ಬೀಡಿ ಸುತ್ತುತ್ತಿದ್ದ ಮಹಿಳೆ ವಿಮಾನ ಓಡಿಸುತ್ತಾಳೆಂದರೆ ಅದಕ್ಕೆ ಶಿಕ್ಷಣ ಕಾರಣ – ಆಯಿಶಾ ಪೆರ್ಲ
ಪುತ್ತೂರು: ಒಂದು ಪ್ರದೇಶದ ಅಭಿವೃದ್ಧಿಯೆಂದರೆ ಅಲ್ಲಿ ದೊಡ್ದ ದೊಡ್ಡ ಕಾರ್ಖಾನೆಗಳು ಆರಂಭವಾಗುವುದೋ ಬಹುಮಹಡಿ ಕಟ್ಟಡಗಳು ಬರುವುದೋ ಅಲ್ಲ. ಬದಲು ಅಲ್ಲಿ ವಾಸಿಸುವ ಜನ ಆರೋಗ್ಯವಂತರಾಗಿ ಸುಶಿಕ್ಷಿತರಾಗಿ ಶಾಂತಿ ಹಾಗೂ ನೆಮ್ಮದಿಯಿಂದ ಬದುಕುವುದಾಗಿದೆ ಎಂದು ಕೇರಳ ಸ್ಟಾಂಡಿಂಗ್ ಕಮಿಟಿ ಮಾಜಿ ಚೇರ್‌ಮೆನ್, ಖ್ಯಾತ ಭಾಷಣಗಾರರಾಗಿರುವ ಆಯಿಶಾ ಪೆರ್ಲ ಹೇಳಿದರು. ಅವರು ಕುಂಬ್ರ ಮರ್ಕಝುಲ್ ಹುದಾ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮನುಷ್ಯನನ್ನು ಸುಸಂಸ್ಕೃತರನ್ನಾಗಿ ಮಾಡುವುದೇ ನಿಜವಾದ ಶಿಕ್ಷಣ. ದೇಶದ ಶಕ್ತಿ, ಪ್ರದೇಶದ ಭವಿಷ್ಯ ಶಿಕ್ಷಣದ ಬುನಾದಿಯ ಮೇಲೆ ನಿಂತಿದೆ. ದೇಶದ ಶಕ್ತಿ ರಿಸರ್ವ್ ಬ್ಯಾಂಕ್‌ನಲ್ಲಿ ಕೂಡಿಟ್ಟ ಹಣ ಅಥವಾ ಸೈನ್ಯದ ಬಳಿ ಇರುವ ಆಯುಧಕ್ಕಿಂತಲೂ ಹೆಚ್ಚಾಗಿ ವಿದ್ಯಾಭ್ಯಾಸದ ಮೇಲೆ ಅವಲಂಭಿತವಾಗಿದೆ. ವಿದ್ಯಾಕ್ಷೇತ್ರದ ಅವಗಣನೆ ದೇಶದ ಅಡಿಪಾಯವನ್ನೇ ಅಲುಗಾಡಿಸಬಹುದು. ಆದ್ದರಿಂದ ವಿದ್ಯಾಕ್ಷೇತ್ರ ಸರಿಯಾದ ದಿಶೆಯಲ್ಲಿ ಸಾಗಬೇಕಾದದ್ದು ಕಾಲದ ಅನಿವಾರ್ಯತೆಯಾಗಿದೆ. ಒಂದು ಕಾಲದಲ್ಲಿ ನಮ್ಮ ಮಹಿಳೆಯರಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಮನೆಯ ಚಾವಡಿಯಲ್ಲಿ ಬೀಡಿ ಸುತ್ತುತ್ತಿದ್ದ ಮಹಿಳೆ ಇಂದು ಗಗನಕ್ಕೆ ನೆಗೆದು ವಿಮಾನಗಳ ಚಕ್ರಗಳನ್ನು ತಿರುಗಿಸುವಲ್ಲಿಗೆ ತಲುಪಿದ್ದಾಳೆಂದರೆ ಅದು ಅವಳ ಶಕ್ತಿ ಸಾಮರ್ಥ್ಯ ಎನ್ನುವುದಕ್ಕಿಂತಲೂ ಶಿಕ್ಷಣ ಆಕೆಗೆ ನೀಡಿದ ಆತ್ಮವಿಶ್ವಾಸ ಎನ್ನಬಹುದಾಗಿದೆ ಎಂದು ಆಯಿಶಾ ಪೆರ್ಲ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಸಂಧ್ಯಾ ಪಿ ವಹಿಸಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ಫಾತಿಮತ್ ಶಿಫಾ ಮತ್ತು ಬಳಗದವರು ಪ್ರಾರ್ಥಿಸಿದರು. ಉಪನ್ಯಾಸಕಿ ಪ್ರತಿಭಾ ರೈ ಅತಿಥಿ ಪರಿಚಯ ಮಾಡಿದರು. ಪ್ರಾಂಶುಪಾಲರಾದ ಸಂಧ್ಯಾ ಪಿ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ಫಾತಿಮತ್ ಝಹ್ರ ಸ್ವಾಗತಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ಆಯಿಶಾ ತಝ್ಕಿಯಾ ವಂದಿಸಿದರು. ಉಪನ್ಯಾಸಕಿಯರಾದ ಜೋಸ್ನಾ ನೋರೇನೋ, ಪವಿತ್ರ ಪಿ, ಸುಮಿತ, ಕಮಲ ಬಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.