ಶಾಂತಿಮೊಗರು ಕುಮಾರಧಾರ ನದಿಯ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಣೆ ಕಾರ್ಯ ಇನ್ನೂ ನಡೆದಿಲ್ಲ – ಮರೀಚಿಕೆಯಾಗಿಯೇ ಉಳಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

0

?️ ಸುಧಾಕರ್ ಕಾಣಿಯೂರು
ಕಾಣಿಯೂರು: ಬಹುಗ್ರಾಮ ಕುಡಿಯುವ ನೀರು ಯೋಜನೆಯ ಸಲುವಾಗಿ ಕುಮಾರಧಾರ ನದಿಗೆ ಶಾಂತಿಮೊಗೇರು ಎಂಬಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟೆಗೆ ಬೇಸಿಗೆ ಆರಂಭವಾದರೂ ಇನ್ನೂ ಹಲಗೆ ಜೋಡಣೆಯಾಗಿಲ್ಲ, ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ನೀರಿನ ಅಭಾವ ಹೆಚ್ಚಾಗಬಹುದು ಹೀಗಾಗಿ ಬೇಗನೆ ಹಲಗೆ ಜೋಡಣೆ ಮಾಡಬೇಕೆನ್ನುವ ಬೇಡಿಕೆ ರೈತರದ್ದಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ನಿಧಾನಗತಿಯಲ್ಲಿ ನಿರ್ಮಾಣವಾಗಿ ಕಳೆದ ವರ್ಷ ಲೋಕಾರ್ಪಣೆಯಾಗಿ ಹಲಗೆ ಜೋಡಣೆ ನಡೆಯಿತು. ಬೇಸಿಗೆ ಅಂತ್ಯಕ್ಕೆ ಹಲಗೆ ಜೋಡಿಸಿದ ಪರಿಣಾಮ ನೀರು ಸಂಗ್ರಹ ಅಷ್ಟಕಷ್ಟೆ, ಅಲ್ಲದೆ ಸರಿಯಾದ ರೀತಿಯಲ್ಲಿ ಹಲಗೆ ಜೋಡಣೆಯಾಗದೆ ನೀರು ಸೋರುತ್ತಿತ್ತು. ನದಿಯಲ್ಲಿ ಸಾಕಷ್ಟು ನೀರು ಇದ್ದಾಗ ಹಲಗೆ ಜೋಡಿಸಿದರೆ ನೀರು ಹೆಚ್ಚು ಸಂಗ್ರಹವಾಗುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.
ಕಿಂಡಿ ಅಣೆಕಟ್ಟಿನಿಂದ ಉದ್ದೇಶಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರಿನ ಮೂಲ ಒದಗಿ ಬಂದಿದೆ. ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಮುಖಾಂತರ ಈ ಯೋಜನೆ ಅನುಷ್ಠಾನವಾಗಿದೆ. ಕುಮಾರಧಾರ ನದಿಗೆ ಸುಬ್ರಹ್ಮಣ್ಯ ಮತ್ತು ಉಪ್ಪಿನಂಗಡಿ ಬಳಿ ಎರಡು ಕಿಂಡಿ ಅಣೆಕಟ್ಟುಗಳು ಕುಡಿಯುವ ನೀರಿನ ಬಳಕೆಗೆ ಉಪಯೋಗವಾಗುತ್ತಿದೆ. ಶಾಂತಿಮೊಗರಿನಲ್ಲಿ ಮೂರನೇ ಅತೀ ದೊಡ್ಡ ಅಣೆಕಟ್ಟು ಕುಡಿಯುವ ನೀರು ಮತ್ತು ಕೃಷಿ ಬಳಕೆಗಾಗಿ ನಿರ್ಮಾಣ ಮಾಡಲಾಗಿದೆ.
7.5 ಕೋಟಿ ರೂ.ಗಳ ಯೋಜನೆ: ಕುಡಿಯುವ ನೀರಿನ ಭವಣೆ ನೀಗಿಸಲು ಈ ಹಿಂದಿನ ಸಚಿವ ಎಸ್ ಅಂಗಾರ ಅವರ ಶಿಫಾರಸ್ಸಿನಂತೆ ಶಾಂತಿಮೊಗರು ಎಂಬಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟು ಯೋಜನೆಗೆ ಸುಮಾರು 7.5 ಕೋಟಿ ರೂ ವ್ಯಯಿಸಲಾಗಿದೆ. ನದಿಯ ತಳಮಟ್ಟದಿಂದ 4 ಮೀಟರ್ ಎತ್ತರದಲ್ಲಿ ನಿರ್ಮಾಣವಾದ ಈ ಅಣೆಕಟ್ಟು 221.4 ಮೀಟರ್ ಉದ್ದ ಹಾಗು 3.75 ಮೀ ಅಗಲವಿದೆ. 56 ಪಿಲ್ಲರ್‌ಗಳ ಸ್ಲ್ಯಾಬ್ ಜೋಡಿಸಲಾಗಿದೆ. ಎಲ್ಲ ಹಲಗೆ ಜೋಡಿಸಿದರೆ 18.56 ಎಂಸಿಎಫ್ ಟಿ ನೀರು ಶೇಖರಣೆಯಾಗಲಿದೆ.

ಹಲಗೆ ಜೋಡಿಸಿರುವುದು ಮಾತ್ರ-ಯೋಜನೆ ಇನ್ನೂ ಅನುಷ್ಠಾನವಾಗಿಲ್ಲ: ಈ ನೀರು ಕುಡಿಯಲು ಬಳಕೆ ಮಾಡುವ ಉದ್ದೇಶವಿರುವುದರಿಂದ ಪೈಪು ಲೈನ್ ಮೂಲಕ ಶಾಂತಿಮೊಗೇರುವಿನ ಆಸುಪಾಸಿನ ಕುದ್ಮಾರು, ಸವಣೂರು, ಬೆಳಂದೂರು, ಕಾಣಿಯೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಇತ್ತ ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳಿಗೆ ನೀರು ಸರಬರಾಜು ಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಟಾನ ಮಾಡುವ ಉದ್ದೇಶ ಹೊಂದಲಾಗಿದೆ. ಆದರೆ ಸದ್ಯ ಇದೆಲ್ಲಾ ಮರೀಚಿಕೆಯಾಗಿ ಉಳಿದಿದೆ.
ಕಿಂಡಿ ಅಣೆಕಟ್ಟು ನದಿಯ ಇಕ್ಕೆಲಗಳಲ್ಲಿ ಸುಮಾರು ಎರಡರಿಂದ ಮೂರು ಕಿಲೋ ಮೀಟರ್ ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ, ಕೃಷಿಕರ ಕೊಳವೆಬಾವಿ, ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಿಗೆಯಲ್ಲೂ ಸಾಕಷ್ಟು ನೀರು ತುಂಬಲಿದೆ ಎನ್ನುವ ಆಶಾಭಾವ ರೈತರದ್ದಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದ ಯೋಜನೆಯ ಪ್ರಯೋಜನ ರೈತರಿಗೆ ಇನ್ನೂ ಲಭಿಸದಂತಾಗಿರುವುದು ವಿಪರ್‍ಯಾಸ.

LEAVE A REPLY

Please enter your comment!
Please enter your name here