ಶಿರಾಡಿ ಗ್ರಾ.ಪಂ.ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ

0

ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯತ್‌ನ 2022-23ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಜ.16ರಂದು ಶಿರಾಡಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆಯ ಭರಮಣ್ಣನವರ ಅವರು ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರ ಅವರು ಯೋಜನೆಯ ಕುರಿತು ಮಾಹಿತಿ ನೀಡಿ, ಗ್ರಾಮಸ್ಥರು ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಅನುಷ್ಠಾನಗೊಳಿಸಬೇಕು. ಯೋಜನೆ ಪಾರದರ್ಶಕ ಆಗಿರಬೇಕು. ದುರುಪಯೋಗ ಆಗಕೂಡದು ಎಂದರು. ಶಿರಾಡಿ ಗ್ರಾ.ಪಂ.ನಲ್ಲಿ ನಡೆದ ಕಾಮಕಾರಿಗಳ ಪರಿಶೀಲನೆ ನಡೆಸಲಾಗಿದ್ದು ನ್ಯೂನ್ಯತೆಗಳ ಬಗ್ಗೆ ಗುರುತಿಸಲಾಗಿದೆ. ಕಡತ ನಿರ್ವಹಣೆ ಸಮರ್ಪಕವಾಗಿದೆ ಎಂದು ಅವರು ತಿಳಿಸಿದರು.


ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಯಶವಂತ ಬೆಳ್ಚಡ ಅವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯ ಅನುದಾನ ದುರುಪಯೋಗ ಪಡಿಸಿಕೊಂಡಲ್ಲಿ ಆ ಸವಲತ್ತು ಇನ್ನೊಬ್ಬರಿಗೆ ಸಿಗುವುದಿಲ್ಲ. ಕೋಳಿಶೆಡ್, ದನದ ಹಟ್ಟಿ ಸೇರಿದಂತೆ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಆಗಬೇಕು. ಆ ಉದ್ದೇಶಕ್ಕೆ ಬಳಕೆಯಾಗಬೇಕೆಂದು ಹೇಳಿದರು. ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಅವರು ಮಾತನಾಡಿ, ಗ್ರಾಮಸ್ಥರು ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಮಾಹಿತಿ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಅನುಷ್ಠಾನ ಮಾಡಬೇಕು. ಇದರಿಂದ ಫಲಾನುಭವಿಯ ವೈಯಕ್ತಿಕ ಅಭಿವೃದ್ಧಿಯೊಂದಿಗೆ ಗ್ರಾಮದ ಅಭಿವೃದ್ದಿಯೂ ಆಗಲಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯ ಪ್ರಜ್ವಲ್ ಅವರು ಮಾಹಿತಿ ನೀಡಿದರು.


ಗ್ರಾ.ಪಂ.ಸದಸ್ಯರಾದ ಸಣ್ಣಿಜಾನ್, ಲಕ್ಷ್ಮಣ ಗೌಡ ಕುದ್ಕೋಳಿ, ರಾಧಾ ತಂಗಪ್ಪನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾರದಾ ಪಿ.ಎ.ಸ್ವಾಗತಿಸಿದರು. ಪಿಡಿಒ ಯಶವಂತ ಬೆಳ್ಚಡ ವಂದಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಜಯಮಣಿ, ಶ್ವೇತಾಕ್ಷಿ, ಸುಪ್ರಿಯಾ, ರಮ್ಯ, ಪ್ರಣಮ್ಯ, ಯಶ್ಮಿತಾ, ಪ್ರೇಮಲತಾ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಗ್ರಾ.ಪಂ.ಸಿಬ್ಬಂದಿಗಳಾದ ಏಲಿಯಾಸ್, ಸ್ಮೀತಾ, ರಮ್ಯ, ತೋಮಸ್, ವಿಜಯ, ಸುನಿಲ್ ಸಹಕರಿಸಿದರು.

ನರೇಗಾದಲ್ಲಿ 89.18 ಲಕ್ಷ ರೂ.ಖರ್ಚು:
1-4-2022ರಿಂದ 31-3-2022ರ ಅವಧಿಯ ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾ.ಪಂ.ವತಿಯಿಂದ 219 ಕಾಮಗಾರಿ ಅನುಷ್ಠಾನಗೊಂಡಿದ್ದು 89,18,325 ರೂ.ಖರ್ಚು ಮಾಡಲಾಗಿದೆ. ಇದರಲ್ಲಿ 57,24,225 ರೂ.ಕೂಲಿ ಹಾಗೂ 31,94,100 ರೂ.ಸಾಮಾಗ್ರಿ ಮೊತ್ತ ಪಾವತಿಯಾಗಿದೆ. ಗ್ರಾಮದ 403 ಕುಟುಂಬದ 689 ಮಂದಿ ಕೆಲಸ ನಿರ್ವಹಿಸಿದ್ದು 18,525 ಮಾನವ ದಿನ ಸೃಜನೆಯಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ಗ್ರಾಮದಲ್ಲಿ 13 ಕಾಮಗಾರಿ ನಡೆದಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

LEAVE A REPLY

Please enter your comment!
Please enter your name here