ಉಪ್ಪಿನಂಗಡಿ: ಸ್ಮಶಾನ ಕಟ್ಟಡ ಕಾಮಗಾರಿ ಕಳಪೆ ದೂರು-ಲೋಕಾಯುಕ್ತದಿಂದ ಪರಿಶೀಲನೆ

0

ಉಪ್ಪಿನಂಗಡಿ: ಇಲ್ಲಿನ ದುರ್ಗಾಗಿರಿಯಲ್ಲಿರುವ ಹರಿಶ್ಚಂದ್ರ ಘಾಟ್ ಸ್ಮಶಾನದ ಅಭಿವೃದ್ಧಿಗೆ ಈ ಹಿಂದಿನ ಶಾಸಕ ಸಂಜೀವ ಮಠಂದೂರು ಒದಗಿಸಿದ 16.66 ಲಕ್ಷ ರೂ. ಅನುದಾನದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ದೂರಿಗೆ ಸಂಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಕಾಮಗಾರಿಯ ಪರಿಶೀಲನೆ ನಡೆಸಿದರು.


ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಅನುದಾನದ ಕಾಮಗಾರಿಯನ್ನು ಕೆ ಆರ್ ಡಿ ಐ ಎಲ್ ಮೂಲಕ ಮಾಡಲಾಗಿದ್ದು, ನೆಲಕ್ಕೆ ಇಂಟರ್ ಲಾಕ್ ಅಳವಡಿಕೆ ಹಾಗೂ ತಗಡಿನ ಶೀಟ್ ಅಳವಡಿಸಿದ ಶೆಡ್ ನಿರ್ಮಿಸಲಾಗಿತ್ತು. ಆಪೇಕ್ಷಿತ ಕಾಮಗಾರಿಯಾದ ಶೌಚಾಲಯ ಮತ್ತು ಸ್ನಾನ ಗೃಹದ ನಿರ್ಮಾಣಕ್ಕೆ ಸ್ಮಶಾನ ಸಮಿತಿ ಪಟ್ಟು ಹಿಡಿದಾಗ ಇಕ್ಕಟಾದ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಈ ಬಗ್ಗೆ ನ್ಯಾಯ ಬಯಸಿ ಅಂದಿನ ಶಾಸಕರಿಗೆ ಸತತ ಮನವಿ ಸಲ್ಲಿಸಲಾಗಿತ್ತಾದರೂ, ಸ್ಪಂದನ ದೊರೆಯದಾಗ ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ಸಂಧರ್ಭದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಾಗ ನಿರ್ಮಿಸಲಾಗಿದ್ದ ಶೌಚಾಲಯ ಮತ್ತು ಸ್ನಾನ ಗೃಹಗಳು ಮಂಜೂರಾದ ಅನುದಾನದ ಕಾಮಗಾರಿಯಲ್ಲಿ ಸೇರಿಲ್ಲವೆಂದೂ, ಅದನ್ನು ಹೆಚ್ಚುವರಿ ಕಾಮಗಾರಿಯಾಗಿ ಪರಿಗಣಿಸಲ್ಪಟ್ಟು ಅದಕ್ಕೆ ಬೇರೆಯೇ ಅನುದಾನ ಬಿಡುಗಡೆಯಾಗಬೇಕಾಗಿದೆ ಎಂದು ತಿಳಿದು ಬಂದಿತ್ತು. ಈ ಮಧ್ಯೆ ಪ್ರಕರಣದಲ್ಲಿ ಕೆ ಆರ್ ಡಿ ಐ ಎಲ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸರಕಾರದ ಅನುಮತಿ ಬಯಸಿ ಭ್ರಷ್ಟಾಚಾರ ನಿಗ್ರಹ ದಳ ಸರಕಾರದ ಅನುಮತಿಯನ್ನು ಕೇಳಿತ್ತು.


ಈ ಬೆಳವಣಿಗೆಯ ನಡುವೆ ಭ್ರಷ್ಟಾಚಾರ ನಿಗ್ರಹ ದಳವು ಲೋಕಾಯುಕ್ತದಲ್ಲಿ ಲೀನವಾಗಿ, ಪ್ರಕರಣ ಲೋಕಾಯುಕ್ತದ ಅಧೀನಕ್ಕೆ ಒಳಪಟ್ಟಿತ್ತು. ಆ ಬಳಿಕ ಲೋಕಾಯುಕ್ತ ಅಧಿಕಾರಿಗಳು ಎರಡನೇ ಬಾರಿ ಸ್ಥಳ ಪರಿಶೀಲನೆ ನಡೆಸಿದ್ದು, ಸ್ಥಳೀಯ ಪಂಚಾಯತ್ ಪಿಡಿಒ ಅವರ ಸಮಕ್ಷಮ ಪರಿಶೀಲನಾ ಕಾರ್ಯ ನಡೆಸಿದ್ದಾರೆ. ಈ ಎರಡೂ ಪರಿಶೀಲನಾ ಪ್ರಕ್ರಿಯೆಯ ವೇಳೆ ದೂರುದಾರನ್ನು ದೂರವಿಟ್ಟೇ ಪರಿಶೀಲನಾ ಪ್ರಕ್ರಿಯೆ ನಡೆದಿರುವುದು ನಾನಾ ಶಂಕೆ, ಸಂದೇಹಗಳಿಗೆ ಕಾರಣವಾಗಿದೆ.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಅಮಾನುಲ್ಲಾ ನೇತೃತ್ವದ ಅಧಿಕಾರಿಗಳ ಪರಿಶೀಲನಾ ಕಾರ್ಯದ ಸಮಯದಲ್ಲಿ ಪಂಚಾಯತ್ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರೀಗಸ್, ಪಂಚಾಯತ್ ಸದಸ್ಯ ಧನಂಜಯ ಕುಮಾರ್, ಸ್ಥಳೀಯರಾದ ಹೊನ್ನಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here