ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕಾಮಗಾರಿಯ ವೇಳೆ ಸ್ಥಳೀಯ ಅಗತ್ಯತೆಗಳನ್ನು ಈಡೇರಿಸುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಹೆದ್ದಾರಿ ಇಲಾಖಾ ಯೋಜನಾ ನಿರ್ದೇಶಕ ಜಾವೇದ್ ಅಹಮ್ಮದ್ ರವರ ಜೊತೆ ಜ.22ರಂದು ಉಪ್ಪಿನಂಗಡಿಯ ಸಮಸ್ಯೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ವೇಳೆ ಅಗಲವಾದ ಸಮರ್ಪಕ ಚರಂಡಿ ನಿರ್ಮಾಣ, ಅಂಡರ್ ಪಾಸ್ ವ್ಯವಸ್ಥೆ ಕಲ್ಪಿಸುವುದು, ಸರಕಾರಿ ಮಾದರಿ ಶಾಲಾ ಹಳೆ ಕಟ್ಟಡವನ್ನು ತೆರವುಗೊಳಿಸುವುದು ಮೊದಲಾದ ವಿಚಾರಗಳ ಬಗ್ಗೆ ಸ್ಥಳೀಯರ ಸಮ್ಮುಖದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಗಾಗಲೇ ನೂತನವಾಗಿ ನಿರ್ಮಾಣವಾದ ಶಾಲಾ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಡಿಕೆಯಂತೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವ ಹಳೆಯ ಕಟ್ಟಡವನ್ನು ತೆರವುಗೊಳಿಸಲು ತಕ್ಷಣವೇ ಗಮನ ಹರಿಸಬೇಕೆಂದ ಶಾಸಕರು, ಹೆದ್ದಾರಿ ಕಾಮಗಾರಿಗೆ ಅಡ್ಡಿಯಾಗಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ತೆರವುಗೊಳಿಸಲು ಮೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ., ಡಿಸಿಸಿ ಕಾರ್ಯದರ್ಶಿಗಳಾದ ಉಮಾನಾಥ ಶೆಟ್ಟಿ ಪೆರ್ನೆ, ಮುರಳೀಧರ ರೈ ಮಠಂತಬೆಟ್ಟು, ಕಾಂಗ್ರೆಸ್ ಮುಖಂಡರಾದ ಅಶ್ರಫ್ ಬಸ್ತಿಕಾರ್, ಕೃಷ್ಣ ರಾವ್ ಅರ್ತಿಲ, ಫಾರೂಕ್ ಜಿಂದಗಿ, ಸ್ಥಳೀಯರಾದ ಯು. ರಾಮ, ನಾಗೇಶ್ ಪ್ರಭು, ಪಂಚಾಯತ್ ಸದಸ್ಯರಾದ ಅಬ್ದುಲ್ ರಶೀದ್, ಅಬ್ದುರ್ರಹ್ಮಾನ್ ಕೆ. ಮತ್ತಿತರರು ಉಪಸ್ಥಿತರಿದ್ದರು.
ಸ್ಥಳೀಯರಲ್ಲಿ ಆತಂಕ ಬೇಡ: ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ ಭಾಗದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸಂದರ್ಭ ಈ ಭಾಗದವರಲ್ಲಿ ಗೊಂದಲ ಏರ್ಪಟ್ಟಿತ್ತು. ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಖ್ತರ್ ಅವರನ್ನು ಸ್ಥಳಕ್ಕೆ ಕರೆಸಿ, ಕೆಲವೊಂದು ಬೇಡಿಕೆಗಳನ್ನು ಮುಂದಿಡಲಾಗಿದೆ. ಪ್ರಮುಖವಾಗಿ ಶಾಲೆಗಳ ಸಂಕೀರ್ಣವಾಗಿರುವ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ವಿದ್ಯಾರ್ಥಿಗಳಿಗೆ ಹೆದ್ದಾರಿ ದಾಟಲು ಅನುಕೂಲವಾಗುವಂತೆ ಫೂಟ್ ಬ್ರಿಡ್ಜ್ ಅನ್ನು ನಿರ್ಮಾಣ ಮಾಡಲು ತಿಳಿಸಲಾಗಿದೆ. ಅದಕ್ಕೂ ಅಧಿಕಾರಿಗಳಿಂದ ಒಪ್ಪಿಗೆ ದೊರೆತಿದೆ. ಅಲ್ಲದೇ, ಹಿರೇಬಂಡಾಡಿ ಹೋಗುವವರಿಗೆ ಅನುಕೂಲವಾಗುವಂತೆ ಗಾಂಧಿಪಾರ್ಕ್ ಬಳಿ ಅಂಡರ್‌ಪಾಸಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಈಗಾಗಲೇ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಕವಲೊಡೆಯುವಲ್ಲಿ ಚರಂಡಿ ಸಮಸ್ಯೆಯಿಂದ ನೀರು ನಿಲ್ಲುತ್ತಿದ್ದು, ಇಲ್ಲಿ ದೊಡ್ಡ ಚರಂಡಿಯನ್ನು ಕಲ್ಪಿಸಿ, ಉಪ್ಪಿನಂಗಡಿಯ ಎಲ್ಲಾ ನೀರು ಇದೇ ಚರಂಡಿಗೆ ಹರಿದು ಮುಂದಕ್ಕೆ ಸಾಗುವ ಹಾಗೆ ವ್ಯವಸ್ಥೆ ಮಾಡಬೇಕೆಂದು ತಿಳಿಸಿಲಾಗಿದ್ದು, ಅದಕ್ಕೂ ಅವರು ಒಪ್ಪಿಕೊಂಡಿದ್ದಾರಲ್ಲದೆ, ಆದಷ್ಟು ಬೇಡ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮುಗಿಸಿಕೊಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಸ್ಥಳೀಯರಲ್ಲಿ ಆತಂಕ ಬೇಡ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ತಿಳಿಸಿದರು.