ಪುತ್ತೂರು : ಪ್ರಪ್ರಥಮವಾಗಿ ಕುಂತೂರಿನಲ್ಲಿ ಪ್ರಾರಂಭಗೊಂಡ ಸುನಾದ ಸಂಗೀತ ಕಲಾ ಶಾಲೆಯೂ , ನಂತರದ ದಿನಗಳಲ್ಲಿ ಕೊಯಿಲ ಬಳಿ ಪ್ರಾರಂಭಗೊಂಡಿತು. ತದನಂತರ ಪುತ್ತೂರು ,ಸುಳ್ಯ ಹಾಗೂ ಸುಬ್ರಹ್ಮಣ್ಯ ಮುಂತಾದೆಡೆ ತನ್ನ ಶಾಖೆಯನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿ ಇದೀಗ 4 ಶಾಖೆಗಳಲ್ಲಿ ಸುಮಾರು 400-500 ವಿದ್ಯಾರ್ಥಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಆ ಮೂಲಕ ಸಂಸ್ಥೆಯೂ 30 ನೆಯ ವರುಷಕ್ಕೆ ಕಾಲಿಟ್ಟಿದ್ದು , ಪುತ್ತೂರು ಶಾಖೆಯೂ ಕೂಡ 25ನೆಯ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಆ ಪ್ರಯುಕ್ತ ಇಲ್ಲಿನ ಸುದಾನ ಶಾಲಾ ಎಡ್ವರ್ಡ್ ವೇದಿಕೆಯಲ್ಲಿ ” ಸುನಾದ ಸಂಗೀತೋತ್ಸವಕ್ಕೆ ಜ.13 ರಂದು ಅದ್ಧೂರಿ ಚಾಲನೆ ನೀಡಲಾಯಿತು.
ಜ.13 ಹಾಗೂ 14 ಎರಡು ದಿನಗಳ ಸುನಾದ ಸಂಗೀತೋತ್ಸವ ಕಾರ್ಯಕ್ರಮವನ್ನು ಸುನಾದ ಕಲಾ ಶಾಲೆಯ ಮುಖ್ಯಸ್ಥರಾಗಿರುವ ವಿದ್ವಾನ್ ಎ.ಕಾಂಚನ ಈಶ್ವರ ಭಟ್ ಮತ್ತು ವಿಜಯಶ್ರೀ ಈಶ್ವರ ಭಟ್ ದಂಪತಿ ಜತೆಯಾಗಿ ದೀಪ ಪ್ರಜ್ವಲನೆ ನೆರವೇರಿಸಿ , ಶಾರದೆಗೆ ಅರತಿ ಬೆಳಗಿ , ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಶಿಷ್ಯ ವೃಂದದಿಂದ ಗುರುವಂದನೆ ನಡೆಯಿತು.

ನಂತರ , ಹಿರಿಯ ವಿದ್ಯಾರ್ಥಿ ವೃಂದದಿಂದ ಕಾರ್ಯಕ್ರಮ ಆರಂಭಗೊಂಡು , ಮೊದಲಿಗೆ ವೇಣುಗೋಪಾಲ್ ಸ್ಯಾಕ್ಸ್ ಫೋನ್ ಕಾರ್ಯಕ್ರಮ ನಡೆಸಿಕೊಟ್ಟರು. ಧನಶ್ರೀ ಶಬರಾಯ ವಯಲಿನ್ , ವೆಂಕಟ ಯಶಸ್ವಿ ಮೃದಂಗದಲ್ಲಿ ಸಾಥ್ ನೀಡಿದರು.ಬಳಿಕಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿ ಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವು ನಡೆಯಿತು.
ಸಂಜೆ ಕರ್ನಾಟಕ ಶಾಸ್ತ್ರೀಯ ವೇಣು ವಾದನ ಜರುಗಿ ,ವೇಣುವಾದನವನ್ನು ವಿದ್ವಾನ್ ಸಿ. ಎಸ್. ಕೇಶವಚಂದ್ರ, ಮೈಸೂರು ನಡೆಸಿಕೊಟ್ಟರು.
ವಯಲಿನ್ ನಲ್ಲಿ ವಿದ್ವಾನ್ ವೇಣುಗೋಪಾಲ ಶಾನುಬೋಗ್ , ಮೃದಂಗದಲ್ಲಿ ಡಾ| ಅಕ್ಷಯ ನಾರಾಯಣ, ಕಾಂಚನ ಹಾಗೂ ಘಟಂ ನಲ್ಲಿ ವಿದ್ವಾನ್ ಎಸ್. ಮಂಜುನಾಥ್, ಮೈಸೂರು ಸಹಕರಿಸಿದರು. ಈ ವೇಳೆ ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಭಟ್ , ಧನ್ಯಾಶ್ರೀ ,ಅನುಷಾ ಚೆಕೊಡ್ , ವಿಜಯಶ್ರೀ ಮತ್ತು ಸಂಧ್ಯಾ ಸಹಿತ ಹಲವರು ಪ್ರಮುಖರ ಸಹಿತ ವಿದ್ಯಾರ್ಥಿಗಳ ಹೆತ್ತವರು ಮತ್ತು ಸಂಗೀತ ಪ್ರೇಮಿಗಳು ಹಾಜರಿದ್ದರು. ಶ್ರೀ ಲಕ್ಷ್ಮೀ ,ಅನನ್ಯಾ ,ಶಿಲ್ಪಾ ಹಾಗೂ ಆತ್ಮಶ್ರೀ ಸಹಕಾರ ನೀಡಿದರು.

ಜ. 14 ರಂದು…
ಬೆಳಿಗ್ಗೆ ಗಂಟೆ 9 ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವು ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ನಡೆಯಲಿದ್ದು ,ಸಂಜೆ ಗಂಟೆ 6.30 ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಜರುಗಲಿದೆ. ಹಾಡುಗಾರಿಕೆಯು ವಿದ್ವಾನ್ ಪಾಲ್ಗಾಟ್ ರಾಮ್‌ಪ್ರಸಾದ್, ಚೆನ್ನೈ , ನೇತೃತ್ವದಲ್ಲಿ ನಡೆಯಲಿದ್ದು ,ವಯಲಿನ್ ನಲ್ಲಿ ವಿದ್ವಾನ್ ತ್ರಿವೆಂಡ್ರಮ್ ಡಾ| ಸಂಪತ್ತು ಸಹಕರಿಸಲಿದ್ದು ,ಮೃದಂಗದಲ್ಲಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮತ್ತು ಮೋರ್ಚಿಂಗ್ ವಿದ್ವಾನ್ ಪಯ್ಯನ್ನೂರು ಗೋವಿಂದ ಪ್ರಸಾದ್ ಇವರುಗಳು ಸಾಥ್ ನೀಡಲಿರುವರು.