ಪುತ್ತೂರು: ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಪುತ್ತೂರು ಇದರ ಆಶ್ರಯದಲ್ಲಿ ದಿ.ಶ್ರೀನಾಥ್ ಆಚಾರ್ಯ ಸ್ಮರಣಾರ್ಥ ಹೊನಲು ಬೆಳಕಿನ ಜ.20 ಹಾಗೂ 21ರಂದು ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಆಹ್ವಾನಿತ ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ “ಸಿಝ್ಲರ್ ಟ್ರೋಫಿ” ಯಶಸ್ವಿಯಾಗಿ ಸಂಭ್ರಮದ ತೆರೆ ಕಂಡಿದೆ. ಈ ಪಂದ್ಯಾಕೂಟದ ಫೈನಲ್ ಪಂದ್ಯವು ರೋಚಕತೆಯನ್ನು ಉಂಟುಮಾಡಿದ್ದು ಅಂತಿಮವಾಗಿ ಫ್ರೆಂಡ್ಸ್ ಬೆಂಗಳೂರು ತಂಡವು 2024ರ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಪ್ರಕೃತಿ ನ್ಯಾಶ್ ಬೆಂಗಳೂರು ತಂಡವು ರನ್ನರ್ಸ್ ಪ್ರಶಸ್ತಿಯನ್ನು ಪಡೆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಪ್ರಕೃತಿ ನ್ಯಾಶ್ ತಂಡದ ಆರಂಭಿಕ ಆಟಗಾರರಾದ ಅಕ್ಷಯ್ ಸಿ.ಕೆ 9 ರನ್ ಹಾಗೂ ಸ್ವಸ್ತಿಕ್ ನಾಗಾರಾಜ್ 7 ರನ್ ಕಲೆ ಹಾಕಿ ಬೇಗನೇ ನಿರ್ಗಮಿಸಿದರು. ವನ್‌ಡೌನ್ ಬ್ಯಾಟರ್ ಆಗಿ ಆಗಮಿಸಿದ ಪ್ರಶಾಂತ್ ಕುಟ್ಟಿರವರು ಹೊಡಿಬಡಿಯ 25 ರನ್‌ಗಳನ್ನು ಕಲೆ ಹಾಕುವುದರಿಂದ ತಂಡವು ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಎಂಟು ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 56 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತ್ತು. ಫ್ರೆಂಡ್ಸ್ ಬೆಂಗಳೂರು ತಂಡದ ಪರ ಅಭಿ(2-11-2)ರವರ ಉತ್ತಮ ಸ್ಪೆಲ್, ಸಾಗರ್ ಭಂಡಾರಿರವರ ಉತ್ತಮ ಬೌಲಿಂಗ್ ಹಾಗೂ ತಂಡದ ಚುರುಕಿನ ಕ್ಷೇತ್ರರಕ್ಷಣೆಯ ಮೂಲಕ ಎರಡು ರನೌಟ್ ಮಾಡಿರುವುದರಿಂದ ಎದುರಾಳಿಗೆ ದೊಡ್ಡ ಮೊತ್ತವನ್ನು ಪೇರಿಸಲು ಅವಕಾಶ ಮಾಡಿಕೊಡಲಿಲ್ಲ. ಬಳಿಕ ಓವರಿಗೆ 7.25 ಸರಾಸರಿಯಲ್ಲಿ ಗುರಿಯನ್ನು ಬೆನ್ನಟ್ಟಿದ ಫ್ರೆಂಡ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ, ಕರ್ನಾಟಕದ ಕ್ರಿಸ್ ಗೈಲ್ ಎಂದೇ ಖ್ಯಾತಿಯ ಸಾಗರ್ ಭಂಡಾರಿರವರು ಎದುರಾಳಿ ತಂಡದ ಅಪೆಕ್ಸ್‌ರವರು ಎಸೆದ ಇನ್ನಿಂಗ್ಸ್‌ನ ಪ್ರಥಮ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ತನ್ನ ಉದ್ಧೇಶವನ್ನು ರವಾನಿಸಿದರು. ಸಾಗರ್ ಭಂಡಾರಿರವರು ಮತ್ತೋರ್ವ ಆರಂಭಿಕ ಬ್ಯಾಟರ್ ಮ್ಯಾಡಿರವರೊಂದಿಗೆ ಸೇರಿಕೊಂಡು ಕೇವಲ ಎರಡು ಓವರ್‌ಗಳಲ್ಲಿಯೇ 21 ರನ್ ಗಳನ್ನು ಚಚ್ಚಿದ್ದರು. ತಂಡವು 23 ರನ್‌ಗಳನ್ನು ಕಲೆ ಹಾಕಿದ ಸಂದರ್ಭದಲ್ಲಿ ಸಾಗರ್ ಭಂಡಾರಿ(19 ರನ್, 61, 41) ಔಟಾಗಿ ಪೆವಿಲಿಯನ್‌ಗೆ ಮರಳಿದರು. ಈ ಸಂದರ್ಭದಲ್ಲಿ ಆರಂಭಿಕ ಬ್ಯಾಟರ್ ಮಾಡಿ(13 ರನ್)ರವರು ಹೋರಾಟವನ್ನು ಜಾರಿಯಲ್ಲಿರಿಸಿದ್ದರೂ ಗೆಲುವಿನ ಹಾದಿಯಲ್ಲಿ ಔಟಾಗಿ ನಿರಾಶೆ ಮೂಡಿಸಿದರು.
ಕಮಾಲ್ ಕೊನೆಯ ಓವರ್:
ಕೊನೆಗೆ ಅಂತಿಮ ಓವರ್‌ಗೆ 7 ರನ್ ತೆಗೆಯುವ ಅವಕಾಶ ಫ್ರೆಂಡ್ಸ್ ಬೆಂಗಳೂರಿಗೆ ಎದುರಾಗಿತ್ತು. ತಂಡವು ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದ್ದರೂ, ಬ್ಯಾಟರ್‌ಗಳಾದ ಗಿಳಿಯಾರು ನಾಗ ಹಾಗೂ ನವೀನ್ ಕ್ರೀಸಿನಲ್ಲಿದ್ದರು. ನ್ಯಾಶ್ ತಂಡದ ಉದಯೋನ್ಮುಖ ಯುವ ಬೌಲರ್ ಸುರೇಶ್ ಬಮಾಲಿರವರು ಎಸೆದ ಅಂತಿಮ ಓವರ್‌ನಲ್ಲಿ ನೋಬಾಲ್ ಎಸೆತವನ್ನು ಹಾಕುವ ಮೂಲಕ ಫ್ರೀಹಿಟ್‌ಗೆ ಅವಕಾಶ ಮಾಡಿಕೊಟ್ಟರೂ ಬಳಿಕ ಚೇತರಿಸಿಕೊಂಡು ಚಾಕಚಾಕ್ಯತೆಯಿಂದ ಬೌಲಿಂಗ್ ಮಾಡಿ ಎದುರಾಳಿಗೆ ಗೆಲುವಿನ ರನ್ ಬಿಟ್ಟು ಕೊಡದೆ ಅದ್ಭುತ ನಿಯಂತ್ರಣ ಸಾಧಿಸಿದ್ದರಿಂದ ಪಂದ್ಯವು “ಟೈ” ಅಗಿ ಸೂಪರ್ ಓವರ್" ಕಂಡುಕೊಳ್ಳುವಂತಾಯಿತು.
ಸರಣಿಶ್ರೇಷ್ಟ ಸಾಗರ್ ಭಂಡಾರಿಗೆ ಒಲಿದ ಬೈಕ್: ಪಂದ್ಯಾಟದ ಉತ್ತಮ ಬ್ಯಾಟರ್ ಆಗಿ ಫ್ರೆಂಡ್ಸ್ ಬೆಂಗಳೂರಿನ ನವೀನ್, ಉತ್ತಮ ಬೌಲರ್ ಆಗಿ ಪ್ರಕೃತಿ ನ್ಯಾಶ್‌ನ ಸ್ವಸ್ತಿಕ್ ನಾಗರಾಜ್, ಉತ್ತಮ ಕೀಪರ್ ಆಗಿ ಪ್ರಕೃತಿ ನ್ಯಾಶ್‌ನ ಮಹೇಶ್, ಉತ್ತಮ ಕ್ಷೇತ್ರರಕ್ಷಕನಾಗಿ ಫ್ರೆಂಡ್ಸ್ ಬೆಂಗಳೂರಿನ ನಸ್ರುರವರು ಹೊರ ಹೊಮ್ಮಿದ್ದಾರೆ. ಪಂದ್ಯಶ್ರೇಷ್ಟ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿಯಾಗಿ ಫ್ರೆಂಡ್ಸ್ ಬೆಂಗಳೂರಿನ ಸಾಗರ್ ಭಂಡಾರಿರವರು ಒಂದು ಲಕ್ಷ ಮೌಲ್ಯದ ಬೈಕ್‌ನ್ನು ಕೊಡುಗೆಯಾಗಿ ಪಡೆದುಕೊಂಡಿದ್ದಾರೆ. ಸಿಝ್ಲರ್ ಗ್ರೂಪ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿಯವರು ನೂತನ ಬೈಕಿನ ಕೀಯನ್ನು ಸಾಗರ್ ಭಂಡಾರಿರವರಿಗೆ ಹಸ್ತಾಂತರಿಸಿದರು.
ಕ್ವಾಲಿಫೈಯರ್, ಎಲಿಮಿನೇಟರ್ ಪಂದ್ಯ: ಲೀಗ್‌ನ ಆರಂಭದಿಂದಲೇ ಪ್ರಕೃತಿ ನ್ಯಾಶ್ ಬೆಂಗಳೂರು, ಫ್ರೆಂಡ್ಸ್ ಬೆಂಗಳೂರು ಹಾಗೂ ಜೋನ್ಸನ್ ಕುಂದಾಪುರ ತಂಡಗಳು ಮುಂದಿನ ಹಂತಕ್ಕೆ ಲಗ್ಗೆಯಿಡುವ ಸ್ಪಷ್ಟ ಸೂಚನೆ ನೀಡುತ್ತು. ಮತ್ತೊಂದು ಸ್ಥಾನಕ್ಕೆ ರಿಯಲ್ ಫೈಟರ್ಸ್ ಉಡುಪಿ ಹಾಗೂ ಇಜಾನ್ ಸ್ಪೋರ್ಟ್ಸ್ ಉಡುಪಿ ತಂಡಗಳ ನಡುವೆ ರಿಯಲ್ ಫೈಟ್ ಇದ್ದು ಅಂತಿಮವಾಗಿ ಇಜಾನ್ ಸ್ಪೋರ್ಟ್ಸ್ ಉಡುಪಿ ಅಗ್ರ ನಾಲ್ಕರ ಹಂತಕ್ಕೆ ತೇರ್ಗಡೆ ಪಡೆಯಿತು. ಮೊದಲ ಕ್ವಾಲಿಫೈಯರ್‌ನಲ್ಲಿ ಫ್ರೆಂಡ್ಸ್ ಬೆಂಗಳೂರು ಹಾಗೂ ಪ್ರಕೃತಿ ನ್ಯಾಶ್ ಬೆಂಗಳೂರು ನಡೆಸಿದ ಕಾದಾಟದಲ್ಲಿ ಫ್ರೆಂಡ್ಸ್ ಬೆಂಗಳೂರು ತಂಡ ಗೆದ್ದು ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತು. ಜೋನ್ಸನ್ ಕುಂದಾಪುರ ಹಾಗೂ ಇಜಾನ್ ಸ್ಪೋರ್ಟ್ಸ್ ಉಡುಪಿ ಇವುಗಳ ನಡುವೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಜೋನ್ಸನ್ ಕುಂದಾಪುರ ಸೋತು ಕೂಟದಿಂದ ನಿರ್ಗಮಿಸಿತು. ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರಕೃತಿ ನ್ಯಾಶ್ ತಂಡವು ಇಝಾನ್ ಸ್ಪೋರ್ಟ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.
ಎ’ ವಿಭಾಗದಿಂದ ಫ್ರೆಂಡ್ಸ್ ಬೆಂಗಳೂರು ಹಾಗೂ ಜೋನ್ಸನ್ ಕುಂದಾಪುರ, `ಬಿ’ ವಿಭಾಗದಿಂದ ಪ್ರಕೃತಿ ನ್ಯಾಶ್ ಬೆಂಗಳೂರು ಹಾಗೂ ಇಜಾನ್ ಸ್ಪೋರ್ಟ್ಸ್ ಉಡುಪಿ ತಂಡಗಳು ಅಗ್ರ ಎರಡು ತಂಡಗಳಾಗಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿತ್ತು. ಜೈ ಕರ್ನಾಟಕ ಬೆಂಗಳೂರು, ರಿಯಲ್ ಫೈಟರ್ಸ್ ಉಡುಪಿ, ಡ್ರೀಮ್ ಇಲೆವೆನ್ ಚೆನ್ನೈ, ಮೈಟಿ ಬೆಂಗಳೂರು ತಂಡಗಳು ಲೀಗ್ ಹಂತದಲ್ಲಿಯೇ ಹೊರ ಬಿದ್ದಿದ್ದವು.
ಸಹಕಾರ:
ಪಂದ್ಯಾಕೂಟದಲ್ಲಿ ಅಂಪೈರ್ಸ್‌ಗಳಾಗಿ ನ್ಯೂಜಿಲ್ಯಾಂಡ್‌ನ ಬಿಲ್ಲಿ ಬೌಡೆನ್ ಎಂದೇ ಖ್ಯಾತರಾದ ಮದನ್ ಮಡಿಕೇರಿ, ಹರೀಶ್ ಪಡೀಲು, ದೀಕ್ಷಿತ್ ಮಂಗಳೂರು, ದಿನೇಶ್ ಆಚಾರ್ಯ, ವೀಕ್ಷಕ ವಿವರಣೆಗಾರರಾಗಿ ಕನ್ನಡ ಭಾಷೆಯಲ್ಲಿ ಕ್ರೀಡಾರತ್ನ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಅಂಬಲ್ಪಾಡಿ ಹಾಗೂ ಶಾಫಿ ಪರ್ಪುಂಜ, ಆಂಗ್ಲ ಭಾಷೆಯಲ್ಲಿ ಅರವಿಂದ ಮಣಿಪಾಲ್, ಹಿಂದಿ ಭಾಷೆಯಲ್ಲಿ ಅಜೇಯ್‌ರಾಜ್ ಮಂಗಳೂರು, ಕಿಶೋರ್ ಪೆರ್ಲರವರು ಸಹಕರಿಸಿದರು.
ಬಹುಮಾನ ವಿತರಣೆ:
ಸಭಾ ಕಾರ್ಯಕ್ರಮದ ಬಳಿಕ ಮಾಜಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿರವರು ಆಗಮಿಸಿ ಶುಭ ಕೋರಿದ್ದರು. ಪಂದ್ಯಾಟದ ಬಳಿಕ ತಡ ರಾತ್ರಿ ಬಹುಮಾನ ವಿತರಣೆ ಜರಗಿದ್ದು, ಬಹುಮಾನ ವಿತರಣೆಯು ಪುತ್ತೂರು ಸಿಝ್ಲರ್ ಗ್ರೂಪ್‌ನ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ರೋಶನ್ ರೆಬೆಲ್ಲೋ, ಕಾರ್ಯದರ್ಶಿ ಲೋಹಿತ್ ಪಿ.ಜೆ, ಕೋಶಾಧಿಕಾರಿ ಕವನ್ ನಾಕ್, ಸೂರಜ್ ನಾಯರ್ ಸಾಮೆತ್ತಡ್ಕ, ಹೊಟೇಲ್ ಸುಜಾತಾದ ಸುಶಾಮ್ ಶೆಟ್ಟಿ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ರತನ್ ನ್ಯಾಕ್ ಕರ್ನೂರು, ಮಂಗಳೂರು ಮುಗುರೋಡಿ ಕನ್‌ಸ್ಟ್ರಕ್ಷನ್‌ನ ಸನ್ಮತ್ ಮೇಲಾಂಟ, ಉದ್ಯಮಿ ಮಹೇಶ್ ಪಕ್ಕಳ, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲುಗುತ್ತು, ಪುತ್ತೂರು ಪ್ರಾಪರ್ಟಿಸ್‌ನ ನಿತಿನ್ ಪಕ್ಕಳ, ಇಡ್ಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಿತ್ತೂರು, ಪ್ರಶಾಂತ್ ಎಂಟರ್‌ಪ್ರೈಸಸ್‌ನ ಪ್ರಶಾಂತ್ ಶೆಣೈ, ಸುನಿಲ್ ರೈ ಪಾಲ್ಗುಣಿ, ಮಾಣಿ ಸುರಭಿ ಗ್ರೂಪ್‌ನ ನವೀತ್ ಶೆಟ್ಟಿ, ನವೀನ್ ರೈ ಎಣ್ಣೂರುಗುತ್ತು, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿಸೋಜ, ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಉದ್ಯಮಿ ಶಾಸ್ತ್ರ ಚಡಗ ಹೈದರಾಬಾದ್, ಸೂರಜ್ ಶೆಟ್ಟಿ ಸ್ವಾಗತ್ ಸಾಮೆತ್ತಡ್ಕ, ಶ್ರೀರಾಂ ಪಕ್ಕಳ ಕರ್ನೂರು, ಅವಿನಾಶ್ ರೈ ಕುಡ್ಚಿಲ, ಮೊಹಮ್ಮದ್ ಸೈಪ್ ದರ್ಬೆ, ಬ್ರಿಜೇಶ್ ಶೆಟ್ಟಿ ಅರಿಯಡ್ಕ, ಆಶ್ರಯ್ ರೈ ಮಾದೋಡಿ, ಮೈಸೂರು ಹೋಟೆಲ್ ನೀಲಾಂಜನ ಮಹೇಶ್ ಪ್ರಸಾದ್‌ನ ರವಿನಂದನ್ ಶೆಟ್ಟಿ, ಲಕ್ಷ್ಮಣ್ ಬೈಲಾಡಿ ಸಂಪ್ಯ, ಸಚಿನ್ ರೈ ಪಾಪೆಮಜಲು, ಸಾರ್ಥಕ್ ಶೆಟ್ಟಿ ಅರಿಯಡ್ಕ, ಚಂದ್ರಶೇಖರ್ ರೈ ಜಿಡೆಕಲ್, ಅಶ್ವಿನ್ ರೈ ಅರಿಯಡ್ಕ, ಮುನ್ನಾಲಾಯಿ ಇನ್ಫ್ರಾ ಪ್ರಾಜೆಕ್ಟ್‌ನ ಮನು ಯಂ ರೈ, ನ್ಯಾಯವಾದಿ ಜಯರಾಮ್ ರೈ, ಉದ್ಯಮಿ ಹಾಫಿಲ್ ಕೂರ್ನಡ್ಕ, ಇಂದಿವರ್ ಭಟ್ ಸಾಮೆತ್ತಡ್ಕ, ಪಂಚಮಿ ಸ್ಟೋರ್‌ನ ಉಮೇಶ್ ಮಹಾಬಲ, ಮೊಹಮ್ಮದ್ ತ್ವಾಹ, ದೀಪಕ್ ಮಲ್ಯ, ನವಜೀವನ್ ಫ್ಲವರ್‍ಸ್‌ನ ಜೋನ್ ಪೀಟರ್ ಡಿಸಿಲ್ವ ಸಾಮೆತ್ತಡ್ಕ, ನವನೀತ್ ಬಜಾಜ್ ಕೆಮ್ಮಿಂಜೆ, ರಾಕೇಶ್ ರೈ ಕುದ್ಯಾಡಿ, ಸಾರ್ಥಕ್ ಶೆಟ್ಟಿ ಮುಂಬಯಿ, ಬಶೀರ್ ಪರ್ಲಡ್ಕ, ಸಿರಾಜ್ ಸಾಮೆತ್ತಡ್ಕ, ಮುಸ್ತಾಫಾ ಪುಷ್ಪಕ್, ಕಿಶೋರ್ ಪೂಜಾರಿ, ರೇಶಲ್ ರೇಗೋ, ದಾವುದ್ ಬನ್ನೂರು, ಸಂದೀಪ್ ರೈ ಕೆಲ್ಲಾಡಿ, ಇಮ್ರಾಝ್ ಬೊಳ್ವಾರು, ಅಮರ್ ಅಕ್ಬರ್ ಅಂತೋನಿ ಟ್ರೋಫಿ ಆಯೋಜಕ ರಝಾಕ್ ಬಿ.ಎಚ್., ಮಹಮದ್ ತಾಹ ಸಾಮೆತ್ತಡ್ಕ, ಪ್ರಸಾದ್ ಕೋಲಾಡಿ, ಪ್ರಸಾದ್ ಕೆಎಸ್‌ಆರ್‌ಟಿಸಿರವರ ಸಹಿತ ಹಲವರು ಉಪಸ್ಥಿತರಿದ್ದರು.
ಪಂದ್ಯಾಟಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದವರಿಗೆ ಸಂಘಟಕರು ಶಾಲು ಹಾಕಿ ಅಭಿನಂದಿಸಿದರು. ಆಕರ್ಷಕ ಸುಡುಮದ್ದುಗಳು, ನೆಕ್ಕಿಲಾಡಿ ಜಿ.ಎಸ್ ಬ್ಯಾಂಡ್ ವಾದ್ಯ, ಆಕರ್ಷಕ ವೀಕ್ಷಕ ವಿವರಣೆ, ಡಿ.ಜೆ ಸಂತುರವರ ಮ್ಯೂಸಿಕ್, ಚಿಯರ್ ಗರ್ಲ್ಸ್ ಆಕರ್ಷಣೆ ಪಂದ್ಯಾಟದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಫಿಲೋಮಿನಾ ಕಾಲೇಜು ಕ್ಯಾಂಪಸ್ ಬೆಳಕಿನ ಚಿತ್ತಾರದೊಂದಿಗೆ ಆಕರ್ಷಕವಾಗಿ ಕಂಗೊಳಿಸುವಂತೆ ಸಂಘಟಕರು ಮಾಡಿದ್ದರು. ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಫೈನಲ್ “ಟೈ”, ಸೂಪರ್ ಓವರ್…
ಇಂದಿನ ಹೊಡಿಬಡಿ ಕ್ರಿಕೆಟ್ ಆಟದಲ್ಲಿ ಫಲಿತಾಂಶವನ್ನು ಮೊದಲೇ ಊಹಿಸಲಾಗದು. ಎರಡೂ ತಂಡಗಳಲ್ಲಿ ಘಟಾನುಘಟಿ ಆಟಗಾರರನ್ನು ಹೊಂದಿದ್ದರೂ ಫಲಿತಾಂಶ ಎಂಬ ಗುಮ್ಮ ಎರಡೂ ತಂಡಕ್ಕಿರುತ್ತದೆ. ಸಿಝ್ಲರ್ ಟ್ರೋಫಿಯು ಇದೀಗ ಐದನೇ ವರ್ಷವನ್ನು ಕಾಣುತ್ತಿದ್ದು, ಈ ಬಾರಿಯ ರೋಚಕ ಫೈನಲ್ ಈ ಹಿಂದೆ ಕಾಣ ಸಿಗಲಿಲ್ಲ. ಅದೂ ಕೂಡ ಫೈನಲ್ ಸೂಪರ್ ಓವರ್ ತನಕ ಬೆಳೆದದ್ದು ಎರಡೂ ತಂಡಗಳ ಪೈಪೋಟಿ ಎಷ್ಟರಮಟ್ಟದ್ದು ಅಂತ ತಿಳಿಯುತ್ತದೆ. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಫ್ರೆಂಡ್ಸ್ ಬೆಂಗಳೂರು ತಂಡದ ಸಾಗರ್ ಭಂಡಾರಿರವರು ಫೈನಲ್ ಪಂದ್ಯದಂತೆಯೇ ಇಲ್ಲಿ ಕೂಡ ಅಪೆಕ್ಸ್‌ರವರ ಓವರ್‌ನ ಪ್ರಥಮ ಬಾಲನ್ನು ಸಿಕ್ಸರ್‌ಗೆ ಅಟ್ಟಿದ್ದರು. ಬಳಿಕ ದ್ವಿತೀಯ ಬಾಲನ್ನು ಬೌಂಡರಿಗೆ, ಮೂರನೇ ಬಾಲಿಗೆ ಓಟಾಗಿ ಕೇವಲ ಮೂರು ಎಸೆತಗಳಲ್ಲಿ 10 ರನ್ ಬಾರಿಸಿದರು. ತಂಡವು ಒಂದು ಓವರ್‌ನಲ್ಲಿ 11 ರನ್ ಗಳಿಸಿತು. ಆದರೆ ಎದುರಾಳಿ ಪ್ರಕೃತಿ ನ್ಯಾಶ್ ತಂಡವು ಒಂದು ಓವರ್‌ನಲ್ಲಿ ಕೇವಲ ನಾಲ್ಕು ರನ್‌ಗಳನ್ನು ಗಳಿಸಿ ಏಳು ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಸಿಝ್ಲರ್ ಟ್ರೋಫಿ ನಮಗೆ ಪ್ರೆಸ್ಟೀಜಿಯಸ್..
ಪ್ರಸನ್ನ ಶೆಟ್ಟಿಯವರ ಮುಂದಾಳತ್ವದಲ್ಲಿ ಸಿಝ್ಲರ್ ಗ್ರೂಪ್‌ರವರು ಎರಡು ವರ್ಷಕ್ಕೊಮ್ಮೆ ಈ ಟೂರ್ನಿಯನ್ನು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪುತ್ತೂರಿನಲ್ಲಿ ಅದರಲ್ಲೂ ಈ ಕ್ರೀಡಾಂಗಣದಲ್ಲಿ ಆಡುವುದು ನಮಗೆ ಹೆಮ್ಮೆ ಎನಿಸುತ್ತದೆ. ಇಲ್ಲಿನ ಸಂಘಟಕರಲ್ಲಿನ ಒಗ್ಗಟ್ಟನ್ನು ಮೆಚ್ಚಲೇಬೇಕಾಗಿದೆ. ಆದ್ದರಿಂದ ಪುತ್ತೂರಿನಲ್ಲಿ ಪ್ರತಿ ವರ್ಷ ಸಿಝ್ಲರ್ ಟ್ರೋಫಿ ನಡೆಸುವಂತಾಗಲಿ.
-ಕ್ರಿಸ್ ಗೈಲ್ ಸಾಗರ್ ಭಂಡಾರಿ,
ಸರಣಿಶ್ರೇಷ್ಠ ಪುರಸ್ಕೃತರು
ಪಂದ್ಯಾಟದ ಹೈಲೈಟ್ಸ್…
*ಟೂರ್ನಮೆಂಟ್‌ನ ಪ್ರಥಮ ಬಾಲಿಗೆ ಬೌಂಡರಿ ಪ್ರಕೃತಿ ನ್ಯಾಶ್ ಬೆಂಗಳೂರುನ ಜೋನ್‌ರವರು ದಾಖಲಿಸಿದ್ದಾರೆ.
- ಟೂರ್ನಮೆಂಟ್‌ನ ಪ್ರಥಮ ರಿವರ್ಸ್ ಸಿಕ್ಸ್ ಪ್ರಥಮ ಪ್ರಕೃತಿ ನ್ಯಾಶ್‌ನ ಸ್ವಸ್ತಿಕ್ ನಾಗರಾಜ್‌ರವರು ದಾಖಲಿಸಿದ್ದಾರೆ.
- ಪಂದ್ಯಾಟದ ಮೊದಲ ಮೇಡನ್ ಓವರ್ ಅನ್ನು ಫ್ರೆಂಡ್ಸ್ ಬೆಂಗಳೂರು ಪ್ರಸಾದ್ ನೇರಳಕಟ್ಟೆ ದಾಖಲಿಸಿದ್ದಾರೆ. ಅದೇ ಪಂದ್ಯದಲ್ಲಿ ಡ್ರೀಮ್ ಇಲೆವೆನ್ ಚೆನ್ನೈ ವಿರುದ್ಧ ಎರಡು ಓವರ್, ಒಂದು ಮೇಡನ್, ಎರಡು ರನ್, ಒಂದು ವಿಕೆಟ್ ಕೂಡ ಅವರು ಪಡೆದಿರುತ್ತಾರೆ.
- ಜೋನ್ಸನ್ ಕುಂದಾಪುರದ ರಾಜ ಸಾಲಿಗ್ರಾಮರವರು ಜೈ ಕರ್ನಾಟಕ ವಿರುದ್ಧ ನಡೆದ ಪ್ರಥಮ ಪಂದ್ಯದಲ್ಲಿಯೇ 22 ರನ್, ಒಂದು ವಿಕೆಟ್ ಪಡೆದು ಪಂದ್ಯಶ್ರೇಷ್ಟರಾಗಿರುತ್ತಾರೆ ಮಾತ್ರವಲ್ಲ ಎರಡನೇ ಪಂದ್ಯದಲ್ಲೂ ರಾಜ ಸಾಲಿಗ್ರಾಮ ೨೬ ರನ್ ದಾಖಲಿಸಿದ್ದಾರೆ
- ಬೆಳಗ್ಗಿನ ಅವಧಿಯಲ್ಲಿ ಟೆನ್ನಿಸ್ ಬಾಲ್ ಕ್ರಿಸ್ ಗೈಲ್ ಖ್ಯಾತಿಯ ಫ್ರೆಂಡ್ಸ್ ಬೆಂಗಳೂರಿನ ಸಾಗರ್ ಭಂಡಾರಿರವರು ಜೈ ಕರ್ನಾಟಕ ವಿರುದ್ಧ 28 ರನ್ ದಾಖಲಿಸಿದ್ದಾರೆ. ಫ್ರೆಂಡ್ಸ್ ಬೆಂಗಳೂರಿನ ಪ್ರಸಾದ್ ನೇರಳಕಟ್ಟೆರವರು ನಾಲ್ಕು ರನ್ನಿಗೆ ಎರಡು ವಿಕೆಟ್ ಕಬಳಿಸಿದ್ದಾರೆ.
- ಫ್ರೆಂಡ್ಸ್ ಬೆಂಗಳೂರಿನ ನಾಗ ಗಿಳಿಯಾರು ಮತ್ತು ಮ್ಯಾಡಿರವರು ಡ್ರೀಮ್ ಇಲವೆನ್ ಚೆನ್ನೈ ವಿರುದ್ಧ ಪ್ರಥಮ ವಿಕೆಟಿಗೆ 41 ರನ್ ಜೊತೆಯಾಟ ದಾಖಲಿಸಿದ್ದಾರೆ.
- ಪಂದ್ಯಾಟದ ಗರಿಷ್ಟ ಮೊತ್ತ ಎಂಟು ಓವರ್ 73 ರನ್ ಡ್ರೀಮ್ ಇಲೆವೆನ್ ಚೆನ್ನೈ ವಿರುದ್ಧ ಫ್ರೆಂಡ್ಸ್ ಬೆಂಗಳೂರು ದಾಖಲಿಸಿದೆ.
- ಜೋನ್ಸನ್ ಕುಂದಾಪುರದ ಚವನ್ ಭಂಡಾರಿರವರು ಚೆನ್ನೈ ಡ್ರೀಮ್ ಇಲೆವೆನ್ ವಿರುದ್ಧ ಎರಡು ಓವರ್‌ನಲ್ಲಿ ಐದು ರನ್ನಿಗೆ ಎರಡು ವಿಕೆಟ್ ಪಡೆದು ಪಂದ್ಯಶ್ರೇಷ್ಠರಾಗಿದ್ದಾರೆ.
- ಅರಫಾ ರಿಯಲ್ ಫೈಟರ್ಸ್ ವಿರುದ್ಧ ನ್ಯಾಶ್‌ನ ಸ್ವಸ್ತಿಕ್ ನಾಗಾರಾಜ್ 26 ರನ್ ಮತ್ತು ಜೋನ್ 25 ರನ್‌ಗಳ ಉತ್ತಮ ಜೊತೆಯಾಟ ದಾಖಲಿಸಿದ್ದಾರೆ
*ಎ'ವಿಭಾಗದಲ್ಲಿ ಫ್ರೆಂಡ್ಸ್ ಬೆಂಗಳೂರು, ಜೈ ಕರ್ನಾಟಕ, ಜೋನ್ಸನ್ ಕುಂದಾಪುರ, ಚೆನ್ನೈ ಡ್ರೀಮ್ ಇಲೆವೆನ್,
ಬಿ’ ವಿಭಾಗದಲ್ಲಿ ಪ್ರಕೃತಿ ನ್ಯಾಶ್ ಬೆಂಗಳೂರು, ರಿಯಲ್ ಫೈಟರ್ಸ್ ಉಡುಪಿ, ಮೈಟಿ ಹೊಸನಗರ, ಇಜಾನ್ ಉಡುಪಿ ತಂಡಗಳು ಕಣಕ್ಕಿಳಿದಿತ್ತು. - ಇತ್ತಂಡಗಳ ಆಟಗಾರರಿಗೆ ಎರಡು ಕಡೆ ಕುಳಿತುಕೊಳ್ಳಲು ಡಗೌಟ್ ಅನ್ನು ನಿರ್ಮಿಸಲಾಗಿತ್ತು.
- ಎಂ ಸ್ಪೋರ್ಟ್ಸ್ ಚಾನೆಲ್ ಪಂದ್ಯಾಟವನ್ನು ನೇರಪ್ರಸಾರ ಮಾಡಿತ್ತು.