ಪುತ್ತೂರು: 6 ವರ್ಷಗಳ ಹಿಂದೆ ನಡೆದಿರುವ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತ ಗೌರಿ ಲಂಕೇಶ್ ಅವರ ಹತ್ಯೆ 11ನೇ ಆರೋಪಿಯಾಗಿರುವ ಪುತ್ತೂರು ಚಿಕ್ಕಮುಡ್ನೂರು ಕೆಮ್ಮಾಯಿ ಮೂಲದದವರಾಗಿದ್ದು, ಸುಳ್ಯ ತಾಲೂಕಿನ ಸಂಪಾಜೆ ನಿವಾಸಿ ಮೋಹನ್ ನಾಯಕ್ ಅವರ ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆರೋಪಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಹತ್ಯೆಗೀಡಾದ ಪತ್ರಕರ್ತೆಯ ಸಹೋದರಿ ಕವಿತಾ ಲಂಕೇಶ್ ಅವರು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಅರ್ಜಿಯಲ್ಲಿ ಮೋಹನ್ ನಾಯಕ್‌ಗೆ ಜಾಮೀನು ರದ್ದುಗೊಳಿಸುವಂತೆ ಕವಿತಾ ಲಂಕೇಶ್ ಕೋರಿದ್ದರು.
ಗೌರಿ ಲಂಕೇಶ್ ಹತ್ಯೆ ಆರೋಪಿ ಮೋಹನ್ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಡಿ.7, 2023ರಂದು ಜಾಮೀನು ನೀಡಿತ್ತು. ಮೋಹನ್ ನಾಯಕ್ ಪರ ಹೈಕೋರ್ಟ್‌ನಲ್ಲಿ ವಕೀಲ ಅಮರ್ ಕೊರಿಯಾ ವಾದ ಮಂಡಿಸಿದ್ದರು. ಗೌರಿ ಹತ್ಯೆಯ ಕ್ರಿಮಿನಲ್ ಪಿತೂರಿಯ ಭಾಗವಾಗಿರುವ ಮೋಹನ್ ನಾಯಕ್‌ಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡುವಂತೆ ಕವಿತಾ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.