ಜಾಗದ ರಸ್ತೆ ವಿಚಾರದೊಂದಿಗೆ ಅಕ್ಷತೆಯ ವಿತರಣೆಯೂ ಹಲ್ಲೆಗೆ ಮೂಲ ಕಾರಣ – ಹಲ್ಲೆಗೊಳಗಾದ ಸಂತೋಷ್, ಅವರ ಸಹೋದರ ಸಂದೀಪ್ ಅವರಿಂದ ಸ್ಪಷ್ಟನೆ

0

ಪುತ್ತೂರು: ಮುಂಡೂರು ಬರೆಕೊಲಾಡಿಯಲ್ಲಿ ಜ.15ರಂದು ರಾತ್ರಿ ನಡೆದ ಹಲ್ಲೆ ಘಟನೆಗೆ ಮೂಲ ಕಾರಣ ಕೇವಲ ಜಾಗದ ರಸ್ತೆ ವಿಚಾರ ಮಾತ್ರವಲ್ಲ ಅಕ್ಷತೆ ವಿತರಣೆಯೂ ಕಾರಣವಾಗಿದೆ ಎಂದು ಹಲ್ಲೆಗೊಳಗಾಗಿರುವ ಮುಂಡೂರು ಗ್ರಾಮದ ಬರೆಕೋಲಾಡಿ ನಿವಾಸಿ ಸಂತೋಷ್ ಬಿ.ಕೆ ಮತ್ತು ಅವರ ಸಹೋದರ ಸಂದೀಪ್ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮುಂಡೂರು ಗ್ರಾಮದ ಬರೆಕೋಲಾಡಿಯಲ್ಲಿ ಸಂದೀಪ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾವು ಬಿಜೆಪಿ ಸಂಘ ಪರಿವಾರದ ಸಕ್ರೀಯ ಕಾರ್ಯಕರ್ತರಾಗಿದ್ದು, ನನ್ನ ಸಹೋದರ ಸಂತೋಷ್ ಬಿ.ಕೆ ಜ.15ರ ರಾತ್ರಿ ಕುಕ್ಕಿನಡ್ಕ ದೇವಸ್ಥಾನದಲ್ಲಿ ಅಕ್ಷತಾ ವಿತರಣೆ ಸಭೆಯನ್ನು ಮುಗಿಸಿ ಬರುತ್ತಿದ್ದಾಗ ನಮ್ಮ ವರ್ಗ ಜಾಗದಲ್ಲಿ ಅಡಗಿ ಕುಳಿತ ಪುತ್ತಿಲ ಪರಿವಾರದ ಧನಂಜಯ, ಕೇಶವ ಮತ್ತು ಜಗದೀಶ್ ಅವರು ನನ್ನ ಸಹೋದರ ಸಂತೋಷ್ ಅವರಿಗೆ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಸಂತೋಷ್ ಪ್ರಜ್ಞೆ ತಪ್ಪಿ ಅಲ್ಲೇ ಬಿದ್ದಿದ್ದ. ಶಬ್ದ ಕೇಳಿ ನನ್ನ ತಾಯಿ ಸವಿತಾ ಅವರು ಓಡಿ ಬಂದಾಗ ಅವರನ್ನು ದೂಡಿ ಹಾಕಿದ್ದಾರೆ. ಆ ಸಂದರ್ಭ ನಾನು ಮನೆಯೊಳಗಿದ್ದೆ. ನಾನು ಮತ್ತು ತಂದೆ ಅಲ್ಲಿಗೆ ಬಂದು ಸಂತೋಷ್ ಮತ್ತು ತಾಯಿಯನ್ನು ಆಸ್ಪತ್ರೆಗೆ ಕರೆ ತಂದಿದ್ದೇವೆ. ನಮ್ಮ ಜಾಗದ ರಸ್ತೆಗೆ ಅರುಣ್ ಕುಮಾರ್ ಪುತ್ತಿಲ ಅವರು ಮೂರು ವರ್ಷದ ಹಿಂದೆ ರಸ್ತೆ ಬಂದ್ ಮಾಡಿಸಿದ್ದರು. ಇದರ ಜೊತೆಯಲ್ಲೇ ಅಕ್ಷತೆ ವಿತರಣೆಯ ಜವಾಬ್ದಾರಿ ಧನಂಜಯನಿಗೆ ಸಿಗಲಿಲ್ಲ ಎಂಬ ಅಸಮಾಧನವಿತ್ತು. ಜಾಗದ ರಸ್ತೆಯು ಪಂಚಾಯತ್ ರಸ್ತೆಯಾಗಿದ್ದು, ಅದಕ್ಕೆ ಸಂಜೀವ ಮಠಂದೂರು ಅವರ ಶಾಸಕತ್ವದ ಅವಧಿಯಲ್ಲಿ ರೂ.10 ಲಕ್ಷ ಅನುದಾನ ಇರಿಸಿ ಕಾಂಕ್ರೀಟ್‌ಗೆ ಪಾಸ್ ಆಗಿದೆ. ನಾಡಜೆ ಬರೆಕೋಡಲಾಡಿಯ ರಸ್ತೆಯ ಕೊನೆಯಲ್ಲಿ ನಮ್ಮ ಮನೆ ಇರುವುದು. ಆದರೆ ಧನಂಜಯ ಅವರು ನಮ್ಮ ಮನೆಗೆ ಹೋಗುವ ದಾರಿಯನ್ನು ಅವರ ವರ್ಗ ಜಾಗವೆಂದು ನಮ್ಮ ಮನೆಯ ಗೇಟ್ ಮುಂದೆ ಬೇಲಿ ಹಾಕಿದ್ದರು. ಈ ಕುರಿತು ಹಲವು ಬಾರಿ ಸರ್ವೆ ಕಾರ್ಯ ನಡೆದಿದೆ. ತಹಸೀಲ್ದಾರ್, ಇ.ಒ, ಪಂಚಾಯತ್‌ನಿಂದ ಬಂದು ಹೋಗಿದ್ದಾರೆ. ಪಂಚಾಯತ್ ಸದಸ್ಯ ಅರುಣ್ ಕುಮಾರ್ ಪುತ್ತಿಲ ಸಹೋದರ ಅಶೋಕ್ ಪುತ್ತಿಲ ಆಗಿರುವುದರಿಂದ ನಮಗೆ ಅಧಿಕಾರಿಗಳ ಮೂಲಕ ಅನ್ಯಾಯ ಮಾಡಿದ್ದಾರೆ. ಈ ನಡುವೆ ನಮ್ಮ ವರ್ಗ ಜಾಗದಲ್ಲಿರುವ ಕಾಲು ದಾರಿಯಿಂದ ರಸ್ತೆಗೆ ಅವಕಾಶ ನೀಡಿದರೂ ಅಲ್ಲೂ ಸಮಸ್ಯೆ ಉಂಟಾಗಿತ್ತು. ಒಟ್ಟಿನಲ್ಲಿ ನಮಗೆ ರಸ್ತೆಗೆ ಅಡ್ಡಿ ಪಡಿಸಿದ್ದು ಅರುಣ್ ಕುಮಾರ್ ಪುತ್ತಿಲ. ಜಾಗದ ವಿಚಾರದಲ್ಲಿ ಇವರೇ ಮೈನ್ ಎಲ್ಲಿ ಬೇಕಾದರೂ ನಾನು ಪ್ರಮಾಣ ಮಾಡುತ್ತೇನೆ ಎಂದವರು ಹೇಳಿದರು.

ಅಕ್ಷತೆ ವಿತರಣೆಗೆ ಸಂಚಾಲಕನಾದ ನನ್ನಲ್ಲಿ ಒಂದು ಮಾತು ಕೇಳಿಲ್ಲ:
ಸಂತೋಷ್ ಬಿ.ಕೆ ಅವರು ಮಾತನಾಡಿ ಅಯೋಧ್ಯೆ ಶ್ರೀರಾಮನ ಅಕ್ಷತೆ ವಿತರಣೆಗೆ ಹಿರಿಯರ ಮಾರ್ಗದರ್ಶನದಂತೆ ನಾನು ಮುಂಡೂರು ಬೂತ್‌ನ ಅಕ್ಷತೆ ವಿತರಣೆಯ ಸಂಚಾಲಕನಾಗಿದ್ದು ಸುಮಾರು 200ಕ್ಕೂ ಮಿಕ್ಕಿ ಮನೆಗಳಿಗೆ ಕಾರ್ಯಕರ್ತರು ತಂಡವಾಗಿ ಅಕ್ಷತೆಯನ್ನು ಮನೆ ಮನೆಗೆ ವಿತರಣೆ ಮಾಡುತ್ತಿದ್ದೇವೆ. ಗುರುವಾರ ಅಕ್ಷತೆ ವಿತರಣೆಯ ಬಳಿಕ ಉಳಿದ 25 ಮನೆಗಳಿಗೆ ಮುಂದೆ ಆದಿತ್ಯವಾರ ವಿತರಣೆ ಕಾರ್ಯಕ್ರಮ ಇಟ್ಟುಕೊಂಡು ಕಲಶವನ್ನು ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಇರಿಸಿದ್ದೆವು. ಆದರೆ ಶುಕ್ರವಾರ ದಿನ ಅರುಣ್ ಕುಮಾರ್ ಪುತ್ತಿಲ ಮತ್ತು ತಂಡ ನಮಗೆ ಮಾಹಿತಿ ನೀಡದೆ ದೇವಸ್ಥಾನದಲ್ಲಿರಿಸಿದ್ದ ಅಕ್ಷತೆ ಕಲಶವನ್ನು ಕೊಂಡು ಹೋಗಿದ್ದಾರೆ. ಸುಮಾರು 10 ಮನೆಗಳಿಗೆ ಅಕ್ಷತೆ ವಿತರಣೆ ಮಾಡಿದ್ದಾರೆ. ಈ ವೇಳೆ ನಮ್ಮ ಮನೆಗೂ ಬಂದು ಅಕ್ಷತೆ ವಿತರಣೆ ಮಾಡಿದ್ದಾರೆ. ಆಗ ನಮಗೆ ಅದನ್ನು ಪ್ರಶ್ನಿಸಬಹುದಿತ್ತು. ಆದರೆ ಅಯೋಧ್ಯೆಯ ಶ್ರೀರಾಮನ ಅಕ್ಷತೆಗೆ ಗೌರವ ನೀಡಿ ಯಾವುದೇ ರೀತಿಯಲ್ಲಿ ಪ್ರಶ್ನೆ ಮಾಡದೆ ಗೌರವದಿಂದ ಅಕ್ಷತೆಯನ್ನು ಪಡೆದುಕೊಂಡಿದ್ದೇವೆ. ಮಾರನೇ ದಿನ ಶನಿವಾರ ನಾವು ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಹೋಗಿ ಕಲಶವನ್ನು ಪಡೆದು ಕೊಂಡು ಇತರ ಮನೆಗಳಿಗೆ ವಿತರಣೆ ಮಾಡಿ ಕಲಶವನ್ನು ಶುದ್ದತೆಯ ದೃಷ್ಟಿಯಿಂದ ಪ್ರಶಾಂತ್ ಅವರ ಮನೆಯಲ್ಲಿ ಕಡೆ ಇಟ್ಟಿದ್ದೆವು. ಇದೇ ವಿಚಾರವಾಗಿ ಅವರು ದೇವಸ್ಥಾನದಲ್ಲಿ ಅವರಿಗೆ ಅಕ್ಷತೆ ಕಲಶ ಸಿಗಲಿಲ್ಲ ಎಂದು ಕೋಪಗೊಂಡು ನಮಗೆ ಧನಂಜಯರವರ ಮೂಲಕ ಹಲ್ಲೆ ನಡೆಸಿದ್ದಾರೆ. ಅಕ್ಷತೆ ಸಂಚಾಲನಾಗಿರುವ ನನಗೆ ಅಕ್ಷತೆ ವಿತರಣೆ ಜವಾಬ್ದಾರಿ ಇರುವುದರಿಂದ ಅದನ್ನು ಪ್ರಾಮಾಣಿಕವಾಗಿ ವಿತರಣೆ ಮಾಡುವ ಕಾರ್ಯ ಮಾಡುತ್ತಿದ್ದೇವೆ. ಅಕ್ಷತೆ ವಿತರಣೆಗೆ ಅರುಣ್ ಕುಮಾರ್ ಪುತ್ತಿಲ ಮತ್ತು ತಂಡದವರು ನಮ್ಮೊಂದಿಗೆ ಬಂದು ಸೇರಬಹುದಿತ್ತು. ಆದರೆ ಅವರು ನಮಗೆ ಒಂದು ಮಾತು ಕೇಳದೆ ದೇವಸ್ಥಾನದಲ್ಲಿಟ್ಟ ಅಕ್ಷತೆ ಕಲಶವನ್ನು ತೆಗೆದು ಕೊಂಡು ಹೋಗಿರುವುದು ಸರಿಯಲ್ಲ ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸವಿತಾ ಉಪಸ್ಥಿತರಿದ್ದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://youtu.be/aOUqHB6R52k

LEAVE A REPLY

Please enter your comment!
Please enter your name here