ಕಾಂಚನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅದ್ದೂರಿ ವಾರ್ಷಿಕೋತ್ಸವ

0

ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೊಳಪಟ್ಟ ಶ್ರೀ ಲಕ್ಷ್ಮೀನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ವಾರ್ಷಿಕೋತ್ಸವವು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಬಜತ್ತೂರು ಗ್ರಾಮ ಪಂಚಾಯತ್ ನ ಸದಸ್ಯೆ ಸ್ಮಿತಾ ಅವರು ಧ್ವಜಾರೋಹಣ ನೆರವೇರಿಸಿ, ಮಕ್ಕಳಿಗೆ ಶುಭ ಹಾರೈಸಿದರು. ಬಳಿಕ ಶಾಲೆಯ ಸಂಸ್ಥಾಪಕಿ ರೋಹಿಣಿ ಸುಬ್ಬರತ್ನಂ ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭವನ್ನು ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ ಎರಡು ಶಾಲೆಗಳ ವಾರ್ಷಿಕ ಸಂಚಿಕೆಗಳಾದ ಸುಜ್ಞಾನ ಮತ್ತು ಚಿಗುರು ಹಸ್ತ ಪ್ರತಿಗಳನ್ನು ಅನಾವರಣಗೊಳಿಸಿ, ಶಾಲೆಯ ಪ್ರಗತಿ ಹಾಗೂ ಚಟುವಟಿಕೆಗಳನ್ನು ಗುರುತಿಸಿ, ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ನೀಡಿ ಅಭಿನಂದಿಸಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಷಯವಾರು ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ ಮಯ್ಯ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮಣ ಗೌಡರವರು ವಾರ್ಷಿಕ ವರದಿಯನ್ನು ವಾಚಿಸಿದರು. ಎರಡು ಶಾಲೆಗಳ ವಿದ್ಯಾರ್ಥಿಗಳು 10.30ರಿಂದ 7 ಗಂಟೆಯ ತನಕ ನಿರಂತರವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ರತಿಕಲ್ಯಾಣ ಎಂಬ ಯಕ್ಷಗಾನ ಪ್ರಸಂಗವು ಮಕ್ಕಳಿಂದ ಅತ್ಯದ್ಭುತವಾಗಿ ಮೂಡಿಬಂತು. ಕಾರ್ಯಕ್ರಮಕ್ಕೆ ಎರಡು ಶಾಲೆಗಳ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸುಪ್ರೀತ ಕುಳ್ಳಾಜೆ, ನಯನ, ಊರ ಮಹನೀಯರು, ನಿವೃತ್ತ ಶಿಕ್ಷಕರು, ವಿದ್ಯಾಭಿಮಾನಿಗಳು, ಹಿರಿಯ ವಿದ್ಯಾರ್ಥಿಗಳು , ಪೋಷಕರು, ಯುವಕ ಮಂಡಲದ ಅಧ್ಯಕ್ಷರು ಹಾಗೂ ಸದಸ್ಯರು ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಆಗಮಿಸಿರುವ ಎಲ್ಲರಿಗೂ ಉಪಾಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಾಲಾ ವಾರ್ಷಿಕೋತ್ಸವದ ಯಶಸ್ವಿಗೆ ವಿಕ್ರಂ ಯುವಕ ಮಂಡಲದ ಸದಸ್ಯರು ಸಹಕಾರ ನೀಡಿದ್ದರು.

LEAVE A REPLY

Please enter your comment!
Please enter your name here