ಪುತ್ತೂರು: ನೆಟ್ಟಣಿಗೆಮುಡ್ನೂರು ಸುರುಳಿಮೂಲೆ ಎಂಬಲ್ಲಿ ತಂಡವೊಂದು ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮನೆಯಲ್ಲಿದ್ದ ವ್ಯಕ್ತಿಗೆ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿರುವ ಕುರಿತು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಬಗ್ಗೆ ನೆಟ್ಟಣಿಗೆಮುಡ್ನೂರು ಗ್ರಾಮದ ಸುರುಳಿಮೂಲೆ ಮಹಮ್ಮದ್ ಕುಂಞಿ ಎಂಬವರ ಮಗ ಅಬ್ದುಲ್ ನಾಸೀರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.”ಜ.07ರಂದು ಬೆಳಗ್ಗಿನ ಜಾವ ತನಗೆ ಪರಿಚಯದ ಆರೋಪಿಗಳಾದ ಸಿದ್ದೀಕ್ ನೇರೋಳ್ತಡ್ಕ, ಸುರುಳಿಮೂಲೆ ಮಸೀದಿ ಬಳಿಯ ನಿವಾಸಿ ಸಾಡು ಸಿದ್ದೀಕ್, ಮಂಗಳೂರಿನ ಬಜಾಲ್ ನಿವಾಸಿ ಸಬೀನಾ ಮತ್ತು ತನಗೆ ಪರಿಚಯ ಇಲ್ಲದ ಓರ್ವ ವ್ಯಕ್ತಿ ಕಾರೊಂದರಲ್ಲಿ ನನ್ನ ಮನೆಗೆ ಬಂದು ಬಾಗಿಲು ಬಡಿದರು.ಮಲಗಿದ್ದ ನಾನು ಎದ್ದು, ನೀವು ಯಾಕೆ ಈಗ ಬಂದದ್ದು ಎಂದು ಕೇಳಿದಾಗ ಮಲಯಾಳಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು,ಕಬ್ಬಿಣದ ರಾಡ್ನಿಂದ ಮನೆಯ ಕಿಟಕಿಯ ಗ್ಲಾಸಿಗೆ ಹೊಡೆದು ಗ್ಲಾಸನ್ನು ಹುಡಿ ಮಾಡಿ ಬಾಗಿಲನ್ನು ದೂಡಿ ಅಕ್ರಮವಾಗಿ ಮನೆಯ ಒಳಗೆ ಪ್ರವೇಶ ಮಾಡಿ ನನ್ನ ತಮ್ಮ ಸಿದ್ದೀಕ್ಗೆ, ಆರೋಪಿ ಸಿದ್ದೀಕ್ ಎಂಬಾತ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿರುತ್ತಾನೆ.ಹಲ್ಲೆಯ ಬಗ್ಗೆ ನನ್ನ ತಂಗಿ ಪ್ರಶ್ನಿಸಿದಾಗ, ಆರೋಪಿ ಸಿದ್ದಿಕ್ ತನ್ನ ಕೈಯಿಂದ ಹಲ್ಲೆ ನಡೆಸಿರುತ್ತಾನೆ.ನಂತರ ಮತ್ತೋರ್ವ ಆರೋಪಿ ಸಾಡು ಸಾದಿಕ್ ಕೈಯಿಂದ ನನಗೆ ಹಲ್ಲೆ ನಡೆಸಿರುತ್ತಾನೆ.ಆರೋಪಿತೆ ಸಬೀನಾ ನನಗೆ ಜೀವ ಬೆದರಿಕೆ ಒಡ್ಡಿದ್ದು, ನಂತರ ನೆರೆಕರೆಯವರು ಬರುವುದನ್ನು ನೋಡಿ ಆರೋಪಿಗಳು ಬಂದ ಕಾರಿನಲ್ಲಿ ಹೋಗಿರುತ್ತಾರೆ” ಎಂದು ಅಬ್ದುಲ್ ನಾಸೀರ್ ಅವರು ದೂರಿನಲ್ಲಿ ತಿಳಿಸಿದ್ದಾರೆ.ಘಟನೆ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಕಲಂ 448,323,324,427,504,506 R/W 34 IPC ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.