ಕಡಬ: ಶಾಸಕರಿಂದ ಸಾರ್ವಜನಿಕ ಅಹವಾಲು ಸ್ವೀಕಾರ-ಅಭಿವೃದ್ಧಿ ಕೆಲಸಗಳ ಕುರಿತು ಅಧಿಕಾರಿಗಳ ಸಭೆ

0

ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಡಬ ತಾಲೂಕು ಆಡಳಿತ ಸೌಧದಲ್ಲಿನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಭಿವೃದ್ಧಿ ಕೆಲಸಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದರು.


ಅಕ್ರಮ ಸಕ್ರಮ ಮಂಜೂರು, ಗ್ರಾಮೀಣ ರಸ್ತೆಗಳಿಗೆ ಅನುದಾನ ಸೇರಿದಂತೆ ಹಲವು ಸಾರ್ವಜನಿಕ ಬೇಡಿಕೆಗಳ ಬಗ್ಗೆ ಹಾಗೂ ವೈಯಕ್ತಿಕ ಬೇಡಿಕೆಗಳ ಬಗ್ಗೆಯೂ ಜನರು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿ ಪರಿಶೀಲಿಸಿದ ಶಾಸಕರು ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಪ್ರಭಾಕರ ಖಜೂರೆ ಹಾಗೂ ಉಪ ತಹಶೀಲ್ದಾರ್ ಮನೋಹರ್ ಕೆ.ಟಿ. ಕಂದಾಯ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳ ಕುರಿತು ಶಾಸಕರಿಗೆ ಪೂರಕ ಮಾಹಿತಿಗಳನ್ನು ನೀಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಎಪಿಎಂಸಿ ಮಾಜಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಕೊಂಬಾರು ಗ್ರಾ.ಪಂ. ಅಧ್ಯಕ್ಷ ಮಧುಸೂದನ ಓಡೋಳಿ, ನೂಜಿಬಾಳ್ತಿಲ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಶೇಖರ ಹಳೆನೂಜಿ, ರವಿಪ್ರಸಾದ್ ಶೆಟ್ಟಿ ನೆಲ್ಯಾಡಿ ಮುಂತಾದವರು ಉಪಸ್ಥಿತರಿದ್ದರು.

ಬಲ್ಯದಲ್ಲಿ ಅರಣ್ಯ ಇಲಾಖೆಯಿಂದ ಸರ್ವೆ ಕಸ್ತೂರಿರಂಗನ್ ವರದಿ ಜಾರಿ ಸಂಬಂಧವಲ್ಲ:
ಕುಟ್ರುಪ್ಪಾಡಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಬಲ್ಯ ಗ್ರಾಮದಲ್ಲಿ ಮೀಸಲು ಅರಣ್ಯದ ಸುತ್ತಮುತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಸರ್ವೆ ಕಾರ್ಯ ನಡೆಸುತ್ತಿದ್ದು, ಕಸ್ತೂರಿ ರಂಗನ್ ವರದಿ ಜಾರಿಯ ಹಿನ್ನೆಲೆಯಲ್ಲಿ ಸರ್ವೆ ನಡೆಸಲಾಗುತ್ತಿದೆ ಎನ್ನುವ ಭೀತಿಯಿರುವುದಾಗಿ ಸ್ಥಳೀಯರ ನಿಯೋಗವು ಶಾಸಕರನ್ನು ಭೇಟಿಯಾಗಿ ಆತಂಕ ತೋಡಿಕೊಂಡ ಘಟನೆ ನಡೆಯಿತು. ಕೂಡಲೇ ಶಾಸಕರು ಅರಣ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆ ಬಗ್ಗೆ ಮಾಹಿತಿ ಪಡೆದುಕೊಂಡರು. ಕಸ್ತೂರಿ ರಂಗನ್ ವರದಿಗೂ ಪ್ರಸ್ತುತ ನಡೆಯುತ್ತಿರುವ ಸರ್ವೆ ಕಾರ್ಯಕ್ಕೂ ಯಾವುದೇ ಸಂಬಂಧವಿಲ್ಲ.ಅರಣ್ಯ ಪ್ರದೇಶದ ಸರ್ವೆ ನಡೆಸಿ ಮೀಸಲು ಅರಣ್ಯದ ಗಡಿಗಳನ್ನು ಗುರುತಿಸಿಕೊಳ್ಳುವ ಪ್ರಕ್ರಿಯೆ ಇಲಾಖೆಯಿಂದ ನಡೆಯುತ್ತಿರುವುದಾಗಿ ಅಧಿಕಾರಿಗಳು ಶಾಸಕರಿಗೆ ವಿವರಿಸಿದರು. ಆ ಮಾಹಿತಿಯನ್ನು ಶಾಸಕರು ಗ್ರಾಮಸ್ಥರಿಗೆ ಮನವರಿಕೆ ಮಾಡುವ ಮೂಲಕ ಆತಂಕ ನಿವಾರಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್., ಕುಟ್ರುಪ್ಪಾಡಿ ಗ್ರಾ.ಪಂ. ಉಪಾಧ್ಯಕ್ಷೆ ವಾಣಿನಾಗೇಶ್, ಸದಸ್ಯೆ ಮೀನಾಕ್ಷಿ ನೆಲ್ಲ, ಮಾಜಿ ಸದಸ್ಯ ಶಿವಪ್ರಸಾದ್ ರೈ ಮೈಲೇರಿ, ಕೃಷಿಕ ಗಣೇಶ್ ಭಟ್ ದೇವತ್ತಡ್ಕ ನಿಯೋಗದಲ್ಲಿದ್ದರು.

LEAVE A REPLY

Please enter your comment!
Please enter your name here