ನೆಲ್ಲಿಕಟ್ಟೆ ಶಾಲಾ ಆವರಣದಲ್ಲಿ ಫಿಸಿಯೋಥೆರಪಿ ಕಟ್ಟಡ ನಿರ್ಮಾಣಕ್ಕೆ ಎಸ್‌ಡಿಎಂಸಿ ವಿರೋಧ

0

ತುರ್ತು ಸಭೆ ನಡೆಸಿ ನಿರ್ಣಯ-ಕಾಮಗಾರಿಗೆ ಬಂದ ಜೆಸಿಬಿ ವಾಪಸ್
ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಇರುವ ನೆಲ್ಲಿಕಟ್ಟೆ ಸರಕಾರಿ ಶಾಲೆಯ ವಠಾರದಲ್ಲಿ ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ನೂತನ ಫಿಸಿಯೋಥೆರಪಿ ಕಟ್ಟಡ ನಿರ್ಮಾಣಕ್ಕೆಂದು ಶಾಲೆಯ ಎಸ್‌ಡಿಎಂಸಿಯ ಗಮನಕ್ಕೆ ತಾರದೆ ಕಾಮಗಾರಿ ಆರಂಭಿಸಲು ಮುಂದಾಗಿರುವುದಕ್ಕೆ ನೆಲ್ಲಿಕಟ್ಟೆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಶಾಲೆಯ ಆವರಣದ ಜಾಗದಲ್ಲಿ ಯಾವುದೇ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ನಿರ್ಣಯ ಕೈಗೊಂಡ ಘಟನೆ ಜ.11ರಂದು ನಡೆದಿದೆ.
ನೆಲ್ಲಿಕಟ್ಟೆಯಲ್ಲಿರುವ ಸರಕಾರಿ ಶಾಲೆಯ ಆವರಣದಲ್ಲಿ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಜೊತೆಗೆ ಶಾಲಾ ಶಿಕ್ಷಣ ಇಲಾಖೆಯ ಬಿಆರ್‌ಸಿ ಕಚೇರಿ ಕೂಡ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯ ಶಾಲೆಗಳಲ್ಲಿ 1ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೈಕಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ವಾರದ ಪ್ರತೀ ಸೋಮವಾರ ಮತ್ತು ಗುರುವಾರ ಫಿಸಿಯೋಥೆರಪಿ ನಡೆಯುತ್ತಿದ್ದು, ಮಂಗಳೂರಿನಿಂದ ವೈದ್ಯರುಗಳು ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಇಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯ ಸರಿಸುಮಾರು 126 ಮಂದಿ ವಿದ್ಯಾರ್ಥಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಾಕಷ್ಟು ಸ್ಥಳಾವಕಾಶದ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಶಾಸಕರಿಗೆ ಮನವಿ ಸಲ್ಲಿಸಿದ್ದು, ಪ್ರತ್ಯೇಕ ಫಿಸಿಯೋಥೆರಪಿ ಕೇಂದ್ರದ ಕೊಠಡಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ತಿಳಿದುಬಂದಿದೆ. ಜ.11ರಂದು ಬೆಳಗ್ಗಿನ ವೇಳೆ ಕಾಮಗಾರಿ ಆರಂಭ ಹಿನ್ನೆಲೆಯಲ್ಲಿ ನೆಲ ಸಮತಟ್ಟು ಮಾಡುವ ಕೆಲಸಕ್ಕೆ ಜೆಸಿಬಿ ಕೊಂಡೊಯ್ಯಲಾಗಿತ್ತು. ಈ ವಿಚಾರ ಎಸ್‌ಡಿಎಂಸಿ ಗಮನಕ್ಕೆ ಬಂದಿಲ್ಲ ಎಂದು ಆರೋಪಿಸಿ, ಜೊತೆಗೆ ಶಾಲಾ ಆವರಣದಲ್ಲಿ ಬೇರೆ ಯಾವುದೇ ಕಟ್ಟಡ ನಿರ್ಮಾಣ ಆಗುವುದು ಬೇಡ ಎಂದು ಆಗ್ರಹಿಸಿ ಶಾಲೆಯ ಎಸ್‌ಡಿಎಂಸಿ ಸದಸ್ಯರು ಶಾಲೆಗೆ ಆಗಮಿಸಿ, ಆಕ್ರೋಶ ವ್ಯಕ್ತಪಡಿಸಿ ಬಂದ ಜೆಸಿಬಿಯನ್ನು ವಾಪಸ್ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರ ತಿಳಿದ ಸ್ಥಳೀಯ ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಶಾಲೆಗೆ ಭೇಟಿ ನೀಡಿದ್ದು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕಿಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಶಾಲೆಯಲ್ಲಿ ತುರ್ತು ಸಭೆ ನಡೆಸಿದ್ದು, ಶಾಲಾ ವಠಾರದೊಳಗೆ ಶಾಲಾ ಕಟ್ಟಡ ಹೊರತುಪಡಿಸಿ ಯಾವುದೇ ಬಗೆಯ ಸರಕಾರಿ ಕಚೇರಿಗಳು, ಕಟ್ಟಡಗಳು ಬರುವುದು ಬೇಡ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here