ಆಕರ್ಷಕ ಚೆಂಡೆಪ್ರದರ್ಶನ – 68 ತಂಡಗಳಿಂದ ಏಕಕಾಲದಲ್ಲಿ ಕುಣಿತ ಭಜನೆ
ರಾಮಕುಂಜ: ಶ್ರೀ ಸದಾಶಿವ ಭಜನಾ ಪರಿಷತ್ ಹಾಗೂ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಆತೂರು-ಕೊೖಲ ಇದರ ವತಿಯಿಂದ ಕಡಬ ತಾಲೂಕಿನ ವಿವಿಧ ದೇವಾಲಯಗಳ ಸಹಯೋಗದೊಂದಿಗೆ ಭಜನೋತ್ಸವ ಜ.14ರಂದು ಸಂಜೆ ಆತೂರು-ಕೊೖಲ ಶ್ರೀ ಸದಾಶಿವ ದೇವಸ್ಥಾನದ ಮೈದಾನದಲ್ಲಿ ನಡೆಯಿತು. ಈ ವೇಳೆ ಆಕರ್ಷಕ ಚೆಂಡೆಪ್ರದರ್ಶನ, ಸ್ವಾಗತ ಮೆರವಣಿಗೆ ನಡೆಯಿತು. ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ ಸುಮಾರು 68 ಭಜನಾ ತಂಡಗಳಿಂದ ಮಂಡಲದಲ್ಲಿ ಏಕಕಾಲದಲ್ಲಿ ಸಾಮೂಹಿಕವಾಗಿ ಕುಣಿತ ಭಜನೆ ನಡೆಯಿತು.
ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ ಭಜಕರಿಗೆ ಉಪಾಹಾರದ ಬಳಿಕ ಚಾರ್ವಾಕ ಸಿಂಗಾರಿ ಮೇಳದವರಿಂದ ಆಕರ್ಷಕ ಚೆಂಡೆ ಪ್ರದರ್ಶನ ನಡೆಯಿತು. ಬಳಿಕ ಮೈದಾನದಿಂದ ಚೆಂಡೆಯೊಂದಿಗೆ ಭಜನಾ ತಂಡಗಳ ಸ್ವಾಗತ ಮೆರವಣಿಗೆ ನಡೆಯಿತು. ಮೈದಾನದಿಂದ ಹೊರಟ ಮೆರವಣಿಗೆಯು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಮತ್ತೆ ಮೈದಾನದಲ್ಲಿ ಸಮಾವೇಶಗೊಂಡಿತು.
ಕುಣಿತ ಭಜನೆ:
ಸ್ವಾಗತ ಮೆರವಣಿಗೆ ಬಳಿಕ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ ಸುಮಾರು 68ಕ್ಕೂ ಹೆಚ್ಚು ಭಜನಾ ತಂಡಗಳು ಕುಣಿತ ಭಜನೆಯಲ್ಲಿ ಭಾಗವಹಿಸಿದ್ದರು. 400ಕ್ಕೂ ಹೆಚ್ಚು ಭಜಕರು ಒಂದೇ ಭಜನೆ ಹಾಡಿಗೆ ಮಂಡಲದಲ್ಲಿ ಏಕಕಾಲದಲ್ಲಿ ತಾಳದೊಂದಿಗೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಹೆಜ್ಜೆ ಹಾಕಿದರು. ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ, ಕಾರ್ಯದರ್ಶಿ ಸದಾನಂದ ಆಚಾರ್ಯ ಕಾಣಿಯೂರು ಭಜನೆ ಹಾಡು ಹಾಡಿದರು. ಇದಕ್ಕೂ ಮೊದಲು ಉದ್ಯಮಿ ಕೇಶವ ಅಮೈ ದೀಪ ಪ್ರಜ್ವಲಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕುಣಿತ ಭಜನೆಗೆ ಚಾಲನೆ ನೀಡಿದರು.
ಕೊೖಲ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಸುಭಾಷ್ ಶೆಟ್ಟಿ ಆರ್‍ವಾರ, ಹಳೆನೇರೆಂಕಿ ಭಜನಾ ಮಂಡಳಿ ಉಪಾಧ್ಯಕ್ಷ ಜನಾರ್ದನ, ಆಲಂಕಾರು ಭಾರತಿ ಶಾಲೆ ಶಿಕ್ಷಕಿ ಆಶಾ ಎಸ್ ರೈ, ಶಿಕ್ಷಕ ಜಯಂತ ವೈ, ಕೊಲ ಶ್ರೀ ಸದಾಶಿವ ಭಜನಾ ಪರಿಷತ್ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಮುಖರು ಉಪಸ್ಥಿತರಿದ್ದರು. ಉಪನ್ಯಾಸಕ ಚೇತನ್ ಆನೆಗುಂಡಿ, ಶಿಕ್ಷಕ ಪರಮೇಶ್ವರ ಸಬಳೂರು, ಪ್ರಕಾಶ್ ಕೆಮ್ಮಾರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಾಮೂಹಿಕ ಕುಣಿತ ಭಜನೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಜನಾ ತರಬೇತುದಾರರಿಗೆ ಸನ್ಮಾನ, ಭಜನಾ ತಂಡಗಳಿಗೆ ಗೌರವಾರ್ಪಣೆ, ತಂಡದ ಪ್ರಮುಖರಿಗೆ ಗೌರವಾರ್ಪಣೆ ನಡೆಯಿತು. ರಾತ್ರಿ ಶ್ರೀ ದುರ್ಗಾಪೂಜೆ(ಸಂಕ್ರಾಂತಿ), ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.