ಕೆದಂಬಾಡಿ ಗ್ರಾಪಂ ವಠಾರದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

0

ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ, ಮೋದಿ ಜಗತ್ತಿನ ನಾಯಕರಾಗುತ್ತಿದ್ದಾರೆ: ನಳಿನ್ ಕುಮಾರ್

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ಭಾರತ ಅಭಿವೃದ್ಧಿಯತ್ತ ಸಾಗುತ್ತಿದ್ದು ಮೋದಿಯವರು ಜಗತ್ತಿನ ಅಗ್ರಮಾನ್ಯ ನಾಯಕರಾಗಿ ಮಿಂಚುತ್ತಿದ್ದಾರೆ. ಮೋದಿಯವರ ಜನಪರ ಯೋಜನೆಗಳಿಂದ ದೇಶದ ಬಡ ಜನರು ಶ್ರೀಮಂತರಾಗುತ್ತಿದ್ದಾರೆ. ಹಸಿವು ಮುಕ್ತ ಭಾರತ ನಿರ್ಮಾಣದೊಂದಿಗೆ ಆರ್ಥಿಕವಾಗಿ ಎಲ್ಲ ದೇಶಗಳಿಗಿಂತಲೂ ಇಂದು ಭಾರತ ಬಹಳಷ್ಟು ಸದೃಢ ದೇಶವಾಗಿ ಹೊರಹೊಮ್ಮಿದೆ. ಇವೆಲ್ಲವೂ ಪ್ರಧಾನಿ ಮೋದಿಯವರ ಜನಪರ ಆಡಳಿತದಿಂದ ಸಾಧ್ಯವಾಗಿದೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಗ್ರಾಮ ಪಂಚಾಯತ್ ಕೆದಂಬಾಡಿ, ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆ ಇವರ ಸಹಕಾರದೊಂದಿಗೆ ಜ.18ರಂದು ಕೆದಂಬಾಡಿ ಗ್ರಾಪಂ ಕಛೇರಿಯ ವಠಾರದಲ್ಲಿ ಜರಗಿದ ಕೇಂದ್ರ ಸರಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೋದಿಯವರ ಜನಕಲ್ಯಾಣ ಯೋಜನೆಗಳು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಪ್ರಯೋಜನ ಸಿಗಬೇಕು, ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಬರಬೇಕು ಎನ್ನುವ ಮೋದಿಯ ಆಶಯ ಹಾಗೂ ಉದ್ದೇಶವೇ ಈ ವಿಕಸಿತ ಭಾರತ ಸಂಕಲ್ಪ ಯಾತ್ರೆಯದ್ದಾಗಿದೆ ಎಂದ ಕಟೀಲ್‌ರವರು, ಕೋವಿಡ್‌ನ ಬಳಿಕ ಬಹುತೇಕ ದೇಶಗಳ ಆರ್ಥಿಕ ಸ್ಥಿತಿ ಬಿದ್ದು ಹೋಗಿದ್ದರೂ ಭಾರತ ಆರ್ಥಿಕವಾಗಿ ಸದೃಢ ದೇಶವಾಗಿದೆ ಇದಕ್ಕೆ ಮೋದಿಯವರೇ ಕಾರಣರಾಗಿದ್ದಾರೆ ಎಂದರು.

ಬಡವರು ಶ್ರೀಮಂತರಾಗುತ್ತಿದ್ದಾರೆ
ಮೋದಿಯವರ ಜನಪರ ಯೋಜನೆಗಳಿಂದಾಗಿ ಇಂದು ದೇಶದ ಕೋಟಿ ಕೋಟಿ ಬಡಜನರು ಶ್ರೀಮಂತರಾಗಿದ್ದಾರೆ. ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ, ಉಚಿತ ಉಜ್ವಲ್ ಗ್ಯಾಸ್, ರೈತರಿಗೆ ಕಿಸಾನ್ ಸಮ್ಮಾನ್, ಬೆಳೆ ವಿಮೆ ಇತ್ಯಾದಿಗಳಿಂದ ಇವತ್ತು ಕೃಷಿಕರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದ ನಳಿನ್ ಕುಮಾರ್ ಕಟೀಲ್‌ರವರು ಒಂದು ರಾಜ್ಯದಲ್ಲಿ ಸುಮಾರು 1 ಕೋಟಿ ಕುಟುಂಬಗಳಿಗೆ ಹಾಗೇ ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಕುಟುಂಬಗಳಿಗೆ ಉಜ್ವಲ್ ಗ್ಯಾಸ್ ಕೊಡುವ ವ್ಯವಸ್ಥೆ ಆಗಿದೆ. ಒಟ್ಟಿನಲ್ಲಿ ಮೋದಿಯವರ ಆಡಳಿತದಿಂದ ಭಾರತ ಇಂದು ಅಭಿವೃದ್ಧಿಯ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂದರು ಅವರು ಹೇಳಿದರು.

ಸಾಧಕರಿಗೆ ಸನ್ಮಾನ
ಗ್ರಾಮದಲ್ಲಿ ಸಾಧನೆ ಮಾಡುತ್ತಿರುವ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬಾಳಪ್ಪ ಪೂಜಾರಿ ಬಾಳಯ, ಉದ್ಯಮ ಕ್ಷೇತ್ರದಲ್ಲಿ ಪುರಂದರ ರೈ ಮಿತ್ರಂಪಾಡಿ, ಕ್ರೀಡಾ ಕ್ಷೇತ್ರದಲ್ಲಿ ದೀಕ್ಷಾ, ಉದ್ಯೋಗ ಖಾತರಿ ಯೋಜನೆಯ ಮೂಲಕ ಸಾಧನೆ ಮಾಡಿದ ನಳಿನಿ ಹಾಗೇ ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವ ವೀಣಾ ಭಾಸ್ಕರ ಬಲ್ಲಾಳ್‌ರವರುಗಳನ್ನು ಸಂಸದರು ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

ಸ್ವಸ್ಥ ಬಾಲಕ್ ಗೌರವ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ವತಿಯಿಂದ ವಯಸ್ಸಿಗನುಗುಣವಾಗಿ ಎತ್ತರ ಮತ್ತು ತೂಕವಿರುವ ಗಂಡು ಮಕ್ಕಳನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅದರಲ್ಲಿ ತಿಂಗಳಾಡಿ ಅಂಗನವಾಡಿಯ ಪ್ರಿತೇಶ್, ಬೋಳೋಡಿ ಅಂಗನವಾಡಿಯ ಪ್ರತ್ವೀಶ್ ಕುಮಾರ್, ಸನ್ಯಾಸಿಗುಡ್ಡೆ ಅಂಗನವಾಡಿಯ ಪ್ರಥಮ್, ಇದ್ಪಾಡಿಯ ಗಾಯನ್ ಆರ್.ರೈ, ಸಾರೆಪುಣಿಯ ಸಾತ್ವಿಕ್ ಆರ್ ಮತ್ತು ತ್ಯಾಗರಾಜರಸ್ತೆ ಅಂಗನವಾಡಿಯ ದುವಿತ್‌ರವರುಗಳನ್ನು ಸಂಸದರು ಸ್ಮರಣಿಕೆ ನೀಡಿ ಅಭಿನಂದಿಸಿದರು.

ಫಲಾನುಭವಿಗಳಿಗೆ ಸವಲತ್ತು ವಿತರಣೆ
ಉಜ್ವಲ್ ಗ್ಯಾಸ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಯಿತು. ಕೆನರಾ ಬ್ಯಾಂಕ್ ಮೂಲಕ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಸಾಲ ಪತ್ರ ವಿತರಣೆ, ಕೆದಂಬಾಡಿ ಗ್ರಾಪಂನಿಂದ ಎಸ್‌ಸಿ,ಎಸ್‌ಟಿ ನಳ್ಳಿ ಫಲಾನುಭವಿಗಳಿಗೆ ಉಚಿತ ನಳ್ಳಿ ನೀರು ಬಳಕೆ ಬಗ್ಗೆ ಪ್ರಮಾಣಪತ್ರ ನೀಡಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ ಮಾತನಾಡಿ, ಈ ದೇಶದ ಬೆನ್ನೆಲುಬು ಎಂದೇ ಕರೆಸಿಕೊಂಡಿರುವ ಕೃಷಿಕರಿಗೆ ಈ ದೇಶದ ಪ್ರಧಾನಿ ಮೋದಿಯವರು ಎಲ್ಲಾ ವಿಧದಲ್ಲೂ ಸಹಾಯ ಮಾಡುತ್ತಿದ್ದಾರೆ. ರೈತನೊಬ್ಬ ಗೆದ್ದರೆ ನೂರು ಕುಟುಂಬಗಳು ಗೆದ್ದಂತೆ ಅದೇ ರೈತನೊಬ್ಬ ಸೋತರೆ ಅದೆಷ್ಟೋ ಕುಟುಂಬಗಳು ಸೋತಂತೆ ಆದ್ದರಿಂದ ಅನ್ನದಾನರಿಗೆ ಕೇಂದ್ರ ಸರಕಾರ ಬಹಳಷ್ಟು ಯೋಜನೆಗಳನ್ನು ಕೊಡುವ ಮೂಲಕ ಅನ್ನದಾತರ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದ್ದು ಈ ನಿಟ್ಟಿನಲ್ಲಿ ನಾನು ಪ್ರಧಾನ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರಂತಹ ಪ್ರಧಾನಿಯಿಂದ ಈ ದೇಶ ಮತ್ತಷ್ಟು ಬಲಿಷ್ಠ, ಸಮೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬೂಡಿಯಾರ್ ಗ್ಯಾಸ್ ಏಜೆನ್ಸಿ ಮಾಲಕ, ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕರಿ ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಬೀಡು, ಕೆದಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ಪುತ್ತೂರು ಕೆನರಾ ಬ್ಯಾಂಕ್‌ನ ಆರ್‌ಓ ಅರುಣ್ ಕುಮಾರ್, ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆಯ ಮ್ಯಾನೇಜರ್ ಸುಪ್ರೀಯಾ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ಆಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಎಫ್‌ಎಲ್‌ಸಿ ಗೀತಾ ವಿಜಯ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆದಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರ ಸ್ವಾಗತಿಸಿದರು. ಶರತ್ ಕುಮಾರ್ ಗುತ್ತು ಸಂಕಲ್ಪ ಪ್ರತಿಜ್ಞೆ ಬೋಧಿಸಿದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕೆದಂಬಾಡಿ ಗ್ರಾಪಂ ಸದಸ್ಯರುಗಳಾದ ಕೃಷ್ಣಕುಮಾರ್ ಇದ್ಯಪೆ, ಪ್ರವೀಣ್ ಶೆಟ್ಟಿ ತಿಂಗಳಾಡಿ, ರೇವತಿ ಬೋಳೋಡಿ, ವಿಠಲ ರೈ ಮಿತ್ತೋಡಿ, ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ, ಸದಸ್ಯ ರಾಜೇಶ್ ಮಣಿಯಾಣಿ, ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ನಿತೀಶ್ ಕುಮಾರ್ ಶಾಂತಿವನ, ವಿಜಯ ಕುಮಾರ್ ರೈ ಕೋರಂಗ, ಆರ್.ಸಿ ನಾರಾಯಣ್, ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ, ಬಾಬು ಬೊಮ್ಮನಗುಂಡಿ,ದಯಾನಂದ ಶೆಟ್ಟಿ ಅಲ್ಲದೆ ಹಲವು ಮಂದಿ ಗಣ್ಯರು, ಉದ್ಯಮಿಗಳು, ರಾಜಕೀಯ ನಾಯಕರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಬ್ಯಾಂಕ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರಿಂದ ದೇಶಭಕ್ತಿ ಗೀತೆ ನಡೆಯಿತು. ಗ್ರಾಮ ಆಡಳಿತ ಅಧಿಕಾರಿ ಸುಜಾತ, ಸಹಾಯಕ ಶ್ರೀಧರ್, ಪಂಚಾಯತ್ ಸಿಬ್ಬಂದಿಗಳಾದ ಜಯಂತ ಮೇರ್ಲ, ಗಣೇಶ್, ವಿದ್ಯಾಪ್ರಸಾದ್, ಮೃದುಳ, ಶಶಿಪ್ರಭಾ ರೈ ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಸಹಕರಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮೋದಿಯವರ ಲೈವ್ ಕಾರ್ಯಕ್ರಮ ಪ್ರಸಾರಗೊಂಡಿತು.

LEAVE A REPLY

Please enter your comment!
Please enter your name here