ಆದರ್ಶ ವ್ಯಕ್ತಿಯಾಗಿ ಪೂಜಿಸುವ ರಾಮನನ್ನು ಬಿಜೆಪಿಯವರು ತನ್ನ ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ – ಬ್ಲಾಕ್ ಕಾಂಗ್ರೆಸ್ ಆರೋಪ

0

*ಮಂದಿರದಲ್ಲೂ ಜಾತಿ ರಾಜಕೀಯ ?
*ದೇವಾಲಯದ ಪಾವಿತ್ರ್ಯತೆ, ಪ್ರತಿಷ್ಠಾ ವಿಧಿ ವಿಧಾನಗಳನ್ನು ಗಾಳಿಗೆ ತೂರಿದ ಬಿಜೆಪಿ
*ಬಿಜೆಪಿಯವರೇ ನಿಜವಾದ ಹಿಂದೂ ದ್ರೋಹಿಗಳು
*ಪೂಜೆ ಮಾಡದೆ ಮಂತ್ರಾಕ್ಷತೆ ತಯರಾಗುವುದಿಲ್ಲ
*ಮಂತ್ರಾಕ್ಷತೆ ದುರುಪಯೋಗಕ್ಕೆ ಮುಂಡೂರು ಪ್ರಕರಣವೇ ಸಾಕ್ಷಿ

ಪುತ್ತೂರು: ಆದರ್ಶ ವ್ಯಕ್ತಿಯಾಗಿ ಈ ಮಣ್ಣಿನ ಅಸ್ಮಿತೆಯಾಗಿ ಪೂಜಿಸುವ ಶ್ರೀ ರಾಮನನ್ನು ಬಿಜೆಪಿಯವರು ತನ್ನ ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ. ದೇಶದಲ್ಲೇ ಪ್ರಪ್ರಥಮವಾಗಿ ರಾಮಂದಿರ ಪೂರ್ಣಗೊಂಡಿದೆ ಎಂದು ಬಿಂಬಿಸುತ್ತಿರುವುದು ಹಿಂದು ಧರ್ಮಕ್ಕೆ ಮತ್ತು ನೈಜ ರಾಮ ಭಕ್ತರಿಗೆ ಮಾಡುವ ಅಪಮಾನ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಆರೋಪಿಸಿದ್ದಾರೆ.


ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2019ರಲ್ಲಿ ಸುಪ್ರೀಮ್ ಕೋರ್ಟ್‌ನ ಆದೇಶದಂತೆ ಮಂದಿರ ನಿರ್ಮಾಣದ ಟ್ರಸ್ಟ್ ಅನ್ನು ರಚಿಸಿ ಮಂದಿರ ನಿರ್ಮಾಣದ ಕಾರ್ಯ ಆರಂಭಗೊಂಡು 2025ಕ್ಕೆ ಮಂದಿರ ಪೂರ್ಣಗೊಳ್ಳಬೇಕು ಎಂಬುದಿತ್ತು. ಆದರೆ ಅಪೂರ್ಣಗೊಂಡ ಮಂದಿರವನ್ನು ಲೋಕಸಭಾ ಚುನಾವಣೆಯ ಮೊದಲು ಇದರ ಪ್ರತಿಷ್ಟಾಪನೆ ಮಾಡಬೇಕೆಂದು ರಾಜಕೀಯ ಲಾಭ ಪಡೆಯಲು ಈ ಕಾರ್ಯಕ್ರಮವನ್ನು ಬಿಜೆಪಿಯವರು ಹಮ್ಮಿಕೊಂಡಿದ್ದಾರೆ. ಮಂದಿರ ನಿರ್ಮಾಣದ ಹೆಸರಿನಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಟ್ರಸ್ಟ್‌ನ ಹೆಸರಿನಲ್ಲಿ ಎಲ್ಲಾ ಪಕ್ಷಗಳಿಗೆ ಆಹ್ವಾನ ನೀಡುತ್ತಿದೆ. ಆ ಆಹ್ವಾನ ತಿರಸ್ಕರಿಸಿದರೆ ಅಥವಾ ಆಹ್ವಾನದ ಮೇರೆಗೆ ಬಾರದಿದ್ದರೆ ಅಂತಹ ಪಕ್ಷಗಳನ್ನು ಹಿಂದೂ ದ್ರೋಹಿ, ದೇಶ ದ್ರೋಹಿ ಎಂದು ಬಿಂಬಿಸುವ ಹುನ್ನಾರ ನಡೆಯುತ್ತಿದೆ. ಇಂತಹ ಹುನ್ನಾರಕ್ಕೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ. ಕೋರ್ಟ್‌ನ ತೀರ್ಪಿಗೆ ಬದ್ಧರಾಗಿ ರಾಮನ ಭಕ್ತರ ಗೌರವ ದೃಷ್ಟಿಯಿಂದ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ, ಲೋಕಸಭೆಯಲ್ಲಿ ಪಕ್ಷದ ನಾಯಕರಾದ ಚೌದ್ರಿಯವರು ಬಿಜೆಪಿ ಮತ್ತು ವಿಶ್ವಹಿಂದು ಪರಿಷತ್ ನೇತೃತ್ವದಲ್ಲಿ ನಡೆಯುವುದೆಂಬ ದೃಷ್ಟಿಯಿಂದ ಆಮಂತ್ರಣವನ್ನು ವಿನಯವಾಗಿ ತಿರಸ್ಕರಿಸಿದ್ದಾರೆ ಎಂದವರು ಹೇಳಿದರು.


ಮಂದಿರದಲ್ಲೂ ಜಾತಿ ರಾಜಕೀಯ ?
ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ದಿನ ಗರ್ಭಗುಡಿಗೆ ಐದು ಮಂದಿಗೆ ಹೋಗಲು ಅವಕಾಶವಿದ್ದು, ಅದರಲ್ಲಿ ಓರ್ವ ಅರ್ಚಕರು ಬಿಟ್ಟರೆ ಉಳಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯೋಗಿ ಆದಿತ್ಯಾನಾಥ್, ಆರ್‌ಎಸ್‌ಎಸ್ ಪ್ರಮುಖ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಗರ್ಭಗುಡಿ ಪ್ರವೇಶ ಮಾಡಲಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ತಂಡ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಗರ್ಭಗುಡಿಗೆ ಯಾಕೆ ಹೋಗಲು ಅವಕಾಶ ನೀಡಿಲ್ಲ. ಇಲ್ಲಿ ಜಾತಿ ರಾಜಕೀಯ ಮಾಡಿದ್ದಾರೇಯೇ ಎಂದು ಎಂ.ಬಿ.ವಿಶ್ವನಾಥ ರೈ ಪ್ರಶ್ನಿಸಿದರು. ಇಲ್ಲಿಯ ತನಕ ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿದ ಯಾವುದೇ ಒಂದು ಭರವಸೆಯನ್ನು ಈಡೇರಿಸದೆ ಕೇವಲ ಹಿಂದೂ ಮತ್ತು ಮುಸ್ಲಿಂ ವಿಷಯವನ್ನು ಮುಂದಿಟ್ಟು ಅಭಿವೃದ್ಧಿಯನ್ನು ಕಾಣಿಸದೆ ಮುಂದಿನ ಸಲ ಚುನಾವಣೆಯಲ್ಲಿ ರಾಮನ ಹೆಸರಿನಲ್ಲಿ ಮತಯಾಚಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ. ಧರ್ಮದಲ್ಲಿ ರಾಜಕೀಯ ಬೆರೆಸಿಕೊಂಡು ಜನಸಾಮಾನ್ಯರನ್ನು ಭಾವನಾತ್ಮಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಖಂಡಿತಾ ಒಳ್ಳೆಯದಲ್ಲ. ಈ ಮಣ್ಣಿನಲ್ಲಿ ಅಧರ್ಮ ಮಾಡಿದರೆ ಖಂಡಿತಾ ಮುಂದೊಂದು ದಿನ ಅದನ್ನು ಅನುಭವಿಸಬೇಕಾಗುತ್ತದೆ ಎಂದರು.


ದೇವಾಲಯದ ಪಾವಿತ್ರ್ಯತೆ, ಪ್ರತಿಷ್ಠಾ ವಿಧಿ ವಿಧಾನಗಳನ್ನು ಗಾಳಿಗೆ ತೂರಿದ ಬಿಜೆಪಿ:
ಕಾಂಗ್ರೆಸ್ ರಾಜ್ಯ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಅವರು ಮಾತನಾಡಿ ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಾಣ ಪ್ರತಿಷ್ಠೆಯ ದಿನ ಕೇವಲ ಐದು ಜನರಿಗೆ ಮಾತ್ರ ಗರ್ಭಗುಡಿಗೆ ಪ್ರವೇಶ ಇದೆ ಎಂದು ಹೇಳಿದೆ. ಈ ಐದು ಜನರಲ್ಲಿ ಒಬ್ಬರು ಪ್ರಧಾನಿ ಮೋದಿ, ಇನ್ನೊಬ್ಬರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್ , ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಮತ್ತು ಓರ್ವ ಅರ್ಚಕರು. ನಾವು ಕಂಡ ಕಂಡಂತೆ ದೇವಾಲಯಗಳಲ್ಲಿ ತಂತ್ರ ವಿದ್ಯಾ ಪಾರಂಗತರಾದ ತಂತ್ರಿಗಳು ಮತ್ತು ಅರ್ಚಕರು ದೇವಾಲಯದ ಪ್ರಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಮಾಡುತ್ತಾರೆ. ರಾಜಕಾರಣಿಗಳಾಗಲಿ ದೇವಾಲಯದ ಆಡಳಿತ ಮಂಡಳಿಯವರಾಗಲಿ ಅಥವಾ ರಾಜಕೀಯ ನೇತಾರರಾಗಲಿ ಗರ್ಭಗುಡಿಯೊಳಗೆ ಪ್ರವೇಶ ಮಾಡಿ ಪ್ರತಿಷ್ಠೆ ನಡೆಸಿದ್ದೇ ಇಲ್ಲ. ಹೀಗಿರುವಾಗ ಈ ಐದು ಜನ ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶ ಮಾಡಿ ಪ್ರಾಣ ಪ್ರತಿಷ್ಠೆ ನೆರವೇರಿಸುತ್ತಾರೆಂದರೆ ಇದು ದೇವಾಲಯದ ಪಾವಿತ್ರ್ಯತೆ ಮತ್ತು ಪ್ರತಿಷ್ಠಾ ವಿಧಿ ವಿಧಾನಗಳನ್ನು ಗಾಳಿಗೆ ತೂರಿ ಬಿಜೆಪಿ ಮತ್ತು ಅವರ ಪರಿವಾರದ ನಾಯಕರನ್ನು ವೈಭವಿಕರಿಸುವ ಪ್ರಯತ್ನವಲ್ಲದೆ ಇನ್ನೇನು ಎಂದು ಪ್ರಶ್ನಿಸಿದ ಅವರು ಸ್ವಾತಂತ್ರ್ಯ ನಂತರ 1951 ರಲ್ಲಿ ಪರಕೀಯರ ದಾಳಿಯಿಂದ ಹಾನಿಗೊಳಗಾಗಿದ್ದ ಗುಜರಾತಿನ ಸೋಮನಾಥ ದೇವಾಲಯವನ್ನು ಅಂದಿನ ಗೃಹ ಸಚಿವ ಸರದಾರ ವಲ್ಲಭಾಯಿ ಪಟೇಲ್ ಮತ್ತು ಪ್ರಧಾನಮಂತ್ರಿ ನೆಹರೂರವರ ಮಾರ್ಗದರ್ಶನದಲ್ಲಿ ಪುನರ್ ರ್ನಿರ್ಮಾಣ ಮಾಡಿ ಪ್ರಾಣ ಪ್ರತಿಷ್ಠೆ ನಡೆಸಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಾಗಲೀ, ರಾಜಕೀಯ ನೇಕಾರರಾಗಲಿ ಗರ್ಭಗುಡಿಯನ್ನು ಪ್ರವೇಶ ಮಾಡಿದ ಇತಿಹಾಸವಿಲ್ಲ. ದೇವಾಲಯವನ್ನು ಅಂದಿನ ರಾಷ್ಟ್ರಪತಿಗಳಾದ ರಾಜೇಂದ್ರ ಪ್ರಸಾದರ ನೇತೃತ್ವದಲ್ಲಿ ಉದ್ಘಾಟಿಸಲಾಗಿತ್ತು. ಇದು ಇತಿಹಾಸ , ಆದರೆ ಇಂದು ಕೇವಲ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಅಪೂರ್ಣ ದೇವಾಲಯದಲ್ಲಿ ಬಿಜೆಪಿಯ ರಾಜಕಾರಣಿಗಳು ದೇವಾಲಯದ ಪ್ರಾಣ ಪ್ರತಿಷ್ಠೆಯನ್ನು ನಡೆಸುವುದು ದೇಶಕ್ಕೆ ಮತ್ತು ದೇಶದ ಕೋಟ್ಯಂತರ ರಾಮ ಭಕ್ತರಿಗೆ ಎಸಗುವ ದ್ರೋಹವಾಗಿದೆ ಎಂದರು.‌


ಬಿಜೆಪಿಯವರೇ ನಿಜವಾದ ಹಿಂದೂ ದ್ರೋಹಿಗಳು:
ರಾಜಕೀಯ ನಾಯಕರು ಗರ್ಭಗುಡಿಯೊಳಗೆ ಪ್ರವೇಶ ಮಾಡಬಾರದು ಎಂದು ಹೇಳಿದವರು ಕೇವಲ ಕಾಂಗ್ರೆಸಿಗರು ಮಾತ್ರ ಅಲ್ಲ. ಹಿಂದೂ ಧರ್ಮ ಪ್ರಚಾರಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲಿ ಮಠಗಳನ್ನು ಸ್ಥಾಪಿಸಿದ ಶಂಕರ ಭಗತ್ಪಾದರ ಉತ್ತರಾಧಿಕಾರಿಗಳು, ಹಿಂದೂ ಸಮಾಜಕ್ಕೆ ಆಚಾರ್ಯ ಸ್ಥಾನದಲ್ಲಿರುವ ಶಂಕರಾಚಾರ್ಯ ಪೀಠಾಧಿಪತಿಗಳು ಇದನ್ನು ವಿರೋಧಿಸಿದ್ದಾರೆ. ಸಾದುಸಂತರು, ಅರ್ಚಕರು ಮತ್ತು ಸ್ವಾಮೀಜಿಗಳು ನಡೆಸಬೇಕಾದ ಪ್ರಾಣ ಪ್ರತಿಷ್ಠೆಯನ್ನು ನೀವು ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ. ಉತ್ತರಾಖಂಡದ ಜ್ಯೋತಿರ್ ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸ್ವಾಮಿಗಳು ಮತ್ತು ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಪ್ರಾಣ ಪ್ರತಿಷ್ಠಾಪನೆಯು ಶಾಸ್ತ್ರೋಕ್ತವಲ್ಲದ ಕಾರಣ ನಾವು ಈ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿ ಈ ಸಮಾರಂಭವನ್ನು ಬಹಿಷ್ಕರಿಸಿದ್ದಾರೆ. ಶಂಕರಾಚಾರ್ಯರುಗಳ ಮಾತನ್ನು ಧಿಕ್ಕರಿಸಿ ರಾಮಮಂದಿರದ ಪ್ರಾಣ ಪ್ರತಿಷ್ಠೆಯಲ್ಲಿ ರಾಜಕೀಯವನ್ನು ಮಾಡುತ್ತಿರುವ ಬಿಜೆಪಿಯವರೇ ನಿಜವಾದ ಹಿಂದೂ ದ್ರೋಹಿಗಳಾಗಿದ್ದಾರೆ ಎಂದು ಅಮಳ ರಾಮಚಂದ್ರ ಹೇಳಿದರು.


ಪೂಜೆ ಮಾಡದೆ ಮಂತ್ರಾಕ್ಷತೆ ತಯರಾಗುವುದಿಲ್ಲ:
ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ಮಂತ್ರಾಕ್ಷತೆ ಎಂದು ಹೇಳಲಾದ ಅಕ್ಷತೆಯನ್ನು ಬಿಜೆಪಿಯ ಕಾರ್ಯಕರ್ತರು ಮನೆಮನೆಗೆ ತಲುಪಿಸುತ್ತಿದ್ದಾರೆ. ಯಾವುದೇ ದೇವಾಲಯವಾದರೂ ಪ್ರಾಣ ಪ್ರತಿಷ್ಠೆಯಾಗದೆ ಪೂಜೆ ಮಾಡುವುದಕ್ಕಾಗುವುದಿಲ್ಲ. ಪೂಜೆ ಮಾಡದೆ ಮಂತ್ರಾಕ್ಷತೆ ತಯಾರಾಗುವುದಿಲ್ಲ. ಹಾಗಿದ್ದರೆ ಅಯೋಧ್ಯೆಯಿಂದ ತಂದ ಮಂತ್ರಾಕ್ಷತೆ ಎಂದು ಹೇಳಿ ಜನರಿಗೆ ಹಂಚುತ್ತಿರುವ ಉದ್ದೇಶವಾದರೂ ಏನು ? ಈ ಮಂತ್ರಾಕ್ಷತೆಯ ಪ್ರಸ್ತುತತೆಯಾದರೂ ಏನು? ಬಿಜೆಪಿಯವರು ಮಂತ್ರಾಕ್ಷತೆ ಮತ್ತು ರಾಮ ಮಂದಿರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ದೇಶಕ್ಕೆ ಮತ್ತು ಹಿಂದೂ ಧರ್ಮಕ್ಕೆ ದ್ರೋಹವನ್ನು ಎಸಗುತ್ತಿದ್ದಾರೆ ಎಂದು ಅಮಳ ರಾಮಚಂದ್ರ ಹೇಳಿದರು.


ಮಂತ್ರಾಕ್ಷತೆ ದುರುಪಯೋಗಕ್ಕೆ ಮುಂಡೂರು ಪ್ರಕರಣವೇ ಸಾಕ್ಷಿ:
ಬಿಜೆಪಿಯವರು ರಾಮ ರಾಮ ಮಂದಿರ ಮತ್ತು ಈ ಮಂತ್ರಾಕ್ಷತೆಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಪುತ್ತೂರಿನ ಮುಂಡೂರಿನಲ್ಲಿ ಇತ್ತೀಚಿಗೆ ನಡೆದ ಪ್ರಕರಣ ಅತ್ಯಂತ ದೊಡ್ಡ ಸಾಕ್ಷ್ಯವನ್ನು ನೀಡುತ್ತದೆ. ಮುಂಡೂರು ಗ್ರಾಮದ ಸಂತೋಷ್ ಎಂಬವರ ಕುಟುಂಬ ಮತ್ತು ಅವರ ಪಕ್ಕದ ಮನೆಯ ಧನಂಜಯ ಕೇಶವ ಜಗದೀಶ ಎಂಬವರ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿದ ಹಲ್ಲೆ ಪ್ರಕರಣವನ್ನು ಪುತ್ತೂರು ಬಿಜೆಪಿಯ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಕಿಶೋರ್ ಕುಮಾರ್ ಬೊಟ್ಯಾಡಿಯವರು ಅದನ್ನು ಅಕ್ಷತೆಯ ವಿಚಾರವಾಗಿ ನಡೆದ ಹಲ್ಲೆ ಎಂದು ತಿರುಚಿಸಿದ್ದಾರೆ. ಪುತ್ತೂರಿನಲ್ಲಿ ಒಡೆದ ಬಿಜೆಪಿಯ ಬಣಗಳು ಒಂದು ಗೂಡಿದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಆಗಬಹುದೆಂಬ ಭಯದಿಂದ ಮಾಜಿ ಶಾಸಕರು ರಾಮಮಂದಿರದ ಅಕ್ಷತೆಯ ವಿಚಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಮಳ ಹೇಳಿದರು. ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ನೆಕ್ಕಿಲು, ಕಾಂಗ್ರೆಸ್ ಯಂಗ್ ಬ್ರಿಗೇಡ್ ಜಿಲ್ಲಾ ಅಧ್ಯಕ್ಷ ರಂಜಿತ್ ಬಂಗೇರ ಉಪಸ್ಥಿತರಿದ್ದರು.

ರಾಮ ಮಂದಿರ ನಿರ್ಮಾಣದ ಕೀರ್ತಿ ನ್ಯಾಯಾಲಯಕ್ಕೆ ಸಲ್ಲಬೇಕು
ಸ್ವಾತಂತ್ರ್ಯ ನಂತರ ಇಂದಿನವರೆಗೆ ಎಂದೂ ಕಾಂಗ್ರೆಸ್ ಪಕ್ಷವು ರಾಮ ಮಂದಿರ ನಿರ್ಮಾಣಕ್ಕೆ ವಿರೋಧವನ್ನು ಮಾಡಿಲ್ಲ. ಕಾಂಗ್ರೆಸ್ ವಿರೋಧಿಸಿದ್ದು ಕೋಮು ಹಿಂಸಾಚಾರ ಮತ್ತು ರಾಮ ಮಂದಿರದ ರಾಜಕೀಕರಣವನ್ನು ಮಾತ್ರ . ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷ ಪ್ರತಿಪಾದಿಸುತ್ತಾ ಬಂದ ವಿಚಾರವೇನೆಂದರೆ ರಾಮ ಮಂದಿರ ವಿವಾದ ಸಂಧಾನದ ಮೂಲಕ ಅಥವಾ ನ್ಯಾಯಾಲಯದ ಮುಖಾಂತರ ಪರಿಹಾರ ಕಾಣಬೇಕೆಂಬುದಾಗಿದೆಯೇ ಹೊರತು ಬಲವಂತದಿಂದ ಅಥವಾ ಹಿಂಸಾಚಾರದ ಮೂಲಕ ಅಲ್ಲ ಎಂಬುದಾಗಿದೆ. ಇಂದು ನ್ಯಾಯಾಲಯದ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ಇದು ಕಾಂಗ್ರೆಸ್ ಪ್ರತಿಪಾದಿಸಿದ ವಿಚಾರಗಳಿಗೆ ಸಂದ ಜಯವಾಗಿದೆ. ಅಯೋಧ್ಯೆಯಲ್ಲಿ ಇಂದು ರಾಮ ಮಂದಿರ ನಿರ್ಮಾಣವಾಗುತ್ತಿದ್ದರೆ ಅದರ ಸಂಪೂರ್ಣ ಕೀರ್ತಿ ನ್ಯಾಯಾಲಯಕ್ಕೆ ಸಲ್ಲಬೇಕೇ ವಿನಃ ಬೇರೆ ಇನ್ನಾರಿಗೂ ಅಲ್ಲ.
ಅಮಳ ರಾಮಚಂದ್ರ, ಕೆಪಿಸಿಸಿ ರಾಜ್ಯ ವಕ್ತಾರ

LEAVE A REPLY

Please enter your comment!
Please enter your name here