ಪುತ್ತೂರು: ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದ ಸಂದರ್ಭ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಎರಡೂ ಕಡೆಯವರು ನೀಡಿರುವ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಡಬ ತಾಲೂಕು ಬಳ್ಪ ಅಗೋಳಿಬೈಲುಗುತ್ತು ಮನೆ ಗಣೇಶ್ ರೈ(53 ವ.) ಎಂಬವರು ದೂರು ನೀಡಿ,ಕಡಬ ತಾಲೂಕು ಬಳ್ಪ ಗ್ರಾಮದ ಅಗೋಳಿ ಬೈಲು ಗುತ್ತು ಮನೆಯಲ್ಲಿ ತಾನು ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು,ಕೃಷಿ ಕೆಲಸವಾಗಿರುತ್ತದೆ. ಜ.7ರಂದು ನಾನು ಮತ್ತು ಹೆಂಡತಿ ವನಿತಾ ರೈ ತೋಟದಲ್ಲಿ ಅಡಿಕೆ ಕೊಯ್ಯುತ್ತಾ ಮತ್ತು ಬಿದ್ದಿರುವ ಅಡಿಕೆಯನ್ನು ಹೆಕ್ಕುತ್ತಾ ಇದ್ದೆವು. ನಮ್ಮ ತೋಟದ ಹತ್ತಿರ ವೆಂಕಪ್ಪ ಗೌಡ ಎಂಬವರ ಅಡಿಕೆ ತೋಟ ಸ್ವಲ್ಪ ಎತ್ತರದಲ್ಲಿದ್ದು ಕೆಳಗೂ ಅವರ ತೋಟವಿದೆ. ನಮ್ಮ ಅಡಿಕೆ ಮರದಿಂದ ವೆಂಕಪ್ಪ ಗೌಡರವರ ತೋಟಕ್ಕೆ ಅಡಿಕೆ ಬೀಳುತ್ತಾ ಇದ್ದು ತಾನು ಮತ್ತು ಹೆಂಡತಿ, ವೆಂಕಪ್ಪ ಗೌಡರ ತೋಟದ ಬದಿಯಲ್ಲಿ ಬಿದ್ದಿರುವ ಅಡಿಕೆಯನ್ನು ಹೆಕ್ಕುತ್ತಿರುವಾಗ ವೆಂಕಪ್ಪ ಗೌಡ ಮತ್ತು ಅವರ ತಂಗಿ ಉಷಾ ಎಂಬವರು ಅವಾಚ್ಯವಾಗಿ ಬೈಯ್ಯುತ್ತಾ ಬಂದು ವೆಂಕಪ್ಪ ಗೌಡರು ದೊಣ್ಣೆಯಿಂದ ನನ್ನ ಹಣೆಗೆ ಹೊಡೆದಿರುತ್ತಾರೆ. ಹೆಂಡತಿ ವನಿತಾ ರೈ ಬಿಡಿಸಲು ಬಂದಾಗ ವೆಂಕಪ್ಪ ಗೌಡರು ಅದೇ ದೊಣ್ಣೆಯಿಂದ ಆಕೆಯ ಬೆನ್ನಿಗೆ ಹೊಡೆದಿರುತ್ತಾರೆ.ಅಲ್ಲದೇ ಉಷಾರವರು ನಮಗೆ ಕೈಯಿಂದ ಹೊಡೆದಿರುತ್ತಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಕಲಂ 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಇದೇ ಘಟನೆಗೆ ಸಂಬಂಧಿಸಿ ಕಡಬ ತಾಲೂಕು ಕೇನ್ಯ ಗ್ರಾಮದ ಅಗೋಳಿಬೈಲು ವೆಂಕಪ್ಪ ಗೌಡ(52 ವ.)ಎಂಬವರು ಪೊಲೀಸರಿಗೆ ದೂರು ನೀಡಿ, ಕೇನ್ಯ ಗ್ರಾಮದ ಅಗೋಳಿ ಬೈಲು ಮನೆಯಲ್ಲಿ ತಂಗಿ ಉಷಾ ಮತ್ತು ಆಕೆಯ ಮಗನೊಂದಿಗೆ ನಾನು ವಾಸವಾಗಿದ್ದು ಕೃಷಿ ಕೆಲಸವಾಗಿರುತ್ತದೆ. ನಮ್ಮ ಮನೆಯ ಹತ್ತಿರ ಗಣೇಶ್ ರೈ ಎಂಬವರು ವಾಸವಾಗಿದ್ದು ನಮ್ಮ ಜಮೀನು ಪಕ್ಕದಲ್ಲಿ ಅವರ ಅಡಿಕೆ ತೋಟ ಕೂಡಾ ಇದೆ. ಜ.7ರಂದು ನಾನು ಮತ್ತು ತಂಗಿ ಉಷಾ ತೋಟದಲ್ಲಿರುವಾಗ ಆರೋಪಿಗಳಾದ ಗಣೇಶ್ ರೈ ಮತ್ತು ವನಿತಾ ರೈ ಎಂಬವರು ಅವರ ತೋಟದಿಂದ ಬಿದ್ದ ಅಡಿಕೆಯನ್ನು ಹೆಕ್ಕುತ್ತಿದ್ದಾಗ ನಾನು ಮತ್ತು ತಂಗಿ ಹೋಗಿ,ನೀವು ನಮ್ಮ ತೋಟಕ್ಕೆ ಬರಬೇಡಿ ಎಂದು ತಿಳಿಸಿದಾಗ ಗಣೇಶ್ ರೈ ಮತ್ತು ಅವರ ಹೆಂಡತಿ ವನಿತಾ ರೈ, ನೀವು ಯಾರು ನಮ್ಮ ಕೇಳಲಿಕ್ಕೆ ಎಂದು ಅವಾಚ್ಯವಾಗಿ ಬೈಯ್ಯುತ್ತಾ ನಮಗೆ ದೊಣ್ಣೆಯಿಂದ ಹೊಡೆದು ಜೀವ ಬೆದರಿಕೆ ಒಡ್ಡಿರುತ್ತಾರೆಎಂದು ಆರೋಪಿಸಿದ್ದಾರೆ.ಈ ಬಗ್ಗೆ ಸುಬ್ರಹ್ಮಣ್ಯ ಠಾಣೆ ಪೊಲೀಸರು ಕಲಂ 323, 324, 504, 506 ಜೊತೆಗೆ 34ಐಪಿಸಿಯಂತೆ ಪ್ರಕರಣ ದಾಖಲಿಕೊಂಡಿದ್ದಾರೆ.