ʼಬಿಜೆಪಿಯವರು ತೆಂಗಿನ ಕಾಯಿ ಒಡೆದ ಮೂರು ರಸ್ತೆಯನ್ನು ಬಿಟ್ಟುಕೊಡ್ತೇವೆ ಅಭಿವೃದ್ದಿ ಮಾಡಲಿʼ – ಮಾಜಿ ಶಾಸಕರಿಗೆ ಸವಾಲು ಹಾಕಿದ ಶಾಸಕ ಅಶೋಕ್ ರೈ

0

ಪುತ್ತೂರು: 40% ಆಸೆಯಿಂದ ಅನುದಾನ ಇಲ್ಲದಿದ್ದರೂ ಸಿಕ್ಕ ಸಿಕ್ಕಲ್ಲಿ ರಸ್ತೆ ಅಭಿವೃದ್ದಿ ಮಾಡುವುದಾಗಿ ಹೇಳಿ ತೆಂಗಿನ ಕಾಯಿ ಒಡೆದಿದ್ದಾರೆ. ತೆಂಗಿನ ಕಾಯಿ ಒಡೆದ ಮಾತ್ರಕ್ಕೆ ಅಥವಾ ಪತ್ರ ಬರೆದ ಮಾತ್ರ ರಸ್ತೆ ಅಭಿವೃದ್ದಿಯಾಗುವುದಿಲ್ಲ. ಹಿಂದಿನ ಶಾಸಕರು ತೆಂಗಿನ ಒಡೆದ ಕೇವಲ ಮೂರು ರಸ್ತೆಯನ್ನು ಬಿಟ್ಟು ಕೊಡ್ತೇನೆ, ಅದನ್ನು ಅವರೇ ಅಭಿವೃದ್ದಿ ಮಾಡಿ ತೋರಿಸಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಬಿಜೆಪಿಗರಿಗೆ ಸವಾಲು ಹಾಕಿದ್ದಾರೆ.
ಬೆಟ್ಟಂಪಾಡಿ ಗ್ರಾಮದ ಬೇಂಗತ್ತಡ್ಕ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಈಗ ನಡೆಯುತ್ತಿರುವ ಕಾಮಗಾರಿಗೆ ಮಾಜಿ ಶಾಸಕರು ಅನುದಾನ ತಂದಿದ್ದಾರೆ ಎಂದು ಮಾಧ್ಯಮದ ಮುಂದೆ ಹೇಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ತೆಂಗಿನ ಕಾಯಿ ಒಡೆದು ಜನರನ್ನು ಮೋಸ ಮಾಡಿ ವೋಟು ಗಿಟ್ಟಿಸಲು ಯತ್ನ ಮಾಡಿದ್ದರು. ಈಗ ಅವರ ವಿಚಾರ ಎಲ್ಲರಿಗೂ ಗೊತ್ತಾಗಿದೆ. ನಾವು ಅನುದಾನ ಬಂದ ಬಳಿಕ ತೆಂಗಿನ ಕಾಯಿ ಒಡೆಯುತ್ತೇವೆ, ಗುದ್ದಲಿಪೂಜೆಯನ್ನು ಮಾಡುತ್ತಿದ್ದೇವೆ. ಈಗಾಗಲೇ ಬೆಟ್ಟಂಪಾಡಿ ಗ್ರಾಮದಲ್ಲಿ ಅನೇಕ ರಸ್ತೆಗಳಿಗೆ ಅನುದಾನ ಬಿಡುಗಡೆಯಾಗಿದೆ. ಮುಂದಿನ 15 ಕಾಮಗಾರಿಗೆ ಅನುದಾನ ಬಿಡುಗಡೆಯಾಗಲಿದೆ. ಆ ಬಳಿಕ ತೆಂಗಿನ ಕಾಯಿ ಒಡೆಯುತ್ತೇವೆ ಎಂದು ಶಾಸಕರು ಹೇಳಿದರು.

ಚೆಲ್ಯಡ್ಕ ಸೇತುವೆ ಯಾರ ಕಣ್ಣಿಗೂ ಬೀಳಲಿಲ್ವ?..
ಚೆಲ್ಯಡ್ಕದಲ್ಲಿ ಇರುವ ಸೇತುವೆ ಕಳೆದ 40 ವರ್ಷಗಳಿಂದ ಪ್ರತೀ ಮಳೆಗಾಲದಲ್ಲಿ ಮುಳುಗುತ್ತಿದೆ. ಈ ಸೇತುವೆಗೆ ಮೂರು ಕೋಟಿ ಅನುದಾನ ನೀಡುತ್ತಿದ್ದೇನೆ. ಚೆಲ್ಯಡ್ಕ ಮುಳುಗು ಸೇತುವೆಗೆ ಮುಕ್ತಿ ನೀಡುತ್ತೇನೆ. ಈ ಸೇತುವೆಗೆ ಯಾಕೆ ಇಷ್ಟು ವರ್ಷ ಮುಕ್ತಿ ನೀಡಿಲ್ಲ? ಮಾಜಿ ಶಾಸಕರಿಗೆ ಈ ಸೇತುವೆಯ ವಿಚಾರ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

5 ವರ್ಷದ ಬಜೆಟ್‌ನಲ್ಲಿ ಬಂದ ಅನುದಾನವನ್ನು ಬಹಿರಂಗ ಮಾಡಲಿ
ಕಳೆದ 5 ವರ್ಷದಲ್ಲಿ ದ ಕ ಜಿಲ್ಲೆಗೆ ಬಂದ ಅನುದಾನವನ್ನು ಬಿಜೆಪಿಯವರು ಬಹಿರಂಗ ಪಡಿಸಲಿ. ಅಭಿವೃದ್ದಿಗೆ ಬಜೆಟ್‌ನಲ್ಲಿ ನಯಾ ಪೈಸೆ ಮೀಸಲಿಡಲು ತಾಕತ್ತಿಲ್ಲದ ಇವರು ಈಗಿನ ಸರಕಾರ ಅನುದಾನ ಬಿಡುಗಡೆ ಮಾಡಿದ ಕಾಮಗಾರಿಯನ್ನು ನಾವು ಮಾಡಿದ್ದು ಎಂದು ಹೇಳುತ್ತಿದ್ದಾರೆ. ಸುಳ್ಳು ಹೇಳಿಯೇ ಇಷ್ಟು ವರ್ಷ ಜನರನ್ನು ಮೋಸ ಮಾಡಿದ ಇವರು ಅಧಿಕಾರ ಕಳೆದುಕೊಂಡ ಬಳಿಕವೂ ಜನರನ್ನು ಮೋಸ ಮಾಡುತ್ತಲೇ ಇದ್ದಾರೆ. ಪ್ರತೀಯೊಬ್ಬ ನಾಗಕರಿರೂ ಬಿಜೆಪಿ ಸುಳ್ಳುಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪತ್ರ ಕೊಟ್ಟು ಕೆಲಸ ಮಾಡಿಸಿದ್ದಾರೆ ಹಣ ಕೊಡಲಿಲ್ಲ, ಗುತ್ತಿಗೆದಾರ ನನ್ನಲ್ಲಿ ದಮ್ಮಯ್ಯ ಹಾಕುತ್ತಿದ್ದಾರೆ
ಪುತ್ತೂರಿನ ಹೋಂಡಾ ಶೋರೂಂ ಬಳಿ ಸುಮಾರು 1 ಕೋಟಿ ರೂ ಕಾಮಗಾರಿಯನ್ನು ಮಾಜಿ ಶಾಸಕರು ಮಾಡಿಸಿದ್ದಾರೆ. ಗುತ್ತಿಗೆದಾರನಿಗೆ ಪತ್ರ ಕೊಟ್ಟು ಕೆಲಸ ಮಾಡಿ ಎಂದು ಹೇಳಿದ್ದು ಅವರು ಕೆಲಸ ಮಾಡಿದ್ದಾರೆ. ಕೆಲಸ ಆಗಿದೆ ಗುತ್ತಿಗೆದಾರನಿಗೆ ಹಣ ಬಂದಿಲ್ಲ. ಹಣ ಬಿಡುಗಡೆ ಮಾಡಿಸಿ ಎಂದು ಗುತ್ತಿಗೆದಾರ ಬಂದು ನನ್ನಲ್ಲಿ ದಮ್ಮಯ್ಯ ಹಾಕುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು. ಬಲ್ನಾಡು ದೇವಿ ಗುಡಿ ಅಭಿವೃದ್ದಿಗೆ 10 ಲಕ್ಷ ಕೊಡುವುದಾಗಿ ಹೇಳಿದ್ದರೂ ಕೊಟ್ಟಿಲ್ಲ, ಕುಂಡಡ್ಕ ದೇವಸ್ಥಾನಕ್ಕೆ 50 ಲಕ್ಷ ಮತ್ತು ಗೆಜ್ಜೆಗಿರಿಗೆ ಅನುದಾನ ಕೊಡುವುದಾಗಿ ಹೇಳಿ ಅಲ್ಲಿನವರಿಂದ ಚಪ್ಪಾಳೆಗಿಟ್ಟಿಸಿಕೊಂಡಿದ್ದರು. ಆದರೆ ಅನುದಾನ ನಯಾ ಪೈಸೆ ಕೊಟ್ಟಿಲ್ಲ. ಅಧಿಕಾರದಲ್ಲಿರುವಾಗ ಕೆಲಸ ಮಾಡದೆ, ಈಗ ಕಾಂಗ್ರೆಸ್ ಸರಕಾರ ನೀಡುತ್ತಿರುವ ಅನುದಾನವನ್ನು ನನ್ನ ಕಾಲದಲ್ಲಿ ಆಗಿದ್ದು ಎಂದು ಹೇಳುತ್ತಿರುವುದು ನಾಚಿಕೆಯ ವಿಚಾರವಾಗಿದೆ ಎಂದು ಹೇಳಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿತ್ಯವೂ ಗುದ್ದಲಿಪೂಜೆ ನಡೆಯುತ್ತಿದೆ. ಇದನ್ನು ಕಂಡು ಸಹಿಸಲಾಗದ ಬಿಜೆಪಿಯವರು ನನ್ನ ನೈತಿಕ ಸ್ಥೈರ್ಯವನ್ನು ಕಸಿಯಲು ಯತ್ನ ಮಾಡುತ್ತಿದ್ದಾರೆ. ಯಾರೇ ಪ್ರೆಸ್ ಮಾಡಿದರೂ ಉತ್ತರ ಕೊಡಲಾರೆ.ಕ್ಷೇತ್ರದ ಜನರೇ ಅವರಿಗೆ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತಾರೆ. ಜಾತಿ, ಧರ್ಮ, ಪಕ್ಷ ಬೇದವಿಲ್ಲದೆ ಅನುದಾನವನ್ನು ಹಂಚಿಕೆ ಮಾಡುತ್ತಿದ್ದೇನೆ, ಪುತ್ತೂರು ಕ್ಷೇತ್ರ ಅಭಿವೃದ್ದಿಯಾಗಬೇಕೆಂಬುದೇ ನನ್ನ ಉದ್ದೇಶವಾಗಿದೆ. ಬಿಜೆಪಿಯವರೇ ಬಂದು ನನ್ನಲ್ಲಿ ಅನುದಾನ ಕೊಡಿ ಎಂದು ಕೇಳುತ್ತಿದ್ದಾರೆ, ಮಾಜಿ ಶಾಸಕರು ಕೆಲಸ ಮಾಡಿಲ್ಲ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನನಗೆ 40% ಬೇಡ
ಅನುದಾನದಲ್ಲಿ 40% ಕಮಿಷನ್ ನನಗೆ ಬೇಡ. ನಾನು ಆ ಜಾಯಾಮಾನದವನಲ್ಲ. ಕಮಿಷನ್ ಪಡೆದು ಅದರ ಆಸೆಯಿಂದ ಕೆಲವು ಕಡೆಗಳಲ್ಲಿ ಕದ್ದುಮುಚ್ಚಿ ಶಿಲಾನ್ಯಾಸ ಮಾಡಲು ಕೆಲವರು ಬರಬಹುದು, ಉದ್ಘಾಟನೆ ಮಾಡಲೂ ಬರಬಹುದು ಗ್ರಾಮಸ್ಥರು ಎಚ್ಚರವಾಗಿರಬೇಕು ಎಂದು ಶಾಸಕರು ಹೇಳಿದರು. ಯಾರೇ ಏನೇ ಹೇಳುತ್ತಿದ್ದರೂ ಕ್ಷೇತ್ರಕ್ಕೆ ಹಣದ ಹೊಳೆಯನ್ನೇ ತರುತ್ತೇನೆ, ಅಭಿವೃದ್ದಿ ಮಾಡಿಯೇ ಮಾಡುತ್ತೇನೆ, ಭ್ರಷ್ಟಾಚಾರ ಮುಕ್ತವಾಗಿ ಕ್ಷೇತ್ರವನ್ನು ಬದಲಾಯಿಸಿಯೇ ಬದಲಾಯಿಸುತ್ತೇನೆ ಎಂದು ಹೇಳಿದರು.

ಉತ್ತಮ ನಾಯಕ ಸಿಕ್ಕಿದ್ದಾರೆ: ಎಂ ಬಿ ವಿಶ್ವನಾಥ ರೈ
ಪುತ್ತೂರು ಶಾಸಕರು ಓರ್ವ ಉತ್ತಮ ನಾಯಕರು. ಏಳು ತಿಂಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಜನರ ನಿರೀಕ್ಷೆಗೂ ಮೀರಿ ಕೆಲಸಗಳು ನಡೆದಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿದರು.

ಬಿಜೆಪಿಯಿಂದ ಕೋಮು ರಾಜಕೀಯ
ಕಾಂಗ್ರೆಸ್ ಮುಖಂಡ ಆಲಿಕುಂಞಿ ಕೊರಿಂಗಿಲ ಮಾತನಾಡಿ ಬೇಂಗತ್ತಡ್ಕ ರಸ್ತೆಗೆ 5 ಲಕ್ಷ ಅನುದಾನವನ್ನು ಮಾಜಿ ಶಾಸಕ ಸಂಜೀವ ಮಠಂದೂರು ಇಟ್ಟಿದ್ದರು. ಆದರೆ ಈ ರಸ್ತೆಯಲ್ಲಿ ಅಲ್ಪಸಂಖ್ಯಾತರು ತೆರಳುತ್ತಾರೆ ಎಂದು ಕೊಟ್ಟ ಅನುದಾನವನ್ನು ವಾಪಸ್ ಪಡೆದುಕೊಂಡರು. ನಿಮಗೆ ರಸ್ತೆ ಬೇಕದರೆ ಬಿಜೆಪಿ ಅಧ್ಯಕ್ಷರಲ್ಲಿ ಮಾತನಾಡಿ ಎಂದು ಹೇಳಿದರು. ನಾವು ಮಾತನಾಡಲು ಹೋಗಿಲ್ಲ, ಆದರೆ ಶಾಸಕ ಅಶೋಕ್ ರೈ ಅಭಿವೃದ್ದಿಯಲ್ಲಿ ರಾಜಕೀಯ ಮಾಡಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ರಸಾದ್ ಆಳ್ವ, ಮಹಮ್ಮದ್ ಕೊರಿಂಗಿಲ, ಗ್ರಾಪಂ ಸದಸ್ಯ ಮಹಾಲಿಂಗ ನಾಯ್ಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಬೆಟ್ಟಂಪಾಡಿ ಕಾಂಗ್ರೆಸ್ ವಲಯಾಧ್ಯಕ್ಷ ನವೀನ್ ರೈ ಚೆಲ್ಯಡ್ಕ ಸ್ವಾಗತಿಸಿ ವಂದಿಸಿದರು. ಗುತ್ತಿಗೆದಾರ ರಾಕೇಶ್ ರೈ ಕುದ್ಕಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here