ರಾಮಕುಂಜ: ಕೊಯಿಲ ಗ್ರಾಮದ ವಳಕಡಮ ಸರಕಾರಿ ಕಿ.ಪ್ರಾ.ಶಾಲಾ ವಾರ್ಷಿಕೋತ್ಸವ ’ ವಳಕಡಮ ಸಂಭ್ರಮ-2023’ ಡಿ.30ರಂದು ನಡೆಯಿತು.
ಸಂಜೆ ನಡೆದ ಕಾರ್ಯಕ್ರಮವನ್ನು ಎಪಿಎಂಸಿ ಮಾಜಿ ಸದಸ್ಯ ಶೀನಪ್ಪ ಗೌಡ ಅವರು ಉದ್ಘಾಟಿಸಿ ಶುಭಹಾರೈಸಿದರು. ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಸುಭಾಷ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಲೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್‌ರವರು ಮಾತನಾಡಿ, ಶಾಲೆಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಮತ್ತು ಶಾಲೆಯ ಅಭಿವೃದ್ಧಿಯಲ್ಲಿ ಊರವರ ಪಾತ್ರವನ್ನು ಶ್ಲಾಘಿಸಿದರು. ಸಿಆರ್‌ಪಿ ಮಹೇಶ್ ಎಂ.,ಅವರು ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ, ದಾನಿಗಳ ಕೊಡುಗೆಯನ್ನು ಸ್ಮರಿಸಿದರು. ಶಾಲಾ ದತ್ತುನಿಧಿ ಸ್ಥಾಪಕರಾದ ಉಮೇಶ್ ಬಂಡಾಡಿಯವರು ದತ್ತುನಿಧಿಯನ್ನು ವಿತರಿಸಿದರು. ಮುಖ್ಯ ಅತಿಥಿಗಳಾಗಿದ್ದ ಗ್ರಾ.ಪಂ.ಸದಸ್ಯರಾದ ಕಮಲಾಕ್ಷಿ ಪಾಜಳಿಕೆ, ಚಂದ್ರಶೇಖರ ಮಾಳ, ಲತಾನವೀನ್ ಪೂಜಾರಿ ಎಡೆಚ್ಚಾರು ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್‌ದಾಸ್, ಶಾಲಾಮುಖ್ಯಗುರು ನಾರಾಯಣ ಪಿ.ಎಸ್.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಊರವರಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸನ್ಮಾನ:
ಶಾಲೆಯಲ್ಲಿ 20ವರ್ಷ ಸಹಾಯಕ ಅಡುಗೆಯವರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಲಲಿತ ಯು.ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ದತ್ತುನಿಧಿಯ ಸ್ಥಾಪಕರಾದ ಉಮೇಶ್ ಬಿ. ಹಿರೇಬಂಡಾಡಿ ಅವರನ್ನು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಮುಖ್ಯಗುರು ಪಿ.ಎಸ್.ನಾರಾಯಣ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಸಂಧ್ಯಾ ಕೆ.,ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಲಾವಣ್ಯ ಮತ್ತು ಹಿರಿಯ ವಿದ್ಯಾರ್ಥಿ ಶರತ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಬಳಿಕ ಕೊನೆಮಜಲು ಮತ್ತು ವಳಕಡಮ ಅಂಗನವಾಡಿ ಮಕ್ಕಳಿಂದ, ಶಾಲಾ ವಿದ್ಯಾರ್ಥಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.