ಮಂತ್ರಾಕ್ಷತೆ ವಿತರಣೆ ಸಂಚಾಲಕನಾಗಿರುವ ನನಗೆ ಪುತ್ತಿಲ ಪರಿವಾರದವರಿಂದ ಹಲ್ಲೆ-ಸಂತೋಷ್ ಆರೋಪ
ಬೇಲಿ ಕಿತ್ತು ಹಾಕಿದ್ದನ್ನು ವಿಚಾರಿಸಿದ್ದಕ್ಕೆ ಹೆಲ್ಮೆಟ್ನಿಂದ ಹಲ್ಲೆ-ಕೇಶವ ನಾಯ್ಕ್ ಪ್ರತ್ಯಾರೋಪ
ಹಲ್ಲೆ ಪ್ರಕರಣವನ್ನು ತಿರುಚಿದವರ ವಿರುದ್ಧ ಕಾನೂನು ಕ್ರಮ ಪುತ್ತಿಲ ಪರಿವಾರದಿಂದ ಪೊಲೀಸ್ ಇಲಾಖೆಗೆ ಮನವಿ
ಅಕ್ಷತೆ ವಿತರಣೆ ಮಾಡಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಮಾಡಿರುವುದು ಖಂಡನೀಯ-ಕಿಶೋರ್ ಬೊಟ್ಯಾಡಿ
ರಾಜಕೀಯ ಪ್ರೇರಿತ ಹಲ್ಲೆ-ಆರೋಪಿಗಳ ಬಂಧನಕ್ಕೆ ಮಠಂದೂರು ಆಗ್ರಹ
ಹಲ್ಲೆ ಪ್ರಕರಣವನ್ನು ತಿರುಚಿದವರ ವಿರುದ್ಧ ಕಾನೂನು ಕ್ರಮ
ಪುತ್ತೂರು:ಮುಂಡೂರು ಗ್ರಾಮದಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ನಡೆದ ಹಲ್ಲೆ ಪ್ರಕರಣದಲ್ಲಿ ಪುತ್ತಿಲ ಪರಿವಾರವನ್ನು, ಅದರಲ್ಲೂ ರಾಮಮಂದಿರದ ಮಂತ್ರಾಕ್ಷತೆಯನ್ನು ಬಳಸಿಕೊಂಡು ಸುಳ್ಳು ಅಪವಾದ ಮಾಡಿರುವುದು ತೀರಾ ನೀಚ ಕೆಲಸವಾಗಿದ್ದು ಈ ಪ್ರಕರಣವನ್ನು ತಿರುಚಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರ ಮನವಿ ಮಾಡಿದೆ.
500 ವರ್ಷಗಳಿಂದ ಹಿಂದೂ ಸಮಾಜ ಕಾತರದಿಂದ ಕಾಯುತ್ತಿರುವ ಅಮೋಘ ಕ್ಷಣ ಜ.೨೨ರ ಅಯೋಧ್ಯೆಯ ಶ್ರೀ ರಾಮಮಂದಿರ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮಂತ್ರಾಕ್ಷತೆ ವಿತರಿಸುವುದು ಸಹಿತ ರಾಮಮಂದಿರಕ್ಕೆ ಶುಭಕೋರಿ ಪುತ್ತೂರಿನಲ್ಲಿ ಪ್ರಪ್ರಥಮ ೩ಡಿ ಬ್ಯಾನರ್ ಅಳವಡಿಸಿ ರಾಷ್ಟ್ರೀಯ ಹಬ್ಬದಂತೆ ಮನೆ ಮನೆಗಳಲ್ಲಿ ಆಚರಿಸಲು ಪುತ್ತಿಲ ಪರಿವಾರ ರಾಮಮಂದಿರ ಪ್ರತಿಷ್ಠಾಪನೆಯನ್ನು ಆಚರಿಸಲು ಕಾಯುತ್ತಿದ್ದೇವೆ.ಈ ಸಂದರ್ಭದಲ್ಲಿ ಮುಂಡೂರು ಗ್ರಾಮದಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ನಡೆದ ಹಲ್ಲೆ ಪ್ರಕರಣದಲ್ಲಿ ಪುತ್ತಿಲ ಪರಿವಾರವನ್ನು ಅದರಲ್ಲೂ ಹಿಂದೂಗಳ ಪರಮಶ್ರೇಷ್ಠ ರಾಮಮಂದಿರದ ಮಂತ್ರಾಕ್ಷತೆಯನ್ನು ಬಳಸಿಕೊಂಡು ಸುಳ್ಳು ಅಪವಾದ ಮಾಡಿರುವುದು ತೀರಾ ನೀಚವಾದ ಕೆಲಸ.ಜಾಗದ ಗಲಾಟೆಗೆ ನಡೆದ ಘಟನೆ ಎಂದು ಪೊಲೀಸ್ ಎಫ್‌ಐಆರ್‌ನಲ್ಲೇ ಉಲ್ಲೇಖ ಆಗಿದೆ.ಇಂತಹ ಸಂದರ್ಭದಲ್ಲಿ ತಪ್ಪು ಮಾಹಿತಿ ಹೋಗುವ ಮೊದಲು ತಕ್ಷಣ ಸ್ಪಷ್ಟೀಕರಣ ಕೊಟ್ಟು ಗೊಂದಲ ನಿವಾರಿಸಿದ ದಕ್ಷಿಣ ಕನ್ನಡ ಎಸ್ಪಿ ರಿಷ್ಶಂತ್ ಅವರಿಗೆ ಶ್ರೀ ರಾಮಚಂದ್ರನ ಪರಮಭಕ್ತರ ಪರವಾಗಿ ಧನ್ಯವಾದ ಸಮರ್ಪಿಸುತ್ತಾ,ದುರುದ್ದೇಶದಿಂದ ಸಮಾಜದಲ್ಲಿ ತಪ್ಪು ಅಭಿಪ್ರಾಯ, ತೇಜೋವಧೆ, ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಕರಣವನ್ನು ತಿರುಚಿದವರ ವಿರುದ್ದ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪುತ್ತಿಲ ಪರಿವಾರ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.
ಪುತ್ತೂರು:ಮುಂಡೂರು ಸಮೀಪ ಎರಡು ತಂಡಗಳೊಳಗೆ ಹಲ್ಲೆ ನಡೆದು ಇತ್ತಂಡದ ನಾಲ್ವರು ಆಸ್ಪತ್ರೆಯಲ್ಲಿ ದಾಖಲಾಗಿ, ಪರಸ್ಪರ ಆರೋಪ ಹೊರಿಸಿಕೊಂಡಿದ್ದಾರೆ.ಅಯೋಧ್ಯಾ ಮಂತ್ರಾಕ್ಷತೆ ವಿತರಣೆ ಮುಂಡೂರು ಬೂತ್ 188ರ ಸಂಚಾಲಕನಾಗಿರುವ ನನಗೆ ಪುತ್ತಿಲ ಪರಿವಾರದ ಮೂವರು ಹಲ್ಲೆ ನಡೆಸಿದ್ದಾರೆ ಎಂದು ಸಂತೋಷ್ ಬಿ.ಕೆ.ಆರೋಪಿಸಿದ್ದಾರೆ.ನಮ್ಮ ತೋಟದ ಬೇಲಿ ಕಿತ್ತು ಹಾಕುತ್ತಿದ್ದುದನ್ನು ವಿಚಾರಿಸಿದಕ್ಕೆ ಹಲ್ಲೆ ನಡೆಸಿರುವುದಾಗಿ ಕೇಶವ ನಾಯ್ಕ್ ಎಂಬವರು ಆರೋಪಿಸಿದ್ದಾರೆ.
ಜಮೀನಿಗೆ ಅಕ್ರಮ ಪ್ರವೇಶಿಸಿ ಪುತ್ತಿಲ ಪರಿವಾರದವರಿಂದ ಹಲ್ಲೆ: ಮುಂಡೂರು ಗ್ರಾಮ ಪುತ್ತೂರು ನಿವಾಸಿ ಸಂತೋಷ ಬಿ.ಕೆ.(32ವ)ಮತ್ತು ಅವರ ತಾಯಿ ಸವಿತಾ ಎಂಬವರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.‘ನಾನು ಅಯೋಧ್ಯೆ ಶ್ರೀ ರಾಮಮಂದಿರದ ಮಂತ್ರಾಕ್ಷತೆ ವಿತರಣೆಯ ಬೂತ್ ಸಮಿತಿ ಸಂಚಾಲಕನಾಗಿದ್ದು, ಜ.15ರ ರಾತ್ರಿ ನಮ್ಮ ತೋಟದ ಒಳಗೆ ಸ್ಕೂಟರ್ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಮನೆಗೆ ಹೋಗುತ್ತಿದ್ದ ವೇಳೆ ನಮ್ಮ ತೋಟಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಪುತ್ತಿಲ ಪರಿವಾರದ ಕೇಶವ, ಧನಂಜಯ, ಜಗದೀಶ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.ಈ ವೇಳೆ ನನ್ನ ತಾಯಿ ಸವಿತಾ ಅವರು ಅಲ್ಲಿಗೆ ಬಂದಾಗ ಅವರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ.ಗಲಾಟೆಯ ಸಂದರ್ಭ ನನ್ನ ಮೊಬೈಲ್, ರೂ.25 ಸಾವಿರ ಹಣವಿದ್ದ ಪರ್ಸ್ ಕಳೆದು ಹೋಗಿರುತ್ತದೆ’ ಎಂದು ಸಂತೋಷ್ ಬಿ.ಕೆ.ಅವರು ತಿಳಿಸಿದ್ದಾರೆ. ಘಟನೆ ಬಗ್ಗೆ ಅವರು ನೀಡಿದ ದೂರಿನಂತೆ ಕಲಂ IPC1860 (U/s.341,447,323,324,506,34) ಪ್ರಕರಣ ದಾಖಲಾಗಿದೆ.
ಬೇಲಿ ಕಿತ್ತು ಹಾಕುತ್ತಿದ್ದುದನ್ನು ವಿಚಾರಿಸಿದ್ದಕ್ಕೆ ಹಲ್ಲೆ: ಮುಂಡೂರು ಗ್ರಾಮದ ಕೇಶವ ನಾಯ್ಕ್(35ವ.)ಮತ್ತು ಅವರ ತಾಯಿ ಜಯಂತಿ ಎಂಬವರು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.‘ಜ.15ರ ರಾತ್ರಿ ಸಂದೀಪ ಮತ್ತು ಸಂತೋಷರವರ ಪತ್ನಿಯರು ನಮ್ಮ ಜಮೀನಿನ ತಂತಿ ಬೇಲಿಯನ್ನು ಕಿತ್ತು ಹಾಕಲು ಪ್ರಾರಂಭಿಸಿದ್ದು, ಇದನ್ನು ವಿಚಾರಿಸಿದಾಗ ನನಗೆ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ.ಈ ಸಂದರ್ಭ ಅಲ್ಲೇ ಇದ್ದ ಕೊರಗಪ್ಪ ನಾಯ್ಕ್ ಮತ್ತು ಅವರ ಪತ್ನಿ ಸವಿತಾರವರೂ ನನಗೆ ಬೈದಿದ್ದರು.ಈ ಬಗ್ಗೆ ದೂರು ನೀಡಲೆಂದು ನಾನು ಚಿಕ್ಕಪ್ಪನ ಮಗ ಧನಂಜಯರ ಜೊತೆಗೆ ತೆರಳುತ್ತಿದ್ದಾಗ ಕೊರಗಪ್ಪ ನಾಯ್ಕ್‌ರವರ ಮಗ ಸಂತೋಷರವರು ನನ್ನ ತಲೆಗೆ ಹೆಲ್ಮೆಟ್‌ನಲ್ಲಿ ಹಲ್ಲೆ ನಡೆಸಿದ್ದಾರೆ.ಗಲಾಟೆಯ ಶಬ್ದ ಕೇಳಿ ನನ್ನ ತಾಯಿ ಸ್ಥಳಕ್ಕೆ ಬಂದಿದ್ದು, ಅವರಿಗೂ ಸಂತೋಷ,ಇನ್ನಿತರರು ಹಲ್ಲೆ ನಡೆಸಿರುತ್ತಾರೆ’ ಎಂದು ಕೇಶವ ನಾಯ್ಕ್ ಆರೋಪಿಸಿದ್ದಾರೆ. ಅವರು ನೀಡಿದ ದೂರಿನ ಮೇರೆಗೆ ಕಲಂ: IPC1860 (U/s-323,324,504,506,34) ಪ್ರಕರಣ ದಾಖಲಾಗಿದೆ.
ಅಕ್ಷತೆ ವಿತರಣೆ ಮಾಡಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಮಾಡಿರುವುದು ಖಂಡನೀಯ-ಕಿಶೋರ್ ಬೊಟ್ಯಾಡಿ
ಪುತ್ತೂರು:ಅಯೋಧ್ಯೆಯ ಅಕ್ಷತೆ ವಿತರಣೆ ಮಾಡಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಪುತ್ತಿಲ ಪರಿವಾರದವರ ಕೃತ್ಯ ಖಂಡನೀಯ ಎಂದು ಬಿಜೆಪಿ ಯುವ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದ್ದಾರೆ.ಹಲ್ಲೆಗೊಳಗಾದ ಬಿ.ಕೆ.ಸಂತೋಷ್ ಮತ್ತಿತರರನ್ನು ಭೇಟಿಯಾದ ಅವರು ಮಾಧ್ಯಮದ ಜೊತೆ ಮಾತನಾಡಿದರು.ಬಿಜೆಪಿ ಕಾರ್ಯಕರ್ತನ ಮೇಲೆ ಪುತ್ತಿಲ ಪರಿವಾರದ ಯುವಕರು ಹಲ್ಲೆ ಮಾಡಿರುವುದು ಖಂಡನೀಯ, ನಮಗೆ ಶಸ್ತ್ರ ಹಿಡಿದು ಗೊತ್ತು, ಶಾಸ್ತ್ರ ಓದಿಯೂ ಗೊತ್ತು.ಪುತ್ತಿಲ ಅವರು ಒಂದು ಕಡೆ ಬಿಜೆಪಿಗೆ ಬರಬೇಕು ಎಂದು ಹೇಳುತ್ತಿದ್ದಾರೆ.ಅದನ್ನು ನಮ್ಮ ಬಿಜೆಪಿಯ ಹಿರಿಯ ನಾಯಕರು ನಿರ್ಧರಿಸುತ್ತಾರೆ.ಬಿಜೆಪಿಯ ಹಿರಿಯ ನಾಯಕರ ನಿರ್ಧಾರಕ್ಕೆ ನಾವೂ ಬದ್ಧರಾಗಿರುತ್ತೇವೆ.ಆದರೆ ಪುತ್ತಿಲ ಪರಿವಾರ ಒಂದು ಕಡೆ ಸಂಧಾನ, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಮಾಡೋದು ಇದು ಸರಿಯಲ್ಲ, ಬಿಜೆಪಿ ಕಾರ್ಯಕರ್ತ ಸಂತೋಷ್ ಅಯೋಧ್ಯೆಯ ಅಕ್ಷತೆ ವಿತರಣೆ ಮಾಡಿ ಹಿಂತಿರುಗುವಾಗ ಹಲ್ಲೆ ಮಾಡಿದ್ದಾರೆ.ಪುತ್ತಿಲ ಪರಿವಾರದ ಧನಂಜಯ ಮತ್ತು ತಂಡದವರು ಹಲ್ಲೆ ಮಾಡಿದ್ದಾರೆ.ಪುತ್ತಿಲ ಪರಿವಾರ ಗಲಭೆ ಎಬ್ಬಿಸಿ ಸಮಾಜದ ಶಾಂತಿ ಕದಡುವ ಕೆಲಸ ಮಾಡಬೇಡಿ, ಹಿಂದೂ ಸಮಾಜ ಒಗ್ಗಟ್ಟಾಗಿ ಇರುವಂತೆ ನೋಡಿಕೊಳ್ಳೋಣ ಎಂದರು.ಈ ಸಂದರ್ಭ ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು.
ರಾಜಕೀಯ ಪ್ರೇರಿತ ಹಲ್ಲೆ-ಮಠಂದೂರು
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂತೋಷ್ ಅವರ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾಧ್ಯಮದ ಜೊತೆ ಮಾತನಾಡಿ, ಇದೊಂದು ವೈಷಮ್ಯದ ರಾಜಕೀಯ ಪ್ರೇರಿತ ಹಲ್ಲೆಯಾಗಿದ್ದು, ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸುವಂತೆ ಸರಕಾರ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.ಈ ಸಂದರ್ಭ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಆಳ್ವ, ಪುತ್ತೂರು ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್, ಹಿಂದು ಜಾಗರಣಾ ವೇದಿಕೆಯ ಪ್ರಮುಖರಾದ ದಿನೇಶ್ ಪಂಜಿಗ, ಅಜಿತ್ ರೈ ಸಹತ ಹಲವಾರು ಮಂದಿ ಜೊತೆಗಿದ್ದರು.
ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿ ಅಕ್ಕಪಕ್ಕದ ಮನೆಯವರ ಜಗಳ-ಎಸ್ಪಿ
ಸಾಮಾಜಿಕ ಜಾಲತಾಣಗಳಲ್ಲಿ, ಱರಾಮಮಂದಿರದ ಮಂತ್ರಾಕ್ಷತೆ ವಿತರಣೆ ಮಾಡುತ್ತಿದ್ದ ಹಿಂದೂ ಕಾರ್ಯಕರ್ತನ ಮೇಲೆ ಪುತ್ತಿಲ ಪರಿವಾರದ ಬೆಂಬಲಿಗರಿಂದ ಹಲ್ಲೆೞ ಎಂಬುದಾಗಿ ಸುದ್ದಿ ಪ್ರಸಾರವಾಗುತ್ತಿದೆ.ವಾಸ್ತವವಾಗಿ ಪುತ್ತೂರು ತಾಲೂಕು ಮುಂಡೂರು ಗ್ರಾಮದ ಬರೆಕೊಲಾಡಿ ಎಂಬಲ್ಲಿ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ಮನೆಯವರು ಜಗಳವಾಡಿಕೊಂಡು ಪರಸ್ಪರ ಹಲ್ಲೆ ನಡೆಸಿರುವುದಾಗಿದೆ.ಈ ಬಗ್ಗೆ ಈಗಾಗಲೇ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಿನಾಂಕ 15/01/2024ರಂದು ಅ.ಕ್ರ 07-2024 (ಕಲಂ:341,447,323,324,506, ಜೊತೆಗೆ 34 ಐಪಿಸಿ) ಹಾಗೂ ಅ.ಕ್ರ 08-2024 ಕಲಂ: IPC1860 U/s. IPC 1860 (U/s-323,324,504,506 ಜೊತೆಗೆ 34)ರಂತೆ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಎರಡೂ ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುತ್ತದೆ.ಈ ಬಗ್ಗೆ ಸಾರ್ವಜನಿಕರು ಯಾವುದೇ ಸುಳ್ಳುಸುದ್ದಿ/ತಪ್ಪು ಸಂದೇಶಗಳಿಗೆ ಕಿವಿಗೊಡಬಾರದಾಗಿ ವಿನಂತಿ-
ರಿಷ್ಯಂತ್ ಸಿ.ಬಿ., ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ