ಉಪ್ಪಿನಂಗಡಿ: ಇಲ್ಲಿನ ಪೇಟೆಯಲ್ಲಿ ಚಿತ್ರವಿಚಿತ್ರ ಉಡುಪುಗಳನ್ನು ಧರಿಸಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥೆ ಲಲಿತಾ (50) ಎಂಬಾಕೆಯನ್ನು ಆಕೆಯ ಆಕ್ರಮಣಕಾರಿ ಪ್ರತಿರೋಧದ ನಡುವೆ ಆಸ್ಪತ್ರೆಗೆ ದಾಖಲಿಸುವ ಕಾರ್ಯ ಶುಕ್ರವಾರದಂದು ನಡೆಯಿತು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ರವರು ವಹಿಸಿದ ಮಾನವೀಯ ಕಾಳಜಿಯಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯಿತು. ಮಹಿಳಾ ಪೊಲೀಸರ ಸಹಕಾರದೊಂದಿಗೆ ಆಕೆಯನ್ನು ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದಾಗ ತನ್ನಲ್ಲಿ ಸದಾ ಕಾಲ ಇರಿಸಿಕೊಳ್ಳುತ್ತಿದ್ದ ಚಾಕುವನ್ನು ಬಳಸಿ ಪೊಲೀಸರಿಗೆ ತಿವಿಯಲು ಮುಂದಾದಾಗ ಯಶೋಧಾ ಎಂಬ ಮಹಿಳಾ ಪೊಲೀಸ್ ಸಿಬ್ಬಂದಿಯ ಕೈಗೆ ಗಾಯವಾಯಿತು. ಇನ್ನೋರ್ವ ಮಹಿಳಾ ಪೊಲೀಸ್ ರವರ ಕುತ್ತಿಗೆಗೆ ಇರಿಯಲು ಯತ್ನಿಸಿದಳಾದರೂ ಆಕೆ ಕೂದಲೆಳೆ ಅಂತರದಲ್ಲಿ ಪಾರಾದರು. ಈ ಮಧ್ಯೆ ಆಕೆಯನ್ನು ಹಿಡಿಯಲು ಯತ್ನಿಸಿದ ಆಸ್ಪತ್ರೆ ಸಿಬ್ಬಂದಿಗೆ ಕಚ್ಚಿ ಗಾಯಗೊಳಿಸಿದ ಆಕೆಯನ್ನು ಬಳಿಕ ಬಲವಂತದಿಂದ ಕೈ ಕಾಲು ಕಟ್ಟಿ ಪ್ರಜ್ಞಾಶೂನ್ಯತೆಗೆ ಒಳಪಡಿಸಿ ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ 108 ಅಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.
ಪಂಚಾಯತ್ ಕಚೇರಿಯಲ್ಲಿ ದಾಂಧಲೆ: ಪಿಡಿಒನಿಂದ ದಂಡನೆ
ಕೈಗೆ ಸಿಕ್ಕಿದ ದಾಖಲೆಗಳನ್ನು ಮನಸೋ ಇಚ್ಚೆ ಹಿಡಿದುಕೊಂಡು ಹೋಗಿ ಎಲ್ಲೆಲ್ಲೋ ಎಸೆಯುವ ಮೂಲಕ ಸರಕಾರಿ ಕಚೇರಿ ಸಿಬ್ಬಂದಿಯ ಪಾಲಿಗೆ ಕಂಟಕಳಾಗಿದ್ದ ಲಲಿತಾ ಹತ್ತು ದಿನಗಳ ಹಿಂದೆ ಪಂಚಾಯತ್ ಕಚೇರಿಗೆ ನುಗ್ಗಿ ವಸ್ತುಗಳನೆಲ್ಲಾ ಹಾಳುಗೆಡವಿ ದಾಂಧಲೆ ನಡೆಸಿದಾಗ ಪಂಚಾಯತ್ ಪಿಡಿಒ ಅವರು ಆಕೆಯನ್ನು ಬೆಲ್ಟ್ ಬೀಸಿ ಬೆದರಿಸಿ ಹೊರಗಟ್ಟಿದ್ದರು ಎನ್ನಲಾಗಿದೆ. ಈ ವೇಳೆ ವಿಕಾರವಾಗಿ ಬೊಬ್ಬಿರಿಸಿ ಸಮೀಪದಲ್ಲೇ ಇದ್ದ ಪೊಲೀಸ್ ಠಾಣೆಗೆ ಧಾವಿಸಿದ್ದಳು. ತನಗೆ ಹೊಡೆದಿದ್ದಾರೆ ಎಂದು ಆಕ್ರಂದನಗೈದಿದ್ದಳು. ಈ ಮಧ್ಯೆ ಆಕೆಯ ಮನೋರೋಗವನ್ನು ಗುಣಮುಖಗೊಳಿಸುವ ನಿಟ್ಟಿನಲ್ಲಿ ಮುಂದಾದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆ ಪತ್ರಗಳನ್ನು ಸಿದ್ಧಪಡಿಸಿ ಶುಕ್ರವಾರದಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಕಲ್ಪಿಸಿದರು. ಪ್ರಾರಂಭದ ಯೋಜನೆಯಂತೆ ಪಂಚಾಯತ್ ಸಿಬ್ಬಂದಿಯ ಮೂಲಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಎಂದು ನಿಗದಿಯಾಗಿತ್ತಾದರೂ, ಆಕೆಯ ಆಕ್ರಮಣಕಾರಿ ವರ್ತನೆಗೆ ಭಯಪಟ್ಟು ಕೊನೆ ಕ್ಷಣದಲ್ಲಿ ಪಂಚಾಯತ್ ಸಿಬ್ಬಂದಿ ಹಿಂದೆ ಸರಿದಿದ್ದರು. ಈ ವೇಳೆ ಆಕೆಯೊಂದಿಗೆ ಬೇರಾವ ಇಲಾಖೆಯ ಮಂದಿಯೂ ಆಸ್ಪತ್ರೆಗೆ ಹೋಗಲು ಮುಂದಾಗದೇ ಇದ್ದಾಗ ತಾನೇ ಆಕೆಯೊಂದಿಗೆ ಆಸ್ಪತ್ರೆಗೆ ಹೋಗುವೆನೆಂದು ಅಂಬುಲೆನ್ಸ್ ನಲ್ಲಿ ಆಕೆಯೊಂದಿಗೆ ಪ್ರಯಾಣಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂಲಕ ಜನಪ್ರತಿನಿಧಿಯಾದವರು ಜನ ಸೇವಕನಾಗಿರಬೇಕೆನ್ನುವುದನ್ನು ಕಾರ್ಯ ರೂಪದಲ್ಲಿ ತೋರಿಸಿದ್ದಾರೆ. ವಿದ್ಯಾಲಕ್ಷ್ಮಿ ಪ್ರಭುರವರ ಈ ಮಾನವೀಯ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.