ಪ್ರೀತಿ, ವಿಶ್ವಾಸವಿದ್ದಲ್ಲಿ ಪವಿತ್ರ ಸಾನಿಧ್ಯಗಳು ಅಭಿವೃದ್ಧಿ-ಅಶೋಕ್ ರೈ
ಪುತ್ತೂರು: ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನದ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಜ.23ರಂದು ಸಾಮೂಹಿಕ ಪ್ರಾರ್ಥನೆ, ಭಜನಾ ಕಾರ್ಯಕ್ರಮ, ಗಣಹೋಮ, ಸತ್ಯನಾರಾಯಣ ಪೂಜೆ ಧಾರ್ಮಿಕ ವಿಧಿವಿಧಾನಗಳು ಜರಗಿತು.
ಅರ್ಚಕ ಕೃಷ್ಣ ಭಟ್‌ರವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿದ್ದು, ಕಲಿಯುಗದಲ್ಲಿ ಶ್ರೀ ಕೊರಗಜ್ಜನ ಸನ್ನಿಧಾನದಲ್ಲಿ ಅಪಾರ ಶಕ್ತಿಯಿದೆ. ಶ್ರೀ ಕೊರಗಜ್ಜನ ಆಶೀವಾದದಿಂದ ಶ್ರೀ ಕ್ಷೇತ್ರ ಸಮೃದ್ಧಿಯತ್ತ ಸಾಗಲಿ, ಊರಿಗೆ ಸುಭೀಕ್ಷೆ ನೀಡಲಿ, ನೇಮೋತ್ಸವ ನಿರ್ವಿಘ್ನವಾಗಿ ನೆರವೇರಲಿ ಎಂದು ಹೇಳಿ ಪ್ರಾರ್ಥಿಸಿದರು. ಶ್ರೀ ಕ್ಷೇತ್ರದ ದೈವದ ಪ್ರಧಾನ ಅರ್ಚಕ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ಮಧ್ಯಸ್ಥ ಗಣೇಶ್ ಪೂಜಾರಿ ಕೆಮ್ಮಿಂಜೆರವರು ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶಾಸಕರಿಂದ ಇಂಟರ್‌ಲಾಕ್ ಉದ್ಘಾಟನೆ:
ಶ್ರೀ ಕ್ಷೇತ್ರದಲ್ಲಿ ಸಮಾಜ ಸೇವಕ ಸದಾಶಿವ ಪೈ ದಂಪತಿಯ ಕಾಣಿಕೆಯ ಮೂಲಕ ಸುಮಾರು ರೂ.1.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಇಂಟರ್‌ಲಾಕ್ ಅನ್ನು ಶಾಸಕ ಅಶೋಕ್ ಕುಮಾರ್ ರೈಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪ್ರೀತಿ-ವಿಶ್ವಾಸವಿದ್ದಲ್ಲಿ ಜನರು ಖಂಡಿತಾ ಬರುತ್ತಾರೆ. ತಂದೆ-ತಾಯಿಯ ಆಶೀರ್ವಾದವಿದ್ದಲ್ಲಿ ದೈವ-ದೇವರ ಆಶೀರ್ವಾದವಿರುತ್ತದೆ. ಆದ್ದರಿಂದ ಎಲ್ಲಿ ಪ್ರೀತಿ-ವಿಶ್ವಾಸವಿದೆಯೋ ಅಲ್ಲಿ ಪವಿತ್ರ ಸಾನಿಧ್ಯಗಳು ಅಭಿವೃದ್ಧಿ ಹೊಂದುತ್ತವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿಯವರು ಎಂದಿಗೂ ಪ್ರಶಸ್ತಿಗೆ ಅರ್ಜಿ ಹಾಕಿದವರಲ್ಲ. ಅವರಲ್ಲಿನ ಸಮಾಜಮುಖಿ ಚಿಂತನೆಯು ಅವರಿಗೆ ಪ್ರಶಸ್ತಿ ಅರಸಿಕೊಂಡು ಬರುತ್ತದೆ. ಜನರಲ್ಲಿ ಧನ್ಯತಾ ಭಾವ ಬರಬೇಕಾದರೆ ಅವರ ನೋವಿಗೆ ನಾವು ಸ್ಪಂದನೆಯಾದಾಗ ಮಾತ್ರ ಸಾಧ್ಯ. ಎಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿದಾಗ ಕೊರಗಜ್ಜ ನಮ್ಮನ್ನು ಆಶೀರ್ವದಿಸುತ್ತಾನೆ ಎಂದರು.
ಕ್ಷೇತ್ರವು ವ್ಯಾಪಾರೀಕರಣ ಕ್ಷೇತ್ರವಾಗದೆ ಭಕ್ತರ ಕ್ಷೇತ್ರವಾಗಿದೆ-ರವೀಂದ್ರ ಶೆಟ್ಟಿ:
ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರವು ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಭಕ್ತರ ಆಗಮನದಿಂದಾಗಿ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಈಗಾಗಲೇ ಶ್ರೀ ಕ್ಷೇತ್ರವು ದೈವ ನರ್ತನ ಚಪ್ಪರ, ಅಡುಗೆ ಕೋಣೆ, ಸುಸಜ್ಜಿತ ಮೇಲ್ಛಾವಣಿ, ಶಾಶ್ವತ ದ್ವರ, ಶೌಚಾಲಯ ಹೀಗೆ ಮೂಲಭೂತ ಸೌಕರ್ಯಗಳಿಂದ ಕೂಡಿದ್ದು ಇವೆಲ್ಲವೂ ಹೃದಯವಂತ ದಾನಿಗಳಿಂದ ಸಾಧ್ಯವಾಗಿದೆ. ಶ್ರೀ ಕ್ಷೇತ್ರವು ಬಡ ಜನರಿಂದ ಕೂಡಿದ್ದರೂ ಅವರ ಮನಸ್ಸು ಹೃದಯವಂತಿಕೆಯಿಂದ, ಪ್ರಾಮಾಣಿಕೆಯಿಂದ ಕೂಡಿರುವುದಾಗಿದೆ. ಶ್ರೀ ಕ್ಷೇತ್ರವು ಕೆಲವೊಂದು ಕ್ಷೇತ್ರಗಳಂತೆ ವ್ಯಾಪಾರೀಕರಣ ಕ್ಷೇತ್ರವಾಗದೆ ಭಕ್ತರ ನಿಜವಾದ ಕ್ಷೇತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈ, ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್ ಮಹಮದ್, ಪ್ರಮುಖರಾದ ಕೃಷ್ಣಪ್ರಸಾದ್ ಆಳ್ವ, ನಿಹಾಲ್ ಶೆಟ್ಟಿ, ರಫೀಕ್ ಎಂ.ಕೆ, ಅಬ್ದುಲ್ಲ ಕೆ ಮೊಟ್ಟೆತ್ತಡ್ಕ, ರಾಜು ಸುವರ್ಣ, ಅಧ್ಯಕ್ಷ ವಿಶ್ವನಾಥ ಮಣ್ಣಾಪು, ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ, ಕೋಶಾಧಿಕಾರಿ ಗುರುವ ಮಣ್ಣಾಪು, ಗೌರವ ಸಲಹೆಗಾರರಾದ ಗಂಗಾಧರ್ ಮಣ್ಣಾಪು, ಗಿರಿಧರ್ ಗೌಡ ಆಮೆಮನೆ ಸಂಪ್ಯ, ದಿನೇಶ್ ಅತ್ತಾಳ, ಸುಜೀರ್ ಶೆಟ್ಟಿ ನುಳಿಯಾಲು, ರಾಧಾಕೃಷ್ಣ ಆಚಾರ್ಯ ಸಹಿತ ಹಲವಾರು ಭಕ್ತರು ಉಪಸ್ಥಿತರಿದ್ದರು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಜೇಸಿಐ ತರಬೇತುದಾರ ದಾಮೋದರ್ ಪಾಟಾಳಿ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ..
ಪುತ್ತೂರು ಶಾಸಕರಾಗಿ ಶ್ರೀ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಶ್ರೀ ಕ್ಷೇತ್ರಕ್ಕೆ ಇಂಟರ್ ಲಾಕ್ ಕಾಣಿಕೆ ನೀಡಿದ ಸಮಾಜ ಸೇವಕ ಸದಾಶಿವ ಪೈ ಹಾಗೂ ಅವರ ಪತ್ನಿ ಅಂಜನ ಎಸ್ ಪೈ ಮಗಳು ಸುನೈನಾ ಪೈ ಅವರನ್ನು ಶ್ರೀ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ದಾನ ಅಲ್ಲ, ಕಾಣಿಕೆ..
ದೇವರಿಗೆ ನಮ್ಮಿಂದ ಏನು ಬೇಕು ಅದನ್ನು ತಗೋತಾನೆ ಹಾಗೆಯೇ ಯಾರ ಮೂಲಕ ಕೊಡಿಸಬೇಕು ಎಂಬುದು ಕೂಡ ದೇವರಿಗೆ ಗೊತ್ತಿರುತ್ತದೆ. ಅದೇ ರೀತಿ ಅಜ್ಜನಿಗೆ ಏನು ಬೇಕು ಅದನ್ನ ನನ್ನಿಂದ ತಗೊಂಡಿದ್ದಾನೆ. ಕೊರಗಜ್ಜ ಕ್ಷೇತ್ರಕ್ಕೆ ಕೊಟ್ಡದ್ದು ದಾನ ಅಲ್ಲ ಅದು ಕಾಣಿಕೆಯಾಗಿದೆ.
-ಸದಾಶಿವ ಪೈ,
ಇಂಟರ್‌ಲಾಕ್ ನೀಡಿದ ಸಮಾಜ ಸೇವಕರು
ಜ.24:ಶ್ರೀ ಕ್ಷೇತ್ರದಲ್ಲಿ..
ಜ.24ರಂದು ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ ಜರಗಲಿದೆ.