ಪುತ್ತೂರು: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಬಳ್ಪದಲ್ಲಿ ನಡೆದ ಗ್ರಾಮೋತ್ಸವದ ಸಂದರ್ಭದಲ್ಲಿ, ಐಸಿಎಆರ್-ಗೋಡಂಬಿ ಸಂಶೋಧನಾ ನಿರ್ದೇಶನಾಲಯವು ಜ.10 ರಂದು ರೈತರಿಗೆ ಡ್ರೋನ್ ತಂತ್ರಜ್ಞಾನವನ್ನು ಪ್ರದರ್ಶಿಸಿತು. ಸಂಸದ್ ಗ್ರಾಮ ಯೋಜನೆ ಅಡಿಯಲ್ಲಿ ಬಳ್ಪ ಗ್ರಾಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ದತ್ತು ಪಡೆದಿದ್ದು, ಗೋಡಂಬಿ ಸಂಶೋಧನಾ ನಿರ್ದೇಶನಾಲಯದ ಫಾರ್ಮ್ ಪವರ್ ಮತ್ತು ಮೆಷಿನರಿ ವಿಭಾಗದ ವಿಜ್ಞಾನಿ ಡಾ.ಮಂಜುನಾಥ ಕೆ, ಸಾಂಬಾರ ಪದಾರ್ಥಗಳು, ನೆಡುತೋಪು, ಔಷಧೀಯ ಮತ್ತು ಸುಗಂಧ ಸಸ್ಯಗಳ ವಿಜ್ಞಾನಿ ಡಾ. ಭಾಗ್ಯ ಎಚ್ ಪಿ ಮತ್ತು ಕೃಷಿ ವಿಸ್ತರಣೆ ವಿಜ್ಞಾನಿ ಡಾ. ಅಶ್ವತಿಚಂದ್ರಕುಮಾರ್ ಅವರನ್ನೊಳಗೊಂಡ ವಿಜ್ಞಾನಿಗಳ ತಂಡವು ಬಳ್ಪ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಡ್ರೋನ್ ತಂತ್ರಜ್ಞಾನವನ್ನು ಪ್ರದರ್ಶಿಸಿತು.
ಈ ಗ್ರಾಮೋತ್ಸವದ ಅಂಗವಾಗಿ ಬಳ್ಪ ಗ್ರಾಮ ಪಂಚಾಯತ್ ವತಿಯಿಂದ ಕೃಷಿಮೇಳ ಆಯೋಜಿಸಲಾಗಿದ್ದು, ಸುಮಾರು 500 ರೈತರು ಪಾಲ್ಗೊಂಡಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಗೋಡಂಬಿ ಸಂಶೋಧನಾ ನಿರ್ದೇಶನಾಲಯದ ಫಾರ್ಮ್ ಪವರ್ ಮತ್ತು ಮೆಷಿನರಿ ವಿಭಾಗದ ವಿಜ್ಞಾನಿ ಡಾ. ಮಂಜುನಾಥ ಕೆ, ರೈತರಿಗೆ ಡ್ರೋನ್ ತಂತ್ರಜ್ಞಾನವನ್ನು ಪ್ರದರ್ಶಿಸಿದರು. ಸೂಕ್ಷ್ಮ ಪೋಷಕಾಂಶಗಳನ್ನು ಸಿಂಪಡಿಸಲು ಡ್ರೋನ್ ಬಳಸುವ ಅಗತ್ಯತೆ, ಕಾರ್ಯಾಚರಣೆಯ ವಿಧಾನವನ್ನು ರೈತರಿಗೆ ವಿವರಿಸಿದ ಅವರು, ಡ್ರೋನ್ ರಾಸಾಯನಿಕಗಳ ಸಿಂಪಡಣೆಯ ದಕ್ಷತೆಯನ್ನು ಹೇಗೆ ಹೆಚ್ಚಿಸಬಹುದು ಮತ್ತು ಕೂಲಿ ಕಾರ್ಮಿಕರಿಗೆ ತಗಲುವ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಅವರು ಒತ್ತಿ ಹೇಳಿದರು.
ಡ್ರೋನ್ ತಂತ್ರಜ್ಞಾನದ ಬಗ್ಗೆ ರೈತರು ಹೆಚ್ಚಿನ ಆಸಕ್ತಿ ತೋರಿಸಿದ್ದು, ವೆಚ್ಚ, ಖರೀದಿಗೆ ಲಭ್ಯವಿರುವ ಸಬ್ಸಿಡಿ, ಒಂದು ಎಕರೆಗೆ ರಾಸಾಯನಿಕ ಸಿಂಪಡಿಸಲು ಬೇಕಾಗುವ ಸಮಯ, ಸಿಂಪಡಣೆಗೆ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶಗಳ ಪ್ರಮಾಣ ಮತ್ತು ನಿರ್ವಹಣೆ ಅಂಶಗಳ ಬಗ್ಗೆ ರೈತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು.