ಪುತ್ತೂರು: ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನು ಜೀವನದಲ್ಲಿ ಅವಳವಡಿಸಿ ಕೊಂಡು ಸಮಾಜದ ಅಭಿವೃದ್ದಿಯೊಂದಿಗೆ ತಮ್ಮ ವೈಯಕ್ತಿಕ ಬೆಳವಣಿಗೆಗೆ ಪೂರಕವಾದ ಜೀವನ ಕೌಶಲ್ಯವನ್ನು ಬೆಳೆಸಿಕೊಳ್ಳಿ. ಗುರಿ ತಲುಪುವ ತನಕ ಸಾಧನೆಯನ್ನು ಬಿಡಬೇಡಿ ಎಂದು ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಶಿವಣ್ಣ ಹೇಳಿದರು.
ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು, ಪ್ರಗತಿ ಸ್ಪೆಶಾಲಿಟಿ ಹಾಸ್ಪಿಟಲ್ ಎಜುಕೇಶನಲ್ ಟ್ರಸ್ಟ್ ಬೊಳುವಾರು ಪುತ್ತೂರು, ಚ್ಯೆಲ್ಡ್‌ರೈಟ್ ಸಂಸ್ಥೆ ಬೆಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಗತಿ ಸೂಪರ್ ಸ್ಪೆಷಾಲಿಸ್ಟ್ ಹಾಸ್ಪಿಟಲ್‌ನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವದಿನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ಯುವ ಜನತೆ ದುಶ್ಚಚಟಗಳಿಗೆ ಬಲಿಯಾಗದೆ ಉತ್ತಮ ಸಂಸ್ಕತಿಯನ್ನು ಬೆಳೆಸಿಕೊಳ್ಳಿ ಎಂದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಪ್ರಗತಿ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್ ಆಡಳಿತ ನಿರ್ದೇಶಕ ಡಾ.ಶ್ರೀಪತಿ ರಾವ್ ಅವರು ಮಾತನಾಡಿ, ಯುವ ಜನರು ಕಲಿಕೆಯೊಂದಿಗೆ ಕಾನೂನು ಮಾಹಿತಿ ಪಡೆದುಕೊಂಡು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಬೇಕು ಎಂದರು. ಚೈಲ್ಡ್‌ರೈಟ್ ಸಂಸ್ಥೆಯ ತಾಲೂಕು ಸಂಯೋಜಕಿ ಕಸ್ತೂರಿ ಆರ್ ಅವರು ಯುವಜನತೆಯ ಮಾಹಿತಿ ಕಾರ್‍ಯಕ್ರಮದ ಉದ್ದೇಶದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಯುವಜನತೆ ಮತ್ತು ಕಾನೂನು ಈ ಬಗ್ಗೆ ವಕೀಲರ ಸಂಘದ ಕೋಶಾಧಿಕಾರಿ ಶ್ಯಾಮ್ ಪ್ರಸಾದ ಕೈಲಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಸಮಾರಂಭದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಸ್ವಾಗತಿಸಿ, ದ.ಕ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಆಡಳಿತ ಮಂಡಳಿ ಸದಸ್ಯೆ ಸುಮಂಗಲಾ ಶೆಣೈ ಕಾರ್ಯಕ್ರಮ ಸಂಘಟಿಸಿ ವಂದಿಸಿದರು. ಪ್ಯಾರಾ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲೆ ಚೈತ್ರ ಕೆ ಕಾರ್‍ಯಕ್ರಮ ನಿರೂಪಿಸಿದರು. ಪ್ಯಾನಲ್ ವಕೀಲೆ ಪ್ರಿಯಾ ಮಹೇಶ್ ಉಪಸ್ಥಿತರಿದ್ದು ಕಾನೂನು ಸೇವೆಗಳ ಸಮಿತಿ ಸಿಬ್ಬಂದಿ ಜ್ಯೋತಿ ಹಾಗೂ ಹರೀಶ್‌ರವರು ಸಹಕರಿಸಿದರು.