ದಾನ ಮಾಡುವ ಮನಸ್ಸು ನಮ್ಮದಾಗಲಿ-ಕಬೀರ್ ಬಾಖವಿ
ಪುತ್ತೂರು: ಬಡವರ ಪರವಾಗಿ ಚಿಂತಿಸುವ ಮತ್ತು ಅವರಿಗೆ ಸಹಾಯ ಮಾಡುವ ಮನಸ್ಸು ನಮ್ಮದಾಗಬೇಕು. ಸಂಪತ್ತು ಇರುವವರು ದಾನ ಮಾಡಲೇಬೇಕು, ಬಡ ಹೆಣ್ಮಕ್ಕಳ ಮದುವೆ ಕಾರ್ಯಕ್ಕೆ ಸಹಕಾರ ನೀಡುವುದು ಅತ್ಯಂತ ಪುಣ್ಯದ ಕಾರ್ಯ ಎಂದು ಖ್ಯಾತ ಪ್ರಭಾಷಣಗಾರ ಅಹ್ಮದ್ ಕಬೀರ್ ಬಾಖವಿ ಹೇಳಿದರು.
ಅವರು ಸವಣೂರು ಚಾಪಳ್ಳ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಇದರ ಬೆಳ್ಳಿ ಹಬ್ಬದ ಅಂಗವಾಗಿ ಬಡ, ಯತೀಂ ಹೆಣ್ಮಗಳ ಮದುವೆ ಸಹಾಯಾರ್ಥವಾಗಿ ಜ.೯ರಂದು ಚಾಪಳ್ಳ ಮಸೀದಿ ವಠಾರದಲ್ಲಿ ನಡೆದ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಅವರು ಮುಖ್ಯ ಪ್ರಭಾಷಣ ನಡೆಸಿದರು.
ನಮ್ಮ ಆಯಸ್ಸು ದಿನೇ ದಿನೇ ಕಡಿಮೆಯಾಗುತ್ತಿದ್ದು ಮರಣದತ್ತ ಹತ್ತಿರವಾಗುತ್ತಿದ್ದೇವೆ ಎನ್ನುವ ಚಿಂತನೆ ನಮ್ಮಲ್ಲಿರಬೇಕು, ಹುಟ್ಟಿದ ಮನುಷ್ಯನಿಗೆ ಮರಣ ನಿಶ್ಚಿತ, ಅದರ ಮಧ್ಯೆ ನಾವು ಮಾಡುವ ಸತ್ಕರ್ಮಗಳು ಮಾತ್ರ ನಮಗೆ ಶಾಶ್ವತ, ಮರಣ ನಮ್ಮನ್ನು ಹಿಂಬಾಲಿಸುತ್ತಿರುವಾಗ ಜೀವಿಸುವ ಸಣ್ಣ ಅವಧಿಯಲ್ಲಿ ಒಳ್ಳೆಯವರಾಗಿ ಜೀವನ ನಡೆಸಬೇಕು ಎಂದು ಅವರು ಹೇಳಿದರು.
ಯುವ ಸಮೂಹ ಬಡವರ ಪರ ಚಿಂತನೆ ನಡೆಸಬೇಕು-ಎಂ.ಎಸ್
ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮುಹಮ್ಮದ್ ಮಾತನಾಡಿ ಯುವ ಸಮೂಹ ಸಮಾಜದಲ್ಲಿರುವ ಬಡವರ, ನೊಂದವರ ಪರ ಚಿಂತನೆ ನಡೆಸುವುದು ಅಗತ್ಯವಾಗಿದ್ದು ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೇ ಒಳಿತಿನ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದು ಹೇಳಿದರು. ಸಂಘಟನೆ ಪ್ರಾರಂಭಿಸುವುದು ಸುಲಭ ಆದರೆ ಮುಂದುವರಿಸುವುದು ಕಷ್ಟ, ಈ ನಿಟ್ಟಿನಲ್ಲಿ ಚಾಪಳ್ಳದ ಅಲ್‌ನೂರ್ ಮುಸ್ಲಿಂ ಯೂತ್ ಫೆಡರೇಶನ್ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಾನ ವಿಪತ್ತುಗಳಿಂದ ಸಂರಕ್ಷಿಸುತ್ತದೆ-ಹಾದಿ ತಂಙಳ್
ಕಾರ್ಯಕ್ರಮ ಉದ್ಘಾಟಿಸಿದ ಅಸ್ಸಯ್ಯದ್ ಹಾಮಿದುಲ್ ಹಾದಿ ತಂಙಳ್ ಮಂಜೇಶ್ವರ ಮಾತನಾಡಿ ಶ್ರೀಮಂತರು, ಉಳ್ಳವರು ದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ದಾನ ಮಾಡುವುದರಿಂದ ಹಲವು ವಿಪತ್ತುಗಳಿಂದ ನಾವು ರಕ್ಷೆ ಹೊಂದಬಹುದಾಗಿದೆ ಎಂದು ಹೇಳಿ ಸವಣೂರಿನ ಯುವಕರ ಸಾಮಾಜಿಕ ಕಳಕಳಿಗೆ ಅಭಿನಂದನೆ ಸಲ್ಲಿಸಿದರು.
ಅಲ್‌ನೂರ್ ಬಡವರ ಪರ ಕೆಲಸ ಮಾಡುತ್ತಿದೆ-ಅಶ್ರಫ್ ಬಾಖವಿ
ಪ್ರಾಸ್ತಾವಿಕವಾಗಿ ಮಾತನಾಡಿದ ಚಾಪಳ್ಳ ಮುದರ್ರಿಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿ ಮಾತನಾಡಿ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಸಂಘಟನೆ ಹಾದೀ ತಂಙಳ್ ನೇತೃತ್ವದಲ್ಲಿ 25 ವರ್ಷಗಳ ಹಿಂದೆ ಇಲ್ಲಿ ಸ್ಥಾಪಿಸಿದ್ದು ಬಡವರ, ಸಂಕಷ್ಟದಲ್ಲಿರುವವರ ಪರ ಕೆಲಸ ಮಾಡುತ್ತಿದೆ. ಇದು ಸಂತಸದ ವಿಚಾರ ಎಂದು ಹೇಳಿದರು.
ಅಲ್‌ನೂರ್ ಬಡವರ ಕಣ್ಣೀರೊರೆಸುವ ಕಾರ್ಯ ಮಾಡುತ್ತಿದೆ-ರಫೀಕ್ ಎಂ.ಎ
ಸ್ವಾಗತಿಸಿದ ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ರಫೀಕ್ ಎಂ.ಎ ಮಾತನಾಡಿ ಕಳೆದ 25 ವರ್ಷಗಳ ಹಿಂದೆ ಪ್ರಾರಂಭಗೊಂಡ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸಕ್ರಿಯವಾಗಿದ್ದು ಬಡವರ, ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಕರಾವಳಿ ಬಿಲ್ಡರ‍್ಸ್‌ನ ರಫೀಕ್ ಎಂ.ಕೆ ಹಾಗೂ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಮಾತನಾಡಿ ಶುಭ ಹಾರೈಸಿದರು.ಚಾಪಳ್ಳ ಬಿಜೆಎಂ ಅಧ್ಯಕ್ಷ ಮುಹಮ್ಮದ್ ಹಾಜಿ ಕಣಿಮಜಲು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪ್ರಮುಖರಾದ ಮಮ್ಮಾಲಿ ಹಾಜಿ ಬೆಳ್ಳಾರೆ, ಯೂಸುಫ್ ಹಾಜಿ ಕೈಕಾರ, ತಾಜುದ್ದೀನ್ ಫೈಝಿ, ಸಿದ್ದೀಕ್ ಮುಸ್ಲಿಯಾರ್, ಬಾತಿಷ ಹಾಜಿ ಪಾಟ್ರಕೋಡಿ, ರಫೀಕ್ ಗಡಿಯಾರ, ಇಸ್ಮಾಯಿಲ್ ಟಾಸ್ಕೋ, ಪುತ್ತುಬಾವ ಹಾಜಿ, ಉಮ್ಮರ್ ಹಾಜಿ ಕೆನರಾ, ಹಂಝ ಅತ್ತಿಕೆರೆ, ಮುಹಮ್ಮದ್ ಹಾಜಿ ಕುಂಜೂರು, ನಝೀರ್ ಮುಂಡತ್ತಡ್ಕ, ಮುಹಮ್ಮದ್ ಹಾಜಿ ಬಸ್ತಿ, ಮಹಮ್ಮದ್ ಬಿ.ಎಂ, ಉಮ್ಮರ್ ಕೆ.ಎಂ, ಸಮದ್ ಸೋಂಪಾಡಿ, ಶರೀಫ್ ಚಾಪಳ್ಳ, ಫೈಝಲ್ ಕಾಯರ್ಗ, ಅಝೀಝ್ ಕುರ್ತಲ, ಸವಾದ್ ಆರೆಲ್ತಡಿ, ಅಝೀಝ್ ಸೊರಕೆ, ಹೈದರ್ ಆಲಿ ಐವತ್ತೊಕ್ಲು, ಯೂಸುಫ್ ರೆಂಜಲಾಡಿ, ಅಶ್ರಫ್ ಸಖಾಫಿ, ಅಬೂಬಕ್ಕರ್ ಹಾಜಿ, ಅಬ್ದುಲ್ ಗಫೂರ್, ಶಾಫಿ ಪಾಪೆತ್ತಡ್ಕ, ಅಶ್ರಫ್ ಶೆಡಿಗುಂಡಿ ಉಪಸ್ಥಿತರಿದ್ದರು. ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಇದರ ಅಧ್ಯಕ್ಷ ಝಕರಿಯಾ ಮಾಂತೂರು ಹಾಗೂ ಪದಾಧಿಕಾರಿಗಳು, ಸದಸ್ಯರು, ಬೆಳ್ಳಿ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ಹಾಗೂ ಪದಾಧಿಕಾರಿಗಳು, ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಹನೀಫ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.