ಇಡಬೆಟ್ಟು: ವಿವಾಹಿತ ಮಹಿಳೆಯ ದಿಗ್ಬಂಧನ ವಿಚಾರ – ಪತಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜ ಎಂಬಲ್ಲಿ ವಿವಾಹಿತ ಮಹಿಳೆಗೆ ದಿಗ್ಬಂಧನ ವಿಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ವಿರುದ್ಧ ದ.ಕ.ಮಹಿಳಾ ಪೊಲೀಸ್ ಠಾಣೆಯಲ್ಲಿ ಜ.4ರಂದು ಪ್ರಕರಣ ದಾಖಲಾಗಿದೆ.
ಮಹಿಳೆಯ ಅಣ್ಣ, ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ನಿವಾಸಿ ಲೋಕೇಶ್ ಎಂಬವರು ನೀಡಿದ ದೂರಿನ ಮೇರೆಗೆ ದ.ಕ.ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ತಂಗಿ ಆಶಾಲತಾರವರನ್ನು 11 ವರ್ಷದ ಹಿಂದೆ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಕರೆಜ್ಜ ನಿವಾಸಿ ಶ್ರೀಪತಿ ಹೆಬ್ಬಾರ್ ರವರಿಗೆ ಮದುವೆ ಮಾಡಿಕೊಟ್ಟಿದ್ದು, ಅವರಿಗೆ 9 ವರ್ಷದ ಹೆಣ್ಣು ಮಗಳು ಇರುವುದಾಗಿದೆ. ಆಶಾಲತಾರವರಿಗೆ ಮದುವೆಯಾಗಿ 2 ವರ್ಷದ ನಂತರ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದ್ದು, ಈ ಬಗ್ಗೆ ಗಂಡನ ಮನೆಯವರು ಹಾಗೂ ತಾಯಿ ಮನೆಯವರು ಔಷಧಿ ಮಾಡಿರುತ್ತಾರೆ. ಕಳೆದ 9 ವರ್ಷಗಳಿಂದ ಶ್ರೀಪತಿ ಹೆಬ್ಬಾರ್‌ರವರು ನಮ್ಮನ್ನು ಮನೆಗೆ ಬಾರದಂತೆ ಹಾಗೂ ನಮ್ಮೊಂದಿಗೆ ಆಶಾಲತಾರವರು ದೂರವಾಣಿ ಕರೆ ಮಾಡಿ ಮಾತನಾಡದಂತೆ ತಿಳಿಸಿರುವುದರಿಂದ ಸುಮಾರು 9 ವರ್ಷದಿಂದ ನನಗೂ, ತಂಗಿ ಆಶಾಲತಾರವರಿಗೂ, ಶ್ರೀಪತಿ ಹೆಬ್ಬಾರ್ ರವರಿಗೂ ಯಾವುದೇ ಸಂಪರ್ಕವಿರುವುದಿಲ್ಲ. ಹೀಗಿರುತ್ತಾ 02-೦1-2024 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ತಂಗಿಯನ್ನು ರಕ್ಷಣೆ ಮಾಡಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿರುವ ವಿಚಾರ ಮಾಧ್ಯಮದ ಮೂಲಕ 4-೦1-2024ರಂದು ತಿಳಿದು ಬಂದಿರುತ್ತದೆ. ಈ ಹಿನ್ನಲೆಯಲ್ಲಿ ನಾನು ಮತ್ತು ಅಣ್ಣ ಚಂದ್ರಶೇಖರರವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿ ತಂಗಿಯನ್ನು ನೋಡಿಕೊಂಡು ನಂತರ ಮಾಹಿತಿ ಪಡೆದುಕೊಂಡಿದ್ದೇವೆ. ಆರೋಪಿ ಶ್ರೀಪತಿ ಹೆಬ್ಬಾರ್‌ರವರು ಪತ್ನಿ ಆಶಾಲತಾರವರಿಗೆ ಸರಿಯಾಗಿ ಊಟ ತಿಂಡಿ ನೀಡದೇ , ಔಷಧಿ ಮಾಡದೇ ಅವಳು ಮಾನಸಿಕ ಅಸ್ವಸ್ಥಳಾಗಿರುವುದು ಕಂಡುಬಂದಿರುತ್ತದೆ ಎಂದು ಲೋಕೇಶ್ ಅವರು ಮಹಿಳಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಲೋಕೇಶ್ ಅವರು ನೀಡಿದ ದೂರಿನಂತೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: ೦2/2024 ಕಲಂ: 498(ಅ) IPC ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇಲಾಖೆ ಕಾರ್ಯಾಚರಣೆ:
ಆಶಾಲತಾ ಅವರನ್ನು ಅವರ ಮನೆ ಸಮೀಪದ ಕೊಠಡಿಯಲ್ಲಿ ದಿಗ್ಬಂಧನದಲ್ಲಿರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅನಾಮಧೇಯ ದೂರವಾಣಿ ಕರೆಯೊಂದು ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಇಲಾಖೆಯವರು ಜ.2ರಂದು ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ದಿಗ್ಬಂಧನಲ್ಲಿದ್ದು ನರಕಯಾತನೆ ಅನುಭವಿಸುತ್ತಿದ್ದ ಆಶಾಲತಾ ಅವರನ್ನು ರಕ್ಷಣೆ ಮಾಡಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

LEAVE A REPLY

Please enter your comment!
Please enter your name here