ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಕಾರ ಸಮೀಪದ ಬಾಣಬೆಟ್ಟು ಎಂಬಲ್ಲಿ ಟಾರ್ಪಲು ಹಾಸಿದ ಗುಡಿಸಲಿನಲ್ಲಿ ವಾಸವಾಗಿರುವ ಆದಿದ್ರಾವಿಡ ಸಮುದಾಯಕ್ಕೆ ಸೇರಿದ ಜಯಲಲಿತಾ ಮತ್ತು ಸವಿತಾರವರ ಬಡ ಕುಟುಂಬದವೊಂದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿಗೆ ನಿಂತಿದ್ದು ಯೋಜನೆಯ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಮುಂದಾಗಿದೆ. ವಾತ್ಸಲ್ಯ ಮನೆ ನಿರ್ಮಾಣಕ್ಕೆ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್‌ರವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪುತ್ತೂರು ತಾಲೂಕಿನಲ್ಲಿ ಇದು ಮೊದಲನೆಯ ವಾತ್ಸಲ್ಯ ಮನೆ ರಚನೆಯಾಗುತ್ತಿದ್ದು, ಯಾವುದೇ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ಕೆಲಸಗಳು ಮುಂದುವರಿಯಲಿ, ಆದಷ್ಟು ಬೇಗ ಮನೆ ಕೆಲಸ ಪೂರ್ಣಗೊಂಡು ಮನೆಯವರು ಹೊಸ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೇಂದ್ರ ಕಚೇರಿಯ ಸುರಕ್ಷಾ ವಿಭಾಗದ ಯೋಜನಾಧಿಕಾರಿ ನಾರಾಯಣ್, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಗ್ರಾಮ ಪಂಚಾಯತ್ ಸದಸ್ಯರಾದ ರೇಖಾ ಬಿಜತ್ರೆ ಮತ್ತು ಮಹೇಶ್ ರೈ, ಕುಂಬ್ರ ವಲಯದ ವಲಯಾಧ್ಯಕ್ಷ ಎಸ್ ಮಾಧವ ರೈ ಕುಂಬ್ರ , ಅಜ್ಜಿಕಲ್ಲು ಒಕ್ಕೂಟದ ಅಧ್ಯಕ್ಷೆ ಸರೋಜ, ಒಳಮೊಗ್ರು ಒಕ್ಕೂಟದ ಅಧ್ಯಕ್ಷ ಗೋವಿಂದ ನಾಯ್ಕ ಗುರಿಕುಮೇರ್, ನಿವೃತ್ತ ಶಿಕ್ಷಕ ಸುಧಾಕರ ರೈ ಕುಂಬ್ರ , ಜ್ಞಾನವಿಕಾಸ ಸಮನ್ವಯಧಿಕಾರಿ ಕಾವ್ಯ , ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸ್ಥಳೀಯರು, ಮನೆಯ ಸದಸ್ಯರು ಉಪಸ್ಥಿತರಿದ್ದರು. ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮನೆಯ ಪಾಯ ತೆಗೆಯುವ ಕೆಲಸವನ್ನು ಮಾಡಿಕೊಟ್ಟರು.
ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಮನೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಪುತ್ತೂರು ತಾಲೂಕಿನ ಮೊದಲ ಮನೆ ಇದಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಅತೀ ಬಡ ಕುಟುಂಬವನ್ನು ಗುರುತಿಸಿ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಬಾಣಬೆಟ್ಟು ಕುಟುಂಬದ ಬಗ್ಗೆ ಮೊತ್ತಮೊದಲಿಗೆ ಸುದ್ದಿ ಬಿಡುಗಡೆ ಸಚಿತ್ರ ವರದಿ ಪ್ರಕಟಿಸಿತ್ತು ಇದನ್ನು ಕಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಂಡ ಭೇಟಿ ನೀಡಿ ಕುಟುಂಬಕ್ಕೆ ಬಗ್ಗೆ ಮಾಹಿತಿ ಪಡೆದುಕೊಂಡು ಇದೀಗ ವಾತ್ಸಲ್ಯ ಮನೆ ನಿರ್ಮಿಸಿ ಕೊಡುತ್ತಿದೆ.
`ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯಡಿ ನಮ್ಮ ತಾಲೂಕಿಗೆ ಮೊದಲ ಮನೆ ಗ್ರಾಮದ ಕೈಕಾರ ಬಾಣಬೆಟ್ಟು ಬಡಕುಟುಂಬಕ್ಕೆ ಯೋಜನೆಯ ವತಿಯಿಂದ ನಿರ್ಮಿಸಿಕೊಡಲಾಗುತ್ತಿದೆ. ತೀರಾ ಬಡ ಕುಟುಂಬವನ್ನು ಗುರುತಿಸಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಆ ಮೂಲಕ ಗ್ರಾಮಾಭಿವೃದ್ಧಿ ಯೋಜನೆ ಬಡವರ ಪರ ಸದಾ ಇದೆ.’
ಎಸ್.ಮಾಧವ ರೈ ಕುಂಬ್ರ,
ವಲಯಾಧ್ಯಕ್ಷರು, ಗ್ರಾಮಾಭಿವೃದ್ಧಿ ಯೋಜನೆ ಒಳಮೊಗ್ರು ವಲಯ