ಕೊಳ್ತಿಗೆ:ಗೂಡಂಗಡಿ ವ್ಯಾಪಾರಿ ಮಹಿಳೆಯ ಕೊರಳಿನಿಂದ ಚಿನ್ನದ ಸರ ಎಳೆದು ಪರಾರಿ

0

ಸ್ಕೂಟರ್‌ನಲ್ಲಿ ಬಂದ ಅಪರಿಚಿತರಿಬ್ಬರ ಕೃತ್ಯ: ಬೆಳ್ಳಾರೆ ಪೊಲೀಸರಿಗೆ ದೂರು

ಪುತ್ತೂರು:ಗೂಡಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಅಲ್ಲಿ ವ್ಯಾಪಾರ ನಡೆಸುತ್ತಿದ್ದ ಮಹಿಳೆಯ ಕೊರಳಿನಿಂದ ಚಿನ್ನದ ಸರ ಎಳೆದು ಪರಾರಿಯಾದ ಘಟನೆ ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿ ಜ.11ರಂದು ಬೆಳಿಗ್ಗೆ ನಡೆದಿದೆ.


ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಜಯಂತಿ ಸಿ ಅವರು ಚಿನ್ನದ ಸರ ಕಳೆದುಕೊಂಡವರು.ಐವರ್ನಾಡು ನಿವಾಸಿಯಾಗಿರುವ ಜಯಂತಿ ಅವರು ಪಾಂಬಾರಿನಲ್ಲಿ ಗೂಡಂಗಡಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದು,ಜ.11ರಂದು ಮಧ್ಯಾಹ್ನ ಗೂಡಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾಗ ಸ್ಕೂಟರ್‌ನಲ್ಲಿ ಇಬ್ಬರು ಅಪರಿಚಿತರು ಅಂಗಡಿ ಬಳಿಗೆ ಬಂದರು.ಈ ಪೈಕಿ ಓರ್ವ ಸಿಗರೇಟು ಕೇಳಿ ರೂ.50 ನೀಡಿದ್ದು ಜಯಂತಿಯವರು ಸಿಗರೇಟ್ ಪ್ಯಾಕ್ ನೀಡಲು ತಯಾರಿಯಲ್ಲಿರುವಾಗ ಅಪರಿಚಿತ ಏಕಾಏಕಿ ಗೂಡಂಗಡಿಯ ಡ್ರಾಯರ್‌ಗೆ ಕೈ ಹಾಕಲು ಪ್ರಯತ್ನಿಸಿದಾಗ ಜಯಂತಿಯವರು ಡ್ರಾಯರನ್ನು ದೂಡಿದರು.ಆಗ ಅಪರಿಚಿತ ವ್ಯಕ್ತಿ ಜಯಂತಿಯವರ ಕೊರಳಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಎಳೆದೊಯ್ದು ಓಡಿ ಹೋಗಿ, ಆತ ಬಂದಿದ್ದ ಸ್ಕೂಟರ್‌ನ ಹಿಂಬದಿ ಕುಳಿತು ಇಬ್ಬರೂ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ.

ಘಟನೆ ಸಂದರ್ಭ ಜಯಂತಿಯವರು ಬೊಬ್ಬಿಟ್ಟಾಗ ಸ್ಥಳೀಯರಾದ ತಿಮ್ಮಪ್ಪ ಮತ್ತು ಕೀರ್ತನ್ ಅವರು ಸ್ಥಳಕೆ ಬಂದು ವಿಚಾರಿಸಿದರಲ್ಲದೆ ಆಸುಪಾಸಿನವರೂ ಆಗಮಿಸಿ ಅಪರಿಚಿತರ ಹುಡುಕಾಟ ನಡೆಸಿದ್ದಾರೆ.ಆದರೆ ಪ್ರಯೋಜನವಾಗಲಿಲ್ಲ.ಘಟನೆ ಕುರಿತು ಜಯಂತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕನಕ ಸರ ಮಾದರಿಯ, ಸುಮಾರು 16 ಗ್ರಾಂ ತೂಕದ ತನ್ನ ಚಿನ್ನದ ಸರವನ್ನು ಅಪರಿಚಿತರು ಬಲಾತ್ಕಾರವಾಗಿ ಎಳೆದುಕೊಂಡು ಹೋಗಿದ್ದಾರೆ,ಇದರ ಮೌಲ್ಯ ರೂ.80 ಸಾವಿರ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here