ಪುತ್ತೂರು: ಮೊಟ್ಟೆತ್ತಡ್ಕ ಜಂಕ್ಷನ್ ನಲ್ಲಿ ಆಟೋ ರಿಕ್ಷಾ ತಂಗುದಾಣವನ್ನು ನಿರ್ಮಿಸಲು ಸ್ಥಳೀಯರೊಬ್ಬರು ಅಡ್ಡಿಪಡಿಸುತ್ತಿದ್ದು, ಕೂಡಲೇ ತಂಗುದಾಣ ನಿರ್ಮಿಸಲು ಸೂಚಿಸಲಾದ ಜಾಗದ ತನಿಖೆ ಮಾಡಿ ಆಗಿರುವ ತೊಂದರೆಯನ್ನು ನಿವಾರಿಸುವ ಕುರಿತು ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ಥಳೀಯ ನಗರಸಭಾ ಸದಸ್ಯರ ನೇತೃತ್ವದಲ್ಲಿ ಪುತ್ತೂರು ನಗರಸಭಾ ಪೌರಾಯುಕ್ತರಿಗೆ ಜ.20ರಂದು ಮನವಿ ಮಾಡಿರುತ್ತಾರೆ.
ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಸುಮಾರು 35 ವರ್ಷಗಳ ಹಿಂದೆ ಆಸ್ತಿತ್ವಕ್ಕೆ ಬಂದಿದ್ದು ಮೊಟ್ಟೆತ್ತಡ್ಕ ಬಸ್ಸು ತಂಗುದಾಣದ ಬಳಿ ಸದ್ರಿ ವಿವಾದದ ಜಾಗದಲ್ಲಿ ಆಟೋ ರಿಕ್ಷಾ ಪಾರ್ಕಿಂಗ್ ಅನ್ನು ಮಾಡಿಕೊಂಡು ಬಂದಿರುತ್ತಾರೆ. ಸುಮಾರು 50 ಜನ ಸದ್ರಿ ಸಂಘದಲ್ಲಿ ಸದಸ್ಯರಿದ್ದು ಸದ್ರಿ ಮೊಟ್ಟೆತ್ತಡ್ಕದಲ್ಲಿ ರಿಕ್ಷಾ ಪಾರ್ಕ್ ಮಾಡಲು ಸುಸಜ್ಜಿತ ತಂಗುದಾಣದ ಅವಶ್ಯಕತೆ ಇದೆ ಹಲವು ವರ್ಷಗಳ ಬೇಡಿಕೆಗೆ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಆಟೋ ರಿಕ್ಷಾ ತಂಗುದಾಣಕ್ಕೆ ರೂ.5 ಲಕ್ಷ ಅನುದಾನ ಶಾಸಕರ ನಿಧಿಯಿಂದ ಮಂಜೂರು ಮಾಡಿರುತ್ತಾರೆ.
ಈ ರಿಕ್ಷಾ ತಂಗುದಾಣವು ರಸ್ತೆ ಮಾರ್ಜಿನ್ ಬಿಟ್ಟು ಇದ್ದು ಸದ್ರಿ ವಿವಾದದ ಜಾಗದಲ್ಲಿ ಆಟೋ ರಿಕ್ಷಾದ ಆಶ್ರಯಕ್ಕೆ ಮೇಲ್ಛಾವಣಿ ಕಾಮಗಾರಿ ಮಾಡುತ್ತಿರುವ ಸಂದರ್ಭದಲ್ಲಿ ಸ್ಥಳೀಯರಾದ ಅಪ್ಪಯ್ಯ ಆಚಾರಿಯವರ ಪುತ್ರ ಸೀತಾರಾಮ ಆಚಾರಿರವರು ಕಾಮಗಾರಿ ಮುಂದುವರೆಸಲು ಅಡ್ಡಿ ಪಡಿಸಿರುತ್ತಾರೆ. ಮಾತ್ರವಲ್ಲ ಸೀತಾರಾಮ ಆಚಾರಿಯವರು ತನ್ನ ಜಾಗದ ಎದುರಿನಿಂದ ತಂಗುದಾಣದ ಸ್ಥಳ ಬದಲಾಯಿಸಲು ಶಾಸಕ ಅಶೋಕ್ ರೈಯವರಿಗೆ ಮನವಿಯನ್ನು ಕೂಡ ಸಲ್ಲಿಸಿರುತ್ತಾರೆ. ಆದರೆ ರಿಕ್ಷಾ ಚಾಲಕರು ಯಾರಿಗೂ ಅಡ್ಡಿಯಾಗದಂತೆ ನ್ಯಾಯಯುತವಾದ ರೀತಿಯಲ್ಲಿ ರಿಕ್ಷಾ ಪಾರ್ಕಿಂಗ್ ಮಾಡುತ್ತಾ ಬಂದಿರುತ್ತಾರೆ. ಆದ್ದರಿಂದ ನಗರಸಭಾ ಪೌರಾಯುಕ್ತರು ಸದ್ರಿ ವಿವಾದದ ಸ್ಥಳಕ್ಕೆ ಆಗಮಿಸಿ, ಸ್ಥಳ ತನಿಖೆ ಮಾಡಿ ಆಗಿರುವ ತೊಂದರೆಯನ್ನು ನಿವಾರಿಸಿ ಕೊಡಬೇಕು ಎಂದು ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕ-ಮಾಲಕರು ಮನವಿಯಲ್ಲಿ ಉಲ್ಲೇಖಿಸಿರುತ್ತಾರೆ.
ಮನವಿಯನ್ನು ಸ್ವೀಕರಿಸಿದ ನಗರಸಭಾ ಪೌರಾಯುಕ್ತರಾದ ಮಧು ಎಸ್.ಮನೋಹರ್ ರವರು ಸದ್ರಿ ಸ್ಥಳಕ್ಕೆ ಭೇಟಿ ನೀಡುವ ಭರವಸೆಯನ್ನು ವ್ಯಕ್ತಪಡಿಸಿರುತ್ತಾರೆ. ಮನವಿ ನೀಡುವ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಶೈಲಾ ಪೈ, ಶೀನಪ್ಪ ನಾಯ್ಕ್ ಮೊಟ್ಟೆತ್ತಡ್ಕ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹಮೀದ್, ಕಾರ್ಯದರ್ಶಿ ಓಂಕಾರ್ ಸಂತೋಷ್, ಉಪಾಧ್ಯಕ್ಷ ದಿನೇಶ್, ಕೋಶಾಧಿಕಾರಿ ಹನೀಫ್ ಹಾಗೂ ಚಿದಾನಂದ, ಜೊತೆ ಕಾರ್ಯದರ್ಶಿ ಜಯರಾಮ ಸಹಿತ ರಿಕ್ಷಾ ಚಾಲಕರು ಉಪಸ್ಥಿತರಿದ್ದರು