” ಶಿಬಿರವು ಸುಖ,ಶಾಂತಿ ಕರುಣಿಸುವ ಜ್ಯೋತಿಯಾಗಲಿ”- ಶಂಕರಿ ಪಟ್ಟೆ ಆಶಯ
ಪುತ್ತೂರು : ಜ್ಯೋತಿಯು ಅಂಧಕಾರವನ್ನು ದೂರವಿರಿಸಿದಂಥೆ , 15 ದಿನಗಳ ಕಾಲ ನಡೆಯುವ ಶಿಬಿರ ಕಾಯಿಲೆಯೆಂಬ ಕತ್ತಲೆಯಿಂದ ಎಲ್ಲರನ್ನೂ ಪಾರು ಮಾಡಿ , ಸುಖ , ಸೌಖ್ಯ ,ನೆಮ್ಮದಿ,ಶಾಂತಿ ತರುವಂಥಹ ಜ್ಯೋತಿಯಾಗಲಿಯೆಂದು ಪಟ್ಟೆ ವಿದ್ಯಾ ಸಂಸ್ಥೆ ಇದರ ನಿವೃತ್ತ ಮುಖ್ಯ ಗುರು ಶಂಕರಿ ಪಟ್ಟೆ ಆಶಯ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಬಡಗನ್ನೂರು ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಪುತ್ತೂರು ಇವುಗಳ ಸಹಯೋಗದೊಂದಿಗೆ ಜ.6 ರಂದು ಬಡಗನ್ನೂರು ಪಂಚಾಯತ್ ಸಭಾಂಗಣದಲ್ಲಿ ಪ್ರಾರಂಭಗೊಂಡ ಉಚಿತ ಪೂಟ್ ಫಲ್ಸ್ ಥೆರಪಿ ಶಿಬಿರದ ಉದ್ಘಾಟನೆಯನ್ನು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ ಮಾತನಾಡಿ ,”ಮಾನವ ಶರೀರ ದೊಡ್ಡದು , ಇದನ್ನು ಹಾಳುಮಾಡಬೇಡಿ ಹುಚ್ಚಪ್ಪಗಳಿರ ‘ ಎಂಬ ದಾಸರ ವಾಣಿಯಂತೆ ನಾವು ಬದುಕಿ ,ಬಾಳಬೇಕು. ಒತ್ತಡ ಹಾಗೂ ಮಧುಮೇಹವಿಲ್ಲದ ಜನ ತುಂಬಾ ವಿರಳವಾಗಿದ್ದು , ಈ ಶಿಬಿರವು ಪೂರಕವಾಗಿದೆ , ಅದೇ ರೀತಿ ಸಾವಿರಾರು ಮಂದಿ ಉಚಿತ ಶಿಬಿರದ ಪ್ರಯೋಜನ ಪಡೆದು , ಉತ್ತಮ ರೀತಿಯಲ್ಲಿ ಸಂಪನ್ನವಾಗಲಿಯೆಂದು ಹೇಳಿದರು.
ಅಧ್ಯಕ್ಷತೆಯನ್ನು ಬಡಗನ್ನೂರು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ಎಂ ವಹಿಸಿದರು. ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಇದರ ಮುಖ್ಯಸ್ಥರಾಗಿರುವ ಕೆ. ಪ್ರಭಾಕರ ಸಾಲ್ಯಾನ್ ನೀಡಿದರು. ಮಂಡಲ ಪಂಚಾಯತ್ ನ ಮಾಜಿ ಉಪ ಪ್ರಧಾನರಾದ ಬಾಲಕೃಷ್ಣ ರೈ ಕುದ್ಕಾಡಿ , ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಜ್ ರೈ ಪೇರಾಲು , ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡನ್ನೂರು , ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಯಜಮಾನ ಶ್ರೀಧರ ಪೂಜಾರಿ , ಬಡಗನ್ನೂರು ಪಂಚಾಯತ್ ಉಪಾಧ್ಯಕ್ಷೆ ಸುಶೀಲ ಪಿ ಶಿಬಿರದ ಯಶಸ್ಸಿಗೆ ಶುಭ ಕೋರಿದರು.