*ಸಹಕಾರಿ, ಗ್ರಾಮ ವಿಕಾಸ ಯೋಜನೆ ಎರಡು ಕಣ್ಣುಗಳಿದ್ದಂತೆ – ಅವೆರಡರ ದೃಷ್ಟಿಯೂ ಒಂದೇ: ಒಡಿಯೂರು ಶ್ರೀ
*ಸೇವೆಯಿಂದ ಸಾರ್ಥಕ್ಯ ಪಡೆಯಲು ಸಾಧ್ಯ: ಸಾಧ್ವಿ ಶ್ರೀ ಮಾತಾನಂದಮಯೀ
*ಕ್ಷೇತ್ರ ನೀಡಿದ ಸಂಸ್ಕಾರದಿಂದ ನಾನು ಈ ಮಟ್ಟಕ್ಕೆ ಬೆಳಯಲು ಸಾಧ್ಯವಾಯಿತು: ಪಟ್ಲ ಸತೀಶ್ ಶೆಟ್ಟಿ
*ಬದುಕು ಬದಲಾಗ ಬೇಕಾದರೆ ಭಾವನೆ ಬದಲಾಗಬೇಕು: ಎ. ಸುರೇಶ್ ರೈ
ವಿಟ್ಲ: ಬದುಕಿನಲ್ಲಿ ಸಂಸ್ಕಾರ ಅತೀ ಅಗತ್ಯ. ಬಾಲ್ಯದಲ್ಲಿ ಸಂಸ್ಕಾರ ಸಿಕ್ಕಿದಾಗ ಬದುಕು ಹಸನಾಗುತ್ತದೆ. ನೆನಪಿನಲ್ಲಿ ಉಳಿಯುವ ದಿನ ಇದಾಗಿದೆ. ಸಹಕಾರಿ ಹಾಗೂ ಗ್ರಾಮ ವಿಕಾಸ ಯೋಜನೆ ಎರಡು ಕಣ್ಣುಗಳಿದ್ದಂತೆ. ಅವೆರಡರ ದೃಷ್ಟಿಯೂ ಒಂದೇ. ಅರ್ಪಿತ ಭಾವದ ಸೇವೆ ನಮ್ಮದಾಗಬೇಕು.ಆಧ್ಯಾತ್ಮಿಕತೆ ಹಾಗೂ ಆರ್ಥಿಕತೆ ಒಂದಾದಾಗ ಬದುಕು ಸುಂದರವಾಗಲು ಸಾಧ್ಯ. ಗ್ರಾಮ ವಿಕಾಸವನ್ನು ಆರ್ಥಿಕವಾಗಿ ಮೇಲೆಕೆತ್ತುವಲ್ಲಿ ಸಹಕಾರಿಯ ಪಾತ್ರ ಮಹತ್ವದ್ದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಒಡಿಯೂರು ಶಾಖೆನ್ನು ಹಾಗೂ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಛೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಆಧ್ಯಾತ್ಮಿಕವಾಗಿ ಆತ್ಮವಿಶ್ವಾಸ ಹೆಚ್ಚಾಗಬೇಕು. ಧರ್ಮ ತುಂಬಿದ ಕಾರ್ಯಗಳಿಂದ ಯಶಸ್ಸು ಸಾಧ್ಯ. ಆದರೆ ಅದರಲ್ಲಿ ಕಷ್ಟಗಳೇ ಹೆಚ್ಚು. ನಾವು ಮಾಡಿದ ಸತ್ಕರ್ಮ ಪುಣ್ಯ ಸಂಪಾದನೆಯ ರಹದಾರಿ. ಬ್ಯಾಂಕಿಂಗ್ ವ್ಯವಸ್ಥೆ ಎಂದರೆ ಕೊಡುಕೊಳ್ಳುವಿಕೆ. ನಗುಮುಖದ ಸೇವೆ ನಮ್ಮಿಂದಾದರೆ ಯಶಸ್ಸು ಸಾಧ್ಯ. ತಾಳ್ಮೆ ಸಹನೆಯಿಂದ ವ್ಯಕ್ತಿ ಉತ್ತಮವಾಗಿ ಬೆಳೆಯಲುಸಾಧ್ಯ. ನಿರ್ದೇಶಕ ಮಂಡಳಿಯ ನಿಸ್ವಾರ್ಥ ಸೇವೆಯಿಂದ ಸಂಸ್ಥೆ ಇಷ್ಟೊಂದು ಬೆಳೆಯಲು ಸಾಧ್ಯ. ಕೊಡು ಕೊಳ್ಳುವಿಕೆಯ ಆದರ್ಶವನ್ನು ಶ್ರೀರಾಮನಲ್ಲಿ ಕಾಣಬಹುದು. ರಾಮ ರಾಜ್ಯದ ಮೂಲಕ ಭವಿಷ್ಯದ ಬೆಳಕನ್ನು ತೋರಿಸುವ ಕಾರ್ಯವಾಗುತ್ತಿದೆ. ಶ್ರೀರಾಮನ ಪ್ರತಿಷ್ಠೆಯಾಗುವ ಸಮಯ ಕ್ಷೇತ್ರದ ಶ್ರೀರಾಮನಾಮ ತಾರಕ ಹವನ ನಡೆಯಲಿದೆ. ಕ್ಷೇತ್ರದ ರಥೋತ್ಸವದ ಸಂದರ್ಭ ನಡೆಯುವ ತುಳುಸಾಹಿತ್ಯ ಸಮ್ಮೇಳನವನ್ನು ಶ್ರೀರಾಮನ ಆದರ್ಶ ವಿಚಾರಗಳೊಂದಿಗೆ ನಡೆಸಲಾಗುತ್ತಿದೆ ಎಂದರು.
ಸಾಧ್ವಿ ಶ್ರೀ ಮಾತಾನಂದಮಯೀರವರು ಆಶೀರ್ವಚನ ನೀಡಿ ತುಂಬಾ ಸಂತಸದ ವಾತಾವರಣ ಇದಾಗಿದೆ. ಪಾರಮಾರ್ಥಿಕ ಹಾಗೂ ಪ್ರಾಪಂಚಿಕ ಎರಡೂ ಸಮಾಜಕ್ಕೆ ಅತೀ ಅಗತ್ಯ. ಸುಸಂಸ್ಕೃತ ವ್ಯಕ್ತಿಯಿಂದ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ. ಸೇವೆಯಿಂದ ಸಾರ್ಥಕ್ಯ ಪಡೆಯಲು ಸಾಧ್ಯ. ಒಗ್ಗಟ್ಟಿದ್ದರೆ ಯಶಸ್ಸು ಹೆಚ್ಚು ಎಂದರು.
ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಮಾತನಾಡಿ ಕ್ಷೇತ್ರದ ಬೆಳವಣಿಗೆ ಕಂಡು ತುಂಬಾ ಸಂತಸ ತಂದಿದೆ. ನನ್ನ ಸಾಧನೆಯ ಹಿಂದೆ ಕ್ಷೇತ್ರದ ಪಾತ್ರ ಅಪಾರ. ಕ್ಷೇತ್ರ ನೀಡಿದ ಸಂಸ್ಕಾರದಿಂದ ನಾನು ಈ ಮಟ್ಟಕ್ಕೆ ಬೆಳಯಲು ಸಾಧ್ಯವಾಯಿತು ಎಂದರು.
ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎ.ಸುರೇಶ್ ರೈರವರು ಮಾತನಾಡಿ ನಮ್ಮ ಸ್ವಾಮೀಜಿಯವರ ಆಶೀರ್ವಾದದಿಂದ ಸಂಸ್ಥೆ ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ. ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕು. ಸ್ವಾಮೀಜಿಯವರ ಸಂಕಲ್ಪವನ್ನು ಈಡೇರಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಹಲವಾರು ಅಡೆ ತಡೆಗಳನ್ನು ಎದುರಿಸಿ ಸಹಕಾರಿಯನ್ನು ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ರಾಜ್ಯದಲ್ಲೇ ಕ್ಷೇತ್ರವನ್ನು ನೋಡುವಂತಹ ಕೆಲಸ ಎಲ್ಲರ ಸಹಕಾರದಿಂದ ಆಗಿದೆ. ಹೆಸರಿನ ಹಿಂದೆ ಹೋಗುವ ಬದಲು ಕೆಲಸದ ಹಿಂದೆ ಹೋದರೆ ಯಶಸ್ಸು ಹೆಚ್ಚು. ಸಮಸ್ಯೆಯನ್ನು ಹೊಂದಾಣಿಕೆ ಮಾಡಿಕೊಂಡು ಹೋಗುವ ಮನಸ್ಸು ನಮ್ಮದಾಗಲಿ. ಬದುಕು ಬದಲಾಗ ಬೇಕಾದರೆ ಭಾವನೆ ಬದಲಾಗಬೇಕು ಎಂದರು.
ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ನ್ಯಾಯವಾದಿ ರವೀಂದ್ರನಾಥ ಪಿ.ಎಸ್.ಪಂಜಾಜೆ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಅಶೋಕ್ ಕುಮಾರ್ ಎ., ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷರಾದ ಸರ್ವಾಣಿ ಪಿ. ಶೆಟ್ಟಿ, ಪ್ರಗತಿಪರ ಕೃಷಿಕರಾದ ಕಾಡೂರು ಮಹಾಬಲ ಭಟ್ ಕೆ., ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕರಾದ ಕಿರಣ್ ಯು., ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎ.ಸುರೇಶ್ ರೈ, ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್, ಸುರೇಖ ಸುರೇಶ್ ರೈ, ಪ್ರಭಾಕರ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎ.ಸುರೇಶ್ ರೈರವರುನ್ನು ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ದೇವಪ್ಪ ನಾಯ್ಕ ಬೆಟ್ಟಂಪಾಡಿ ವಂದಿಸಿದರು. ಲೋಕೇಶ್ ರೈ ಬಾಕ್ರಬೈಲು ಕಾರ್ಯಕ್ರಮ ನಿರೂಪಿಸಿದರು.