ನರೇಂದ್ರ ಪ.ಪೂ. ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಪ್ರೇರಣಾ-2025

0

ಪುತ್ತೂರು: ವಿದ್ಯಾರ್ಥಿ ಸಾಧಕನಾಗಬೇಕಾದರೆ ಒಳ್ಳೆಯ ಹವ್ಯಾಸಗಳ ಜೊತೆಗೆ ಕ್ರಿಯಾಶೀಲರಾಗಿ ಅಭ್ಯಾಸದ ಕಡೆ ಗಮನ ಹರಿಸಿದರೆ ಮಾತ್ರ ಉತ್ತಮ ಭವಿಷ್ಯತ್ತಿಗೆ ನಾಂದಿಯಾಗುತ್ತದೆ. ಈ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿ ಸಾಗಿಸಬೇಕು ಎಂದು ಬೆಟ್ಟಂಪಾಡಿ ಪ್ರಿಯದರ್ಶಿನಿ ಪ್ರೌಢಶಾಲೆಯ ಶಿಕ್ಷಕ ಪ್ರಶಾಂತ್ ಹೇಳಿದರು.


ನರೇಂದ್ರ ಪ.ಪೂ.ಕಾಲೇಜಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಪ್ರೇರಣಾ-2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳಿಗೆ ಹೊಸ ಜಗತ್ತಿನ ನಿಯಮಗಳ ಪರಿಚಯ ಮಾಡುವ ಜೊತೆಗೆ ಸೂಕ್ತ ಜ್ಞಾನ ನೀಡುವುದು ಅವಶ್ಯಕವಾಗಿದೆ. ಇಂದಿನ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಪರಿವರ್ತನೆ ತಂದು ಕಲಿಕೆಯಲ್ಲಿ ಆಸಕ್ತಿ ಮೂಡಿಸವಂತೆ ಮಾಡುತ್ತದೆ. ಸಮಾಜಕ್ಕೆ ಒಬ್ಬ ಪರಿಣಿತ ಶಕ್ತಿಯಾಗಿ ಬದುಕು ಸಾಗಿಸಬೇಕು ಎಂದು ಹೇಳಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್ ನಾಯಕ್ ರವರು ಮಾತನಾಡುತ್ತಾ, ಇಂತಹ ಕಾರ‍್ಯಾಗಾರಗಳು ವಿದ್ಯಾರ್ಥಿಗಳನ್ನು ರಚನಾತ್ಮಕ ಕಾರ‍್ಯಗಳಲ್ಲಿ ಪ್ರೇರೇಪಿಸುತ್ತದೆ. ಅಂಕಗಳೊಂದಿಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನ ಸಂಪನ್ನರಾಗಿ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.


ವಿದ್ಯಾರ್ಥಿಗಳಿಗೆ ಆಕರ್ಷಕ ಮೋಜಿನ ಆಟಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಆಡಿಸಿದರು. ಭೌತಶಾಸ್ತ್ರ , ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಇತರ ವಿಜ್ಞಾನ ಪ್ರಯೋಗಗಳ ವೀಕ್ಷಣೆ ಕಾಲೇಜಿನ ಪ್ರಯೋಗಾಲಯಗಳಲ್ಲಿ ನಡೆಯಿತು. ಈ ಕಾರ್ಯಾಗಾರಕ್ಕೆ ಅಭೂತ ಪೂರ್ವ ಸ್ಪಂದನೆ ವ್ಯಕ್ತವಾಯಿತು. ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪ್ರತೀ ವರ್ಷವು ಇಂತಹ ಅವಕಾಶ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗಲಿ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ಶಿಕ್ಷಕರಾದ ಗೀತಾ ರೈ, ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಲೋಚನಾ ಸ್ವಾಗತಿಸಿ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸಿಂಧು ಸರಳಾಯ ವಂದಿಸಿದರು.

LEAVE A REPLY

Please enter your comment!
Please enter your name here