ಪುತ್ತೂರು: ನಾಯಿ ಕಚ್ಚಿ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಜ.18ರಂದು ಕುಂಬ್ರ ಪರಿಸರದಿಂದ ವರದಿಯಾಗಿದೆ.
ಕುಂಬ್ರ ಸಮೀಪದ ಗಟ್ಟಮನೆ ಇದ್ಪಾಡಿ ನಿವಾಸಿ ಕುಂಬ್ರದ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಅಬೂಬಕ್ಕರ್ ಇದ್ಪಾಡಿ ಎಂಬವರು ಬೆಳಗ್ಗೆ ಅಂಗಡಿಗೆ ಹೋಗುತ್ತಿದ್ದ ವೇಳೆ ಏಕಾಏಕಿ ಬಂದ ನಾಯಿಯೊಂದು ಅವರ ಕಾಲು ಮತ್ತು ಕೈ ಬೆರಳಿಗೆ ಕಚ್ಚಿ ಗಾಯಗೊಳಿಸಿದೆ. ಬಳಿಕ ಅದೇ ಪರಿಸರದ ಫಾತಿಮಾ ಎಂಬವರಿಗೂ ನಾಯಿ ಕಚ್ಚಿ ಗಾಯಗೊಳಿಸಿತ್ತು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಆ ಬಳಿಕ ಮದ್ಯಾಹ್ನದ ವೇಳೆ ಕುಂಬ್ರದಲ್ಲಿ ಕೃಷ್ಣಪ್ಪ ಎಂಬವರಿಗೆ ನಾಯಿ ಕಚ್ಚಿ ಗಾಯಗೊಳಿಸಿದ್ದು ಅವರನ್ನು ಕೂಡಾ ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹುಚ್ಚು ನಾಯಿ ಕಚ್ಚಿರಬಹುದು ಎನ್ನುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್‌ಗೆ ಹಾಗೂ ಶಾಲೆಗಳಿಗೆ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸಾರೆಪುಣಿ ಎಂಬವರು ಮಾಹಿತಿ ನೀಡಿದ್ದರು.
ನಾಯಿಯನ್ನು ಹೊಡೆದು ಕೊಂಡ ಸಾರ್ವಜನಿಕರು:
ಮೂವರಿಗೆ ಕಚ್ಚಿ ಗಾಯಗೊಳಿಸಿದ್ದ ಶಂಕಿತ ಹುಚ್ಚು ನಾಯಿಯನ್ನು ಸಾರ್ವಜನಿಕರು ಸೇರಿ ಹೊಡೆದು ಸಾಯಿಸಿದ ಘಟನೆ ಸಂಜೆ ಕುಂಬ್ರದಲ್ಲಿ ನಡೆದಿದೆ.
ನಾಯಿಯೊಂದು ಜನರಿಗೆ ಕಚ್ಚುತ್ತಿರುವ ಬಗ್ಗೆ ಆತಂಕಗೊಂಡ ಕುಂಬ್ರ ಪರಿಸರದ ಯುವಕರು ಸೇರಿಕೊಂಡು ಕುಂಬ್ರದಲ್ಲಿ ಶಂಕಿತ ಹುಚ್ಚು ನಾಯಿಯನ್ನು ಹುಡುಕಿ ಹೊಡೆದು ಕೊಂದು ಹಾಕಿದ್ದಾರೆ. ನಾಯಿಯನ್ನು ಕೊಂದು ಹಾಕಿದ ಬಳಿಕ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೀದಿ ನಾಯಿ ನಿಯಂತ್ರಣಕ್ಕೆ ಆಗ್ರಹ:
ಕುಂಬ್ರ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಶಾಲೆಗಳಿಗೆ ಹೋಗುವ ಮಕ್ಕಳು ಆತಂಕದಿಂದಲೇ ನಡೆದಾಡಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸಾರೆಪುಣಿ ಆಗ್ರಹಿಸಿದ್ದಾರೆ.