ಪುತ್ತೂರು: ಶ್ರೀರಾಮ ಕಥಾ ವೈಭವ ಸಾಂಸ್ಕೃತಿಕ ಸಮಿತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳಾದ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯ, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್, ನರೇಂದ್ರ ಪದವಿ ಪೂರ್ವ ಕಾಲೇಜು, ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಜ.14 ರಂದು ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ಪುತ್ತೂರಿನ ತೆಂಕಿಲದ ವಿವೇಕ ನಗರದಲ್ಲಿ ವೈಭವದ ಅಯೋಧ್ಯೆಯ ಸಮಗ್ರ ಕಥನವನ್ನು ಪ್ರಸ್ತುತಪಡಿಸುವ `ಶ್ರೀರಾಮ ಕಥಾ ವೈಭವ’ ಕಾರ್ಯಕ್ರಮ ನಡೆಯಲಿದೆ ಎಂದು ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಬಲರಾಮ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶ್ರೀರಾಮ ಪುರಾಣ ಅಲ್ಲ ಇದು ಚರಿತ್ರೆ ಇದನ್ನು ಮಕ್ಕಳಿಗೆ ಮನದಟ್ಡು ಮಾಡುವುದು. ರಾಮನ ಚರಿತ್ರೆ ಕಾಲ್ಪಾಣಿಕ ಅಲ್ಲ ಸತ್ಯ ಘಟನೆ ಎಂಬುದು ಅರಿವು ಮೂಡಿಸಬೇಕು ಎಂಬ ಕಾರ್ಯಕ್ರಮದೊಂದಿಗೆ ಸುಮಾರು 3 ಗಂಟೆಗಳ ಕಾಲ ನಡೆಯುವ ಕಥಾ ವೈಭವ ವಿಶೇಷವಾಗಿ ಮೂಡಿ ಬರಲಿದೆ. ಆರಂಭದಲ್ಲಿ ಕಥಾ ವೈಭವ ನಡೆಯುತ್ತದೆ. ನಡುವೆ ಚುಟುಕಾದ ಸಭಾಕಾರ್ಯಕ್ರಮ ನಡೆಯಲಿದೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ದೀಪ ಪ್ರಜ್ವಲನೆಗೈದು ಚಾಲನೆ ನೀಡಲಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ಮಂಗಳೂರು ಉತ್ತರದ ಡಾ.ವೈ. ಭರತ್ ಶೆಟ್ಟಿ, ಬೆಳ್ತಂಗಡಿಯ ಹರೀಶ್ ಪೂಂಜಾ, ಬೈಂದೂರಿನ ಗುರುರಾಜ್ ಗಂಟೆಹೊಳೆ, ಸುಳ್ಯದ ಭಾಗೀರಥಿ ಮುರುಳ್ಯ, ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಬರೋಡಾದ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ, ಭಾರತ್ ಕೊ-ಅಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಬಿಜೆಪಿ ದಕ್ಷಿಣ, ಮುಂಬೈಯ ಪ್ರಧಾನ ಕಾರ್ಯದರ್ಶಿ ವಿಜಯ ಶೆಟ್ಟಿ ಪಣಕಜೆ, ಅದಾನಿ ಗ್ರೂಪ್ ಕರ್ನಾಟಕದ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕ ಕಿಶೋರ್ ಆಳ್ವ, ಬೆಂಗಳೂರಿನ ಉದ್ಯಮಿ ಕಿರಣ್‌ಚಂದ್ರ ಡಿ., ದೈವ ನರ್ತಕರು ಮತ್ತು ಸಿವಿಲ್ ಇಂಜಿನಿಯರ್ ಡಾ. ರವೀಶ್ ಪಡುಮಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ರಾಮಾಯಣ ಭಾರತೀಯರ ಮಹಾಕಾವ್ಯ:
ರಾಮಾಯಣ ಭಾರತೀಯರ ಮಹಾ ಕಾವ್ಯ. ಇದು ರಾಮನ ಇತಿಹಾಸವನ್ನು ಹೇಳುವುದರೊಂದಿಗೆ ತ್ರೇತಾಯುಗದಲ್ಲಿ ಜನಿಸಿದ ಶ್ರೀರಾಮನ ಬದುಕು ಇಂದಿಗೂ ಭಾರತೀಯರ ಜೀವನ ಶೈಲಿಯ ಮೇಲೆ ಅಳವಾದ ಪ್ರಭಾವ ಬೀರುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಆತನ ಅತ್ಯುನ್ನತ ಆದರ್ಶಗಳು, ನಡೆದು ಬಂದ ದಾರಿ, ನಂಬಿದ ಧರ್ಮ ಮತ್ತು ಆತನಲ್ಲಿರುವ ಗುಣ ಲಕ್ಷಣಗಳು ಆತನನ್ನು ದೇವರ ಅವತಾರವನ್ನಾಗಿ ಮಾಡಿತು. ಶ್ರೀರಾಮ ಭಾರತದ ಆತ್ಮ. ಅದು ಜೀವನ ಮೌಲ್ಯಗಳ ಪ್ರತಿರೂಪ. ರಾಮ ಕಥಾ ವೈಭವ ಪ್ರಸ್ತುತಿಯ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ರಾಷ್ಟ್ರ ಮಂದಿರದ ಉಗಮದ ಮಹಾಸಂಕಲ್ಪ ಪೂರ್ಣವಾಗುವ ರಾಷ್ಟ್ರ ಯಜ್ಞವಾಗಿದೆ ಎಂದು ಶ್ರೀರಾಮಕಥಾ ವೈಭವದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಿಶೋರ್ ಬೊಟ್ಯಾಡಿ ಅವರು ತಿಳಿಸಿದರು.
3 ಗಂಟೆ 3 ವೇದಿಕೆಯಲ್ಲಿ ಕಥಾ ವೈಭವ:
ಶ್ರೀರಾಮ ಕಥಾ ವೈಭವ ಹಾಗೂ ಶ್ರೀರಾಮ ಜನ್ಮಭೂಮಿ ಯಶೋಗಾಥೆ ಅಂದು-ಇಂದು-ಎಂದೆಂದೂ ಶ್ರೀರಾಮ, ಶ್ರೀರಾಮ ಕಥಾ ವೈಭವದ ಒಂದನೇ ಭಾಗ, ರಾಮ ನಾಮ ವ್ಯಾಹರಣ, ವಾಲ್ಮೀಕಿ ಮಹರ್ಷಿಗಳು ಗಳಿಸಿದ ದಿವ್ಯ ಶಕ್ತಿ, ಕ್ರೌಂಚ ಮಿಥುನವನ್ನು ಕಂಡು ಹೊರ ಹೊಮ್ಮಿದ ಶಾಪ ವಾಕ್ಯ, ಮಾನಿಷಾದ ಶ್ಲೋಕದ ಉತ್ಪತ್ತಿ, ರಾಮಾಯಣ ಮಹಾಕಾವ್ಯಕ್ಕೆ ಮೂಲಧಾತು, ವಾಲ್ಮೀಕಿ ಆದಿ ಕವಿಯಾದ ಬಗೆ, ರಾಮ ಚರಿತೆ, ಪುತ್ರ ಕಾಮೇಷ್ಠಿ, ಯಜ್ಞ ಸಂರಕ್ಷಣೆ, ತಾಟಕೀ ಸಂಹಾರ ಮತ್ತಿತರ ಯಶೋಗಾಥೆಯನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ. ವಿವೇಕಾನಂದದ ಎಲ್ಲಾ ವಿದ್ಯಾಸಂಸ್ಥೇಗಳಿಂದ ಒಟ್ಟು ಸುಮಾರು 300 ರಿಂದ 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಅಭಿಯನ ಮಾಡಲಿದ್ದಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ರೂಪಲೇಖ ಅವರು ಹೇಳಿದರು.
500 ವರ್ಷಗಳ ಹೋರಾಟದ ಭಾಗ:
ಮೂರು ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಒಂದು ವೇದಿಕೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಹೋರಾಟದ ಇತಿಹಾಸ ಪ್ರದರ್ಶನಗೊಳ್ಳಲಿದೆ ಎಂದು ಶ್ರೀರಾಮಕಥಾ ವೈಭವದ ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಬಲರಾಮ ಆಚಾರ್ಯ ತಿಳಿಸಿದರು.
ಫೋಟೋ ವೇದಿಕೆ, ಫುಡ್ ಕೋರ್ಟ್:
ಕಾರ್ಯಕ್ರಮಕ್ಕೆ ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯನ ವೇಷಧರಿಸಿಕೊಂಡು ಸಾರ್ವಜನಿಕ ಹಿರಿಯ, ಕಿರಿಯರು ಆಗಮಿಸಬಹುದು. ವೇಷಧರಿಸಿದವರು ಫೋಟೋ ವೇದಿಕೆಯಲ್ಲಿ ತಮ್ಮ ಭಂಗಿಯಲ್ಲಿ ನಿಂತಿರುವ ಫೋಟೋ ಕ್ಲಿಕ್ಕಿಸಬಹುದು. ವೇದಿಕೆಯಲ್ಲಿ ಅಯೋಧ್ಯೆ ಶ್ರೀ ರಾಮಮಂದಿರದ ಮಾದರಿ ಚಿತ್ರವಿರಲಿದೆ. ಹೀಗೆ ಕ್ಲಿಕ್ಕಿಸಿಕೊಂಡ ತಮ್ಮ ಚಿತ್ರಕ್ಕೆ ವಿಶೇಷ ಬಹುಮಾನ ಯೋಜನೆ ಮಾಡಲಾಗಿದೆ. ಇದರ ಜೊತೆಗೆ ಮೈದಾನದ ಒಂದು ಬದಿಯಲ್ಲಿ ಆಹಾರ ಖಾದ್ಯಕ್ಕೆ ಅವಕಾಶ ನೀಡಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದಾಮೋದರ್ ಪಾಟಾಳಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಧಾನ ಕಾರ್ಯದರ್ಶಿ ಎಸ್. ದಾಮೋದರ ಪಾಟಾಳಿ, ಉಪಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ರೂಪಲೇಖ ಉಪಸ್ಥಿತರಿದ್ದರು.