ಸ್ನೇಹಸಂಗಮ ಅಟೋರಿಕ್ಷಾ ಚಾಲಕ ಮಾಲಕ ಸಂಘದ 26ನೇ ವಾರ್ಷಿಕ ಮಹಾಸಭೆ – ಆಟೋ ಚಾಲಕರು ಪುತ್ತೂರಿನ ನರನಾಡಿ ಇದ್ದಹಾಗೆ – ಅಶೋಕ್ ರೈ

0

ಪುತ್ತೂರು: ರಿಕ್ಷಾ ಚಾಲಕರು ಜನರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡು ಕರ್ತವ್ಯ ನಿರ್ವಹಿಸುವವರು. ಜನರ ಕಷ್ಟಗಳಿಗೆ ಸ್ಪಂದನೆ ಕೊಡುವವರು ಅಟೋ ಚಾಲಕರು ಪುತ್ತೂರಿನ ನರನಾಡಿ ಇದ್ದಹಾಗೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸ್ನೇಹಸಂಗಮ ಅಟೋರಿಕ್ಷಾ ಚಾಲಕ ಮಾಲಕ ಸಂಘದ 26ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ದಿನವಿಡೀ ಕಷ್ಟದಲ್ಲಿ ಕೆಲಸ ಮಾಡುತ್ತೀರಿ. ಸರಕಾರದಿಂದ ಸೌಲಭ್ಯಗಳನ್ನು ಕೊಡುವ ಪ್ರಯತ್ನ ಮಾಡುತ್ತೇನೆ. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಚಾಲಕರಿಗೂ ದೊರೆಯುವ ಹಾಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರಕಾರಿ ನಿವೇಶನ ಇದ್ದರೆ ನಿಮ್ಮ ಸಂಘದ ಕಛೇರಿ ಕಟ್ಟಡಕ್ಕೆ ಅನುದಾನ ಒದಗಿಸುತ್ತೇನೆ ಎಂದರು. ರಾಜಕೀಯದೊಂದಿಗೆ ಸಂಘದ ನಂಟನ್ನು ಬೆಳೆಸಬೇಕು. ಇದರಿಂದ ಸಂಘ ಬಲಿಷ್ಠವಾಗುತ್ತದೆ. ಬಾಂಧವ್ಯ ಹೆಚ್ಚು ಮಾಡುವ ಕೆಲಸ ಮಾಡಿ ಎಂದು ಹೇಳಿದರು.


ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕುಟ್ಟಿ ಮಾತನಾಡಿ ಅಟೋ ಚಾಲಕರು ಆಪತ್ಭಾಂಧವನಾಗಿರುತ್ತಾರೆ. ಕಷ್ಟಕ್ಕೆ ನೆರವಾಗುವವರು ಎಂದು ಹೇಳಿದ ಅವರು ಸಂಚಾರಿ ನಿಯಮಗಳನ್ನು ತಿಳಿಸಿ ಅಳವಡಿಸುವಂತೆ ಸಲಹೆ ನೀಡಿದರು. ಸಂಘದ ಕಾನೂನು ಸಲಹೆಗಾರರಾದ ಹರಿಣಾಕ್ಷಿ ಜೆ. ಶೆಟ್ಟಿ ಮಾತನಾಡಿ ಸ್ನೇಹಸಂಗಮ ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ಹಲವು ಕಾರ್ಯಕ್ರಮಗಳನ್ನು ಕಂಡಿದ್ದೇನೆ. ನೊಂದವರಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಾಗಿದೆ. ಕಷ್ಟ ಹಾಗೂ ಸುಖದ ಸಂದರ್ಭಗಳಲ್ಲಿಯೂ ನಾವೆಲ್ಲರೂ ಒಟ್ಟಿಗೆ ಸೇರಬೇಕು. ರಿಕ್ಷಾ ಚಾಲಕರು ಪ್ರಾಮಾಣಿಕರಾಗಿರಬೇಕು ಎಂದರು. ಸಂಘದ ಗೌರವ ಸಲಹೆಗಾರ ಜೋಕಿಂ ಡಿಸೋಜ ಮಾತನಾಡಿ ಕೆಲವು ವರ್ಷಗಳ ಹಿಂದೆ ಒಂದು ಸಂದೇಶ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ರಿಕ್ಷಾ ಚಾಲಕ ಮಾಲಕರು ಆಗಮಿಸುತ್ತಿದ್ದರು. ಸಂಘಟನೆ ಬಲಿಷ್ಠವಾಗಿತ್ತು. ಇಂದು ಎಲ್ಲರೂ ಒಟ್ಟಿಗೆ ಸೇರುವುದು ಕಡಿಮೆ ಎಂದರು. ನೀವು ಹಾಕುತ್ತಿರುವ ಖಾಕಿ ಎಲ್ಲರಿಗೂ ರಕ್ಷಣೆ ನೀಡುವಂತಹದ್ದು. ಜನರಿಗೆ ನಿಮ್ಮ ಮೇಲೆ ನಂಬಿಕೆ ಇದೆ. ಎಲ್ಲರೂ ಒಟ್ಟಿಗೆ ಸೇರಿದರೆ ಕಷ್ಟ ಸುಖ ಚರ್ಚಿಸಲು ಸಾಧ್ಯ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ ಪುತ್ತೂರಿನಲ್ಲಿ 25 ವರ್ಷದಿಂದ ಬೆಳೆದು ಬಂದ ಯೂನಿಯನ್ ಅಂದರೆ ಅದು ಸ್ನೇಹಸಂಗಮ ಸಂಘಟನೆ. ಯಾವುದೇ ಜಾತಿ, ಮತ, ಶ್ರೀಮಂತ ಬಡವ ಮೇಲು ಕೀಳು ಭೇದವಿಲ್ಲದೆ ಗುರುತಿಸಿದ ಸಂಸ್ಥೆ. 10 ಜನರನ್ನು ಒಟ್ಟಿಗೆ ಕೊಂಡು ಹೋಗುವ ಗುಣವುಳ್ಳವನು ನಾಯಕನಾಗುತ್ತಾನೆ. ಸಂಘಟನೆ ಶೋಕಿಗಾಗಿ ಅಲ್ಲ. ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಲು ಸಂಘಟನೆ ಬೇಕು. ಹಗಲು ರಾತ್ರಿಯೆನ್ನದೆ ಜನರ ಸೇವೆ ಮಾಡುವವವರು ನೀವು ಎಂದು ಹೇಳಿದ ಅವರು ಸಂಘದ ಸಭೆ ಮಹಾಸಭೆಗಳು ಕ್ಲಪ್ತ ಸಮಯಕ್ಕೆ ನೆರವೇರಬೇಕು ಎಂದು ಸೂಚನೆ ನೀಡಿದರು.


ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ರಾಧಾಕೃಷ್ಣ, ಸ್ನೇಹಸಂಗಮ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅರವಿಂದ ಗೌಡ ಪೆರಿಗೇರಿ, ಪ್ರಧಾನ ಕಾರ್ಯದರ್ಶಿ ತಾರಾನಾಥ ಗೌಡ, ಹಿರಿಯ ರಿಕ್ಷಾ ಚಾಲಕ ವಿಠಲ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧನ್ಯಶ್ರೀ ಸಾನ್ವಿ, ಯಜ್ಞಶ್ರೀ ಪ್ರಾರ್ಥಿಸಿದರು. ಇಸ್ಮಾಯಿಲ್ ಬೊಳುವಾರು ಸ್ವಾಗತಿಸಿದರು. ಸಂಘದ ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕುಮಾರ್ ವಂದಿಸಿದರು. ಖಜಾಂಜಿ ಸಿಲ್ವೆಸ್ಟರ್ ಡಿಸೋಜ, ಉಪಾಧ್ಯಕ್ಷ ಉಮೇಶ್ಚಂದ್ರ, ಸಹಕರಿಸಿದರು. ರಿಕ್ಷಾ ಚಾಲಕ, ಮಾಲಕರು ಉಪಸ್ಥಿತರಿದ್ದರು.

ಶಾಸಕರಿಂದ ರಿಕ್ಷಾ ಪಾರ್ಕಿಂಗ್‌ಗೆ ರೂ.2.5ಲಕ್ಷ ಅನುದಾನ ಘೋಷಣೆ
ಸಂಘದ ಅಧ್ಯಕ್ಷ ಅರವಿಂದ ಗೌಡ ಪೆರಿಗೇರಿರವರು ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಸಂಘದ ಕಛೇರಿ ಕಟ್ಟಡಕ್ಕೆ ನಿವೇಶನ ಒದಗಿಸುವಂತೆ ಸಂಘದ ವತಿಯಿಂದ ಶಾಸಕರಿಗೆ ಮನವಿ ನೀಡಲಾಯಿತು. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆಯ ರಿಕ್ಷಾ ಪಾರ್ಕಿಂಗ್‌ಗೆ ಇಂಟರ್‌ಲಾಕ್ ಅಳವಡಿಕೆಗೆ ಶಾಸಕರು ರೂ.೨.೫ಲಕ್ಷ ಅನುದಾನ ಘೋಷಿಸಿದರು.

ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ
2023-24ನೇ ಸಾಲಿನ ಸಂಘದ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ನಿಕಟಪೂರ್ವ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರು ಸಂಘದ ಪುಸ್ತಕ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here