾಲರಶ್ಮಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗೇಶ್ ಬೈಲು, ಎಸ್‌ಡಿಎಂಸಿ ಉಪಾಧ್ಯಕ್ಷೆ ಪಾವನ, ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ, ಶಾಲಾ ಸಹಶಿಕ್ಷಕಿಯರಾದ ಕಸ್ತೂರಿ, ಯಶೋಧ, ವೀಣಾ ಹಾಗೂ ನುಸೈಭಾ ಪಾಲ್ಗೊಂಡಿದ್ದರು.
ಸಂಜೆ ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು ಮಾತನಾಡಿ, ಪ್ರಸ್ತುತ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ಶಾಲೆಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಕೊಕ್ಕಡ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈಯವರು, ಹಳ್ಳಿಗಾಡಿನ ಶಾಲೆಯ ಸೊಬಗನ್ನು ವರ್ಣಿಸಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವಂತೆ ಹೇಳಿದರು.
ಅತಿಥಿಯಾಗಿದ್ದ ಗೋಪಾಲಕೃಷ್ಣ ಪ್ರೌಢಶಾಲೆಯ ನಿವೃತ್ತ ಹಿಂದಿ ಶಿಕ್ಷಕ ದುಗ್ಗಪ್ಪ ಗೌಡ ಅವರು ತಮ್ಮ ಜೀವನದ ಹಲವಾರು ಘಟನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಉತ್ತಮ ಜೀವನ ಕಟ್ಟಿಕೊಳ್ಳುವಂತೆ ಕರೆ ನೀಡಿದರು. ಬಿಳಿನೆಲೆ ಗ್ರಾ.ಪಂ.ಸದಸ್ಯ ಸುಧೀರ್‌ಕುಮಾರ್ ಶೆಟ್ಟಿಯವರು ಮಾತನಾಡಿ, ಪುತ್ತಿಲ ಬೈಲಡ್ಕ ಶಾಲೆ ತನ್ನ ತವರು ಶಾಲೆಯೆಂದು ಶಾಲಾ ಅಭಿವೃದ್ಧಿಗೆ ತನ್ನ ಕೈಲಾದಷ್ಟು ಪ್ರಯತ್ನಪಡುವುದಾಗಿ ಹೇಳಿದರು. ಶಾಲೆಯ ಪ್ರಸ್ತುತ ಅಭಿವೃದ್ಧಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಉದ್ಯಮಿ ಹಾಗೂ ಕಡಬ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ಸುರೇಶ್ ಬೈಲು ಅವರು ಮಾತನಾಡಿ, ತಮ್ಮ ಜೀವನದ ಕಷ್ಟದ ದಿನಗಳನ್ನು ಇತರರಿಗೆ ಪ್ರೇರಣೆಯಾಗುವಂತೆ ಹೇಳಿ, ಸ್ಥಳೀಯ ವ್ಯಕ್ತಿಗಳನ್ನು ವಿದ್ಯಾರ್ಥಿಗಳು ಆದರ್ಶವಾಗಿ ತೆಗೆದುಕೊಳ್ಳಿ ಹಾಗೂ ಅವರಂತೆ ಜೀವಿಸಲು ಕರೆನೀಡಿ, ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಸತ್ಯಶಂಕರ ಭಟ್‌ರವರು ಮಾತನಾಡಿ, ಪುತ್ತಿಲ ಬೈಲಡ್ಕ ಶಾಲಾ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ಮಾತನಾಡಿ, ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎರ್ಕ, ಬಂಟ್ರ ಕ್ಲಸ್ಟರ್ ಸಿಆರ್‌ಪಿ ಕುಮಾರ್ ಸಿ.ಜೆ., ಬಿಳಿನೆಲೆ ಗ್ರಾ.ಪಂ.ಉಪಾಧ್ಯಕ್ಷರಾದ ಶಿವಶಂಕರ್, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ ಉಪಸ್ಥಿತರಿದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟ್ರಮಣ ಗೌಡ ಬೈಲು ಸ್ವಾಗತಿಸಿದರು. ಶಾಲಾ ಮುಖ್ಯಗುರು ಲೋಕನಾಥ್ ವರದಿ ವಾಚಿಸಿದರು. ಬಾಲರಶ್ಮಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾಗೇಶ್ ಬೈಲು ವಂದಿಸಿದರು. ಶಾಲಾ ಶಿಕ್ಷಕಿ ಕಸ್ತೂರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸ್ಥಾಪಕ ಅಧ್ಯಕ್ಷ ವೆಂಕಪ್ಪ ಗೌಡ ಪುತ್ತಿಲರವರ ಮಗ ಹರಿಶ್ಚಂದ್ರ ಗೌಡ ಪುತ್ತಿಲ ಹಾಗೂ ಶಾಲಾ ಸ್ಥಳ ದಾನಿಗಳಲ್ಲಿ ಹಿರಿಯರಾದ ದೇಜಪ್ಪ ಗೌಡ ಚೂಂತಾರು ಉಪಸ್ಥಿತರಿದ್ದರು.











