ಪುತ್ತೂರು: ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ಪುತ್ತೂರು ತಾಲೂಕು ವಾಲಿಬಾಲ್ ಸಂಸ್ಥೆ ಮತ್ತು ಸುದಾನ ವಸತಿಯುತ ವಿದ್ಯಾಸಂಸ್ಥೆ ಪುತ್ತೂರು ಇವರ ಸಹಯೋಗದೊಂದಿಗೆ 14,17 ಮತ್ತು 19 ವರ್ಷ ವಯೋಮಾನದ ದ.ಕ ಜಿಲ್ಲಾ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟ ಜ.6ರಂದು ಸುದಾನ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಜರುಗಲಿದೆ ಎಂದು ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷಬಿ.ಎಸ್ ಸತೀಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಹಿಂದಿನ ಶಾಲಾ ಮಕ್ಕಳ ಕ್ರೀಡಾಕೂಟವು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿದ್ದು ಸುಮಾರು 47 ತಂಡಗಳು ಜಿಲ್ಲೆಯಾದ್ಯಂತ ಭಾಗವಹಿಸಿತ್ತು. ಇದೀಗ ಈ ಭಾರಿ 24 ತಂಡಗಳು ಈಗಾಗಲೇ ನೋಂದಾವಣೆ ಆಗಿದೆ. ಇನ್ನು ನೋಂದಾವಣೆಗೆ ಅವಕಾಶವಿದೆ ಎಂದ ಅವರು ಬೆಳಿಗ್ಗೆ ಗಂಟೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಿದ್ಯಾರಶ್ಮಿ ವಿದ್ಯಾ ಸಂಸ್ಥೆಯ ಸಂಚಾಲಕ ಸೀತಾರಾಮ ರೈ ಸವಣೂರು ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಪಂದ್ಯಾಟದ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಅತಿಥಿಗಳಾಗಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾೖಕ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಜಗದೀಶ್ ಶೆಟ್ಟಿ, ಡಿಎಫ್‌ಒ ಮಂಗಳೂರು ಶ್ರೀಧರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ನ್ಯಾಯವಾದಿ ಜಯಪ್ರಕಾಶ್ ರೈ ಸುಳ್ಯ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿ, ಉದ್ಯಮಿ ಸಹಜ್ ರೈ, ಸುದಾನ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಪ್ರದೀಪ್ ಡಿ’ಸೋಜ, ಪುತ್ತೂರು ಯುವ ಸಬಲೀಕರಣ ಮತ್ತು ಯುವಜನ ಸೇವಾ ಕ್ರೀಡಾಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು, ಬಿ.ಎಸ್.ಎನ್.ಎಲ್ ನ ಗಣೇಶ್ ರೈ, ದ.ಕ.ಜಿಲ್ಲಾ ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಧಾಕೃಷ್ಣ ನಾೖಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಪಂದ್ಯಾಟದಲ್ಲಿ ಆಯ್ಕೆಗಳು ನಡೆಯಲಿದೆ:
ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಿ ಅವರಿಗೆ ವಿಶೇಷ ತರಬೇತಿ ನೀಡಲಿದ್ದೇವೆ. ಈಗಾಗಲೇ ದಕ್ಷಿಣ ಕನ್ನಡದ ವಾಲಿಬಾಲ್ ಪಟುಗಳಿಗೆ ಉತ್ತಮ ಹೆಸರಿದೆ. ಇದರ ಜೊತೆಗೆ ತೀರ್ಪುಗಾರರಿಗೂ ತರಬೇತಿ ನೀಡುತ್ತೇವೆ. ಈ ಎಲ್ಲಾ ಚಟುವಟಿಕೆಗಳು ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹ ಹೆಚ್ಚಿಸುತ್ತದೆ. ಮುಂದಿನ ದಿನ ಮಕ್ಕಳಲ್ಲಿ ಎಲ್ಲಾ ರೀತಿಯ ಬೆಳವಣಿಗೆಗೆ ಕಾರಣವಾಗಲಿದೆ ಎಂದು ವಾಲಿಬಾಲ್ ಸಂಸ್ಥೆಯ ಗೌರವಾಧ್ಯಕ್ಷರಾಗಿರುವ ಸುದಾನ ವಸತಿಯುತ ಶಾಲೆಯ ಸಂಚಾಲ ರೇ ವಿಜಯ ಹಾರ್ವೀನ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಶಂಕರ್ ಶೆಟ್ಟಿ ಪರಾರಿಗುತ್ತು, ತಾಲೂಕು ಸಂಸ್ಥೆಯ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಕಾರ್ಯದರ್ಶಿ ಬಾಬು ಮಾಸ್ತರ್ ಉಪಸ್ಥಿತರಿದ್ದರು.