ಪುತ್ತೂರು: ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 40 ಮಂದಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಜ.9ರಂದು ನಡೆದಿದೆ.
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಘಟಕ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಪುತ್ತೂರು, ಐಸಿಟಿಸಿ ಸರಕಾರಿ ಸಾರ್ವಜನಿಕ ಆಸ್ಪತ್ರೆ ಪುತ್ತೂರು ಇದರ ಆಶ್ರಯದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಯಿತು. ಗರ್ಭಿಣಿಯರಿಗೆ ರವಿಕೆಕಣ, ತೆಂಗಿನ ಕಾಯಿ, ಅರಸಿನ ಕುಂಕುಮ, ಬಲೆಗಳನ್ನು ಅವರ ಮಡಿಲು ತುಂಬಿಸುವ ಸಂಪ್ರದಾಯ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅಶಾಜ್ಯೋತಿ ಕೆ ಅವರು ಮಾತನಾಡಿ ಗರ್ಭಿಣಿಯರು ಆರೋಗ್ಯ ಪರೀಕ್ಷೆ, ಚುಚ್ಚುಮದ್ದುಗಳನ್ನು ಪಡೆಯುವ ಜೊತೆಗೆ ಪೌಷ್ಠಿಕ ಆಹಾರ ಸೇವಿಸುವುದು ಅಗತ್ಯ. ಆಗ ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದರು. ಆಸ್ಪತ್ರೆಯ ಡಾ.ಜಗದೀಶ್, ಡಾ. ಸ್ಮಿತಾರಾಣಿ, ಡಾ.ಅರ್ಚನ, ತಾಯಿ ಮಗುವಿನ ಆರೈಕೆ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಆಸ್ಪತ್ರೆಯ ಹಿರಿಯ, ಕಿರಿಯ ಸಿಬ್ಬಂದಿಗಳು ಭಾಗವಹಿಸಿದ್ದರು. ಆಪ್ತಸಮಾಲೋಚಕ ತಾರಾನಾಥ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.