ಉದನೆ: ಮತ್ತೆ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಕಾಡಾನೆ – ವಾಟರ್‌ ಮ್ಯಾನ್ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾದ ಕಾಡಾನೆ ಚಿತ್ರ – ಮಹಿಳೆ ಜಸ್ಟ್ ಮಿಸ್

0

ನೆಲ್ಯಾಡಿ: ಮೂರು ದಿನದ ಹಿಂದೆ ಸಂಜೆ ವೇಳೆಗೆ ಉದನೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ಸಂಚರಿಸಿ ವಾಹನ ಸವಾರರಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯೊಂದು ಉದನೆಯಲ್ಲಿ ಹಗಲು ವೇಳೆಯಲ್ಲೇ ಮತ್ತೆ ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಉದನೆ-ಶಿಬಾಜೆ ರಸ್ತೆಯ ಉದನೆ ಹೈಸ್ಕೂಲ್‌ನ ಸಮೀಪ ಜ.12ರಂದು ಬೆಳಿಗ್ಗೆ 9.30ರ ವೇಳೆಗೆ ಕಾಡಾನೆಯೊಂದು ಹೆದ್ದಾರಿ ದಾಟುತ್ತಿರುವುದು ಕಂಡು ಬಂದಿದೆ. ಶಿರಾಡಿ ಗ್ರಾ.ಪಂ.ನ ಕುಡಿಯುವ ನೀರು ನಿರ್ವಾಹಕ ಸನಿಲ್‌ಕುಮಾರ್ ಅವರು ಉದನೆಯಿಂದ ಕಳಪ್ಪಾರುಗೆ ತೆರಳುತ್ತಿದ್ದ ವೇಳೆ ಉದನೆ ಹೈಸ್ಕೂಲ್‌ನಿಂದ ಸ್ವಲ್ಪ ದೂರದಲ್ಲಿ ಕಾಡಾನೆ ಹೆದ್ದಾರಿ ದಾಟುತ್ತಿರುವುದು ಕಂಡುಬಂದಿದೆ. ಸನಿಲ್‌ಕುಮಾರ್ ಅವರು ತಮ್ಮ ಮೊಬೈಲ್‌ನಲ್ಲಿ ಕಾಡಾನೆ ಹೆದ್ದಾರಿ ದಾಟುತ್ತಿರುವ ದೃಶ್ಯ ಸೆರೆ ಹಿಡಿದಿದ್ದು ಅದು ಇದೀಗ ವೈರಲ್ ಆಗಿದೆ. ಅರಣ್ಯ ಪ್ರದೇಶದಲ್ಲಿ ಹಾದುಹೋಗುತ್ತಿರುವ ಉದನೆ-ಶಿಬಾಜೆ ಹೆದ್ದಾರಿಯ ಒಂದು ಬದಿಯ ಅರಣ್ಯ ಪ್ರದೇಶದಿಂದ ಬಂದ ಆನೆ ಹೆದ್ದಾರಿ ದಾಟಿ ಇನ್ನೊಂದು ಬದಿಯ ಅರಣ್ಯದೊಳಗೆ ಸಂಚರಿಸಿದೆ.

ಮಹಿಳೆ ಜಸ್ಟ್ ಮಿಸ್:
ಆನೆ ಹೆದ್ದಾರಿಗೆ ಬರುವ ಮೂರ್‍ನಾಲ್ಕು ನಿಮಿಷದ ಮೊದಲು ಉದನೆ ಹೈಸ್ಕೂಲ್‌ನ ಅಡುಗೆ ಸಿಬ್ಬಂದಿಯಾಗಿರುವ ಮಹಿಳೆಯೋರ್ವರು ಇದೇ ಹೆದ್ದಾರಿಯಲ್ಲಿ ನಡೆದುಕೊಂಡು ಬಂದಿದ್ದು ಆನೆ ದಾಳಿಗೆ ತುತ್ತಾಗುವುದರಿಂದ ಜಸ್ಟ್ ಮಿಸ್ ಆಗಿದ್ದಾರೆ ಎನ್ನಲಾಗಿದೆ. ಮಹಿಳೆ ಬರುತ್ತಿದ್ದಂತೆ ಅವರಿಗೆ ಶಬ್ದ ಕೇಳಿಬಂದಿದ್ದು ಆನೆಯೇ ಆಗಿರಬಹುದು ಎಂಬ ಶಂಕೆ ಮೇರೆಗೆ ಅವರು ಓಡಿ ಬಂದು ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಈ ವಿಚಾರವನ್ನು ಅವರು ಗ್ರಾ.ಪಂ.ನೀರು ನಿರ್ವಾಹಕ ಸನಿಲ್‌ಕುಮಾರ್ ಅವರ ಗಮನಕ್ಕೂ ತಂದರು. ಇದಾದ ಕೆಲವೇ ನಿಮಿಷದಲ್ಲಿ ಆನೆ ಹೆದ್ದಾರಿಗೆ ಬಂದಿದ್ದು ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.

ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಕಾಡಾನೆ:
ಕೆಲ ದಿನಗಳಿಂದ ಶಿರಾಡಿ ಗ್ರಾಮದ ಉದನೆ, ಕುದ್ಕೋಳಿ ಭಾಗದಲ್ಲಿ ಹಗಲು ವೇಳೆಯಲ್ಲೇ ಕಾಡಾನೆ ಗ್ರಾಮಸ್ಥರಿಗೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ರಾತ್ರಿ ವೇಳೆ ತೋಟಗಳಿಗೆ ಕಾಡಾನೆ ಲಗ್ಗೆ ಇಟ್ಟು ಅಪಾರ ಕೃಷಿ ಹಾನಿಗೊಳಿಸುತ್ತಿರುವುದರಿಂದ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here