ಪುತ್ತೂರು: ಕಂಪೌಂಡ್ ಧರೆ ಜರಿದು ಮನೆಗೆ ಹಾನಿಯಾಗುತ್ತಿರುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿ ಕಿಟ್ಟಣ್ಣ ಶೆಟ್ಟಿ ಎಂಬವರ ಪತ್ನಿ ಪ್ರೇಮಾ ಅವರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್ ಮತ್ತು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ್ದಾರೆ.
ಕೋಡಿಂಬಾಡಿ ಗ್ರಾಮದ ಶಾಂತಿನಗರದಲ್ಲಿ ನಾನು ವಾಸ್ತವ್ಯದ ಮನೆ ಹೊಂದಿದ್ದೇನೆ. ಗ್ರಾಮ ಪಂಚಾಯತ್ ವತಿಯಿಂದ ಕಾಂಕ್ರೀಟ್ ಕಾಮಗಾರಿ ನಡೆಸುತ್ತಿದ್ದ ಸಮಯದಲ್ಲಿ ನನ್ನ ಮನೆಯ ಹತ್ತಿರವಿರುವ ಧರೆ 2022 ಅಕ್ಟೋಬರ್ 12ರಂದು ಜರಿದು ಬಿದ್ದಿದೆ. ಇದರಿಂದ ಮಳೆಗಾಲದಲ್ಲಿ ಮನೆಗೆ ಎತ್ತರದಿಂದ ನೀರು ಬಿದ್ದು ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇದೆ. ಅಲ್ಲದೆ ಮಳೆಗಾಲದಲ್ಲಿ ಧರೆಯ ಮಣ್ಣು ಬಿದ್ದು ಮನೆ ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಕೋಡಿಂಬಾಡಿ ಗ್ರಾಮ ಪಂಚಾಯತ್‌ಗೆ ಮುಖತಃ ದೂರು ಸಲ್ಲಿಸಿರುತ್ತೇನೆ. ಅವರು ಸರಿಪಡಿಸಿ ಕೊಡುತ್ತೇನೆಂದು ಭರವಸೆ ನೀಡಿದ್ದಾರೆ. ಆದರೆ ಇನ್ನೂ ದುರಸ್ತಿ ಪಡಿಸದೇ ಇರುವುದರಿಂದ ತೊಂದರೆಯಾಗುತ್ತಿದೆ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ್ ಮತ್ತು ಪಿಡಿಓಗೆ ದೂರು ನೀಡಿ ಹಲವು ಸಮಯ ಕಳೆದರೂ ಇನ್ನೂ ಸ್ಪಂದನ ದೊರಕಿಲ್ಲ. ಆದ್ದರಿಂದ ಸಂಬಂಧಪಟ್ಟವರು ಸ್ಪಂದಿಸಿ ಹಾನಿ ಸಂಭವಿಸುವ ಮುಂಚೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.