ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆ

0

9/11ಗೆ ಓರ್ವ ಸಿಬ್ಬಂದಿಯ ಅವಲಂಬನೆ ಯಾಕೆ-ಎಲ್ಲರಿಗೂ ಕೆಲಸ ಕಲಿಯಲು ಅವಕಾಶಕ್ಕೆ ಆಗ್ರಹ

ಉಪ್ಪಿನಂಗಡಿ: ಗ್ರಾ.ಪಂ.ನಲ್ಲಿ 9/11 ಕೆಲಸಕ್ಕೆ ಒಬ್ಬ ಸಿಬ್ಬಂದಿಯನ್ನೇ ಅವಲಂಬಿಸುವುದು ಬೇಡ. ಇತರ ಸಿಬ್ಬಂದಿಗೂ ಆ ಕೆಲಸ ಕಲಿಯಲು ಅವಕಾಶ ಮಾಡಿಕೊಡಿ. ಇದರೊಂದಿಗೆ ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಸಿಬ್ಬಂದಿಯನ್ನು ಅವರು ಮಾಡುವ ಕೆಲಸದಿಂದ ಬದಲಾವಣೆ ಮಾಡಿ ಅವರಿಗೆ ಬೇರೆ ಕೆಲಸಗಳನ್ನು ಕೊಡಿ ಎಂಬ ಆಗ್ರಹ ಉಪ್ಪಿನಂಗಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಕೇಳಿಬಂತು. ಚರ್ಚೆಯ ಸಂದರ್ಭ ಪಿಡಿಒ ಅವರು ಇದನ್ನು ಒಪ್ಪಿಕೊಳ್ಳದಿರಲು ಹಲವು ಕಾರಣಗಳನ್ನು ನೀಡಿದ ಘಟನೆಯೂ ಸಭೆಯಲ್ಲಿ ನಡೆಯಿತು.


ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಜ.23ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಬ್ದುರ್ರಹ್ಮಾನ್ ಕೆ. ಅವರು, ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ 9/11 ಕೆಲಸಕ್ಕೆ ಒಬ್ಬ ಸಿಬ್ಬಂದಿಯನ್ನು ಮಾತ್ರ ಅವಲಂಬನೆ ಮಾಡಲಾಗುತ್ತಿದೆ. ಅವರನ್ನು ಬಿಟ್ಟರೆ ಇಲ್ಲಿ 9/11 ಕೆಲಸ ಮಾಡಲು ಯಾರಿಗೂ ಗೊತ್ತಿಲ್ಲ. ಇತರ ಸಿಬ್ಬಂದಿಗೂ ಅದನ್ನು ಕಲಿಸಿಕೊಡಬೇಕು. ಒಬ್ಬರನ್ನೇ ಇದಕ್ಕೆ ಅವಲಂಬನೆ ಮಾಡುವುದು ಸರಿಯಲ್ಲ. ಅವರೊಂದು ವೇಳೆ ಕೆಲಸ ಬಿಟ್ಟರೆ ಆಗ ಏನು ಮಾಡುವುದು ಎಂದು ಪ್ರಶ್ನಿಸಿದರಲ್ಲದೆ, ನೀವು ಇಲ್ಲಿಗೆ ಬರುವ ಮೊದಲು ಇಲ್ಲಿ ಆರು ತಿಂಗಳಿಗೊಮ್ಮೆ ಸಿಬ್ಬಂದಿಯ ಕೆಲಸಗಳನ್ನು ಬದಲಾಯಿಸಲಾಗುತ್ತಿತ್ತು. ಆದರೆ ಆ ನಿಯಮ ಈಗ ಇಲ್ಲ. ಆದ್ದರಿಂದ ಇನ್ನು ಮುಂದೆ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಸಿಬ್ಬಂದಿಗಳನ್ನು ಅವರು ಮಾಡುವ ಕೆಲಸದಿಂದ ಬದಲಾವಣೆ ಮಾಡಬೇಕು ಎಂದು ಪಿಡಿಒ ಅವರಿಗೆ ಆಗ್ರಹಿಸಿದರು. ಹೆಚ್ಚಿನ ಸದಸ್ಯರು ಇದಕ್ಕೆ ಧ್ವನಿಗೂಡಿಸಿ, ಒಮ್ಮತ ವ್ಯಕ್ತಪಡಿಸಿದರು. ಆಗ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಮಾತನಾಡಿ, ಈಗ 9/11 ಮಾಡುತ್ತಿರುವ ಕೇಸ್ ವರ್ಕರ್‌ಗೆ ಅದರ ಬಗ್ಗೆ ಎಲ್ಲಾ ಕೆಲಸಗಳು ಗೊತ್ತು. ಅದನ್ನು ಇನ್ನೊಬ್ಬ ಸಿಬ್ಬಂದಿಗೆ ನೀಡಿದರೆ ಸಮಸ್ಯೆಯಾಗುತ್ತದೆ ಎಂದರು. ಆದರೆ ಪಟ್ಟು ಬಿಡದ ಅಬ್ದುರ್ರಹ್ಮಾನ್ ಕೆ. ಅವರು 9/11 ಹೇಗೆ ಮಾಡುವುದು ಎಂದು ಇತರ ಸಿಬ್ಬಂದಿಗೂ ಹೇಳಿ ಕೊಡಿ. ಅವರೂ ಕೆಲಸ ಕಲಿಯುತ್ತಾರೆ. ಇಲ್ಲಿ ಹಿರಿಯ ಸಿಬ್ಬಂದಿಯೂ ಇದ್ದಾರೆ ಎಂದರು. ಆಗ ಪಿಡಿಒ ಅವರು ಹೀಗೆ ಮಾಡಿದರೆ ಅದರಲ್ಲಿ ಹಲವು ತಪ್ಪುಗಳಾಗುತ್ತದೆ. ಜನರಿಗೆ ಸಮಸ್ಯೆಗಳಾಗುತ್ತದೆ. 9/11 ಜನರಿಗೆ ಸಿಗುವಾಗ ತಡವಾಗುತ್ತದೆ ಹೀಗೆಲ್ಲಾ ಹಲವು ಕಾರಣಗಳನ್ನು ಸಭೆಯ ಮುಂದಿಟ್ಟರು. ಆದರೆ ಅದನ್ನು ಒಪ್ಪಿಕೊಳ್ಳದ ಅಬ್ದುರ್ರಹ್ಮಾನ್ ಕೆ., 9/11 ಅನ್ನು ಅರ್ಜಿ ಕೊಟ್ಟ ಇಷ್ಟು ದಿನದಲ್ಲಿ ಮಾಡಿ ಕೊಡಬೇಕೆಂದು ಇದೇ. ಅದು ಅಂತಿಮ ಗಡು ಮಾತ್ರ. ಆ ಗಡುವಿನ ತನಕ ಕಾಯಬೇಡಿ. ಅರ್ಜಿ ಕೊಟ್ಟ ದಿನದಿಂದ ಸಮಯವಿದ್ದಾಗ 9/11ನ ಕೆಲಸ ಮಾಡಿ ಅರ್ಜಿದಾರರಿಗೆ ಅಂತಿಮ ದಿನದ ಮೊದಲೇ ಕೊಡಿ. ಸಿಬ್ಬಂದಿ ಬದಲಾವಣೆಯಿಂದ ತಪ್ಪುಗಳು ಬಂದರೆ ಅದನ್ನು ಸರಿಪಡಿಸಿ ಅವರಿಗೆ ಸರಿಯಾಗಿ ಹೇಗೆ ಮಾಡಿಕೊಡಬೇಕೆಂದು ಹೇಳಿಕೊಡಿ. ಯಾವುದೇ ಕಾರಣಕ್ಕೂ ಒಬ್ಬ ಸಿಬ್ಬಂದಿಯನ್ನೇ ಇದಕ್ಕೆ ಅವಲಂಬಿಸಬೇಡಿ ಎಂದು ತಿಳಿಸಿದರು. ಆಗ ಪಿಡಿಒ ಅವರು ಇದರಿಂದಾಗಿ ಜನರಿಗೆ ಸಮಸ್ಯೆಯಾದರೆ ನನ್ನನ್ನು ದೂರಬೇಡಿ ಎಂದರು. ಆಗ ಅಬ್ದುರ್ರಹ್ಮಾನ್ ಕೆ. ಅವರು ಇನ್ನಿತರ ಸಿಬ್ಬಂದಿ 9/11 ಮಾಡುವುದನ್ನು ಕಲಿತರೆ ಸಮಸ್ಯೆ ಹೇಗೆ ಆಗುವುದು? ಬಾಕಿಯವರು ಈ ಕೆಲಸ ಕಲಿಯದಿದ್ದಲ್ಲಿ, ಈಗ 9/11 ಮಾಡುತ್ತಿರುವ ಸಿಬ್ಬಂದಿ ರಜೆ ಹಾಕಿ ಹೋದಾಗ ಸಮಸ್ಯೆ ಬರುವುದಿಲ್ಲವೇ? ಯಾವುದೇ ಕಾರಣಗಳು ಬೇಡ. ಗ್ರಾ.ಪಂ.ನಲ್ಲಿ 9/11 ಕೆಲಸಕ್ಕೆ ಒಬ್ಬ ಸಿಬ್ಬಂದಿಯನ್ನೇ ಅವಲಂಬಿಸುವುದು ಬೇಡ. ಇತರರಿಗೂ 9/11 ಕೆಲಸ ಕಲಿಯಲು ಅವಕಾಶ ಮಾಡಿಕೊಡಿ. ಇದರೊಂದಿಗೆ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಅವರು ಈಗ ಮಾಡುತ್ತಿರುವ ಕೆಲಸದಿಂದ ಅವರನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕೆಲಸ ನೀಡಿ. ಈ ಬಗ್ಗೆ ನಿರ್ಣಯ ದಾಖಲಿಸಿಕೊಳ್ಳಿ ಎಂದು ಖಡಾಖಂಡಿತವಾಗಿ ತಿಳಿಸಿದರು.


ಲಂಚ ಪಡೆದ ಅನುಮಾನಕ್ಕೆ ಕಾರಣವಾಗುತ್ತದೆ: ಗಾಂಧಿಪಾರ್ಕ್‌ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಪಾರ್ಕಿಂಗ್ ಉದ್ದೇಶಕ್ಕೆ ಮೀಸಲಿರಿಸಿದ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡವನ್ನು ಕಟ್ಟುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಕಳೆದ ಬಾರಿ ಮಾಡಿದ ನಿರ್ಣಯದ ಕುರಿತು ಚರ್ಚೆಯಾದಾಗ, ಪಿಡಿಒ ಅವರು ಆ ಕಟ್ಟಡದ ಹಿಂಬದಿ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದರು. ಆಗ ಸದಸ್ಯ ಮುಹಮ್ಮದ್ ತೌಸೀಫ್ ಮಾತನಾಡಿ, ಆ ಕಟ್ಟಡದ ಎದುರು ಭಾಗ ರಸ್ತೆ ಮಾರ್ಜಿನ್‌ನಲ್ಲೇ ಇದೆ ಎಂದರು. ಆಗ ಉಷಾ ಮುಳಿಯ ಮಾತನಾಡಿ, ಅಂಚೆ ಕಚೇರಿಯ ಬಳಿ ಖಾಸಗಿಯವರು ಹೊಸ ಕಟ್ಟಡ ಕಟ್ಟಲು ಮುಂದಾಗುತ್ತಿದ್ದು, ಅದು ಕೂಡಾ ರಸ್ತೆ ಮಾರ್ಜಿನ್‌ಗೆ ಬರುವ ಸಾಧ್ಯತೆ ಇದೆ ಎಂದರು. ಈ ಬಗ್ಗೆ ಚರ್ಚೆಗಳಾದಾಗ ಗಾಂಧಿಪಾರ್ಕ್‌ನ ಕಟ್ಟಡಕ್ಕೆ ಪರವಾನಿಗೆ ಕೊಡುವುದಾದರೆ, ಅಂಚೆ ಕಚೇರಿಯ ಕಟ್ಟಡಕ್ಕೂ ನೀಡಬೇಕಾಗುತ್ತದೆ ಎಂದರು. ಆಗ ಸುರೇಶ್ ಅತ್ರೆಮಜಲು ಮಾತನಾಡಿ, ಒಬ್ಬೊಬ್ಬರು ಒಬ್ಬೊಬ್ಬರ ಮೇಲೆ ಹೊಂದಾಣಿಕೆಯಲ್ಲಿ ಹೋದಾಗ ಸಮಸ್ಯೆಗೆ ಕಾರಣವಾಗುತ್ತದೆ. ರಸ್ತೆ ಮಾರ್ಜಿನ್‌ನೊಳಗೆ ಹೊಸ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ಕೊಡಬೇಡಿ. ಅಂತಹ ಕಟ್ಟಡಗಳಿಗೆ ಅವಕಾಶ ಕೊಡುವುದರಿಂದ ಜನರಿಗೆ ಸ್ಥಳೀಯ ವಾರ್ಡ್‌ನ ಸದಸ್ಯರು ಲಂಚ ಪಡೆದು ಈ ಕೆಲಸ ಮಾಡಿದ್ದಾರೆಂಬ ಅನುಮಾನಕ್ಕೆ ಕಾರಣವಾಗುತ್ತದೆ. ಒಟ್ಟಾರೆ ನಮ್ಮ ಪಂಚಾಯತ್ ಅನ್ನೋದು ಕಾಮಿಡಿ ಫೀಸ್ ಆಗಿದೆ. ಹಾಗೆ ಆಗಲು ಬಿಡಬೇಡಿ ಎಂದರು. ಆಗ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ಕಟ್ಟಡದ ಪರವಾನಿಗೆ ಕೊಡುವಾಗ ಆ ಜಾಗದ ಪರಿಶೀಲನೆ ನಡೆಸಿ, ರಸ್ತೆ ಮಾರ್ಜಿನ್ ಎಲ್ಲಿಯವರೆಗೆ ಅನ್ನುವ ಗುರುತನ್ನು ಗ್ರಾ.ಪಂ. ಮಾಡಿಕೊಡಬೇಕು. ಕಟ್ಟಡ ಕಟ್ಟಿದ ಮೇಲೆ ಹೋಗಿ ಇದು ರಸ್ತೆ ಮಾರ್ಜಿನ್‌ನಲ್ಲಿ ಬರುತ್ತದೆ ಎನ್ನುವುದಲ್ಲ ಎಂದರು. ಮುಹಮ್ಮದ್ ತೌಸೀಫ್ ಕೂಡಾ ಇದಕ್ಕೆ ಧ್ವನಿಗೂಡಿಸಿದರು.


ಅಧ್ಯಕ್ಷರ ಸಹಿಗೂ ಅವಕಾಶ ಕೊಡಿ:
ನಮ್ಮ ಗ್ರಾ.ಪಂ.ನಲ್ಲಿ ಯಾವುದೇ ಕಟ್ಟಡಕ್ಕೆ ಪರವಾನಿಗೆ ನೀಡುವಾಗ ಹಾಗೂ 9/11ಗೆ ಪಿಡಿಒ ಮಾತ್ರ ಸಹಿ ಮಾಡುತ್ತಾರೆ. ಆದರೆ ಇನ್ನು ಮುಂದೆ ಕಟ್ಟಡ ಪರವಾನಿಗೆ ಹಾಗೂ 9/11 ನೀಡುವಾಗ ಅಧ್ಯಕ್ಷರು ಮತ್ತು ಪಿಡಿಒ ಅವರ ಜಂಟಿ ಸಹಿ ಇರಬೇಕು. ಇದಕ್ಕಾಗಿ ಅಧ್ಯಕ್ಷರನ್ನು ಎರಡು ದಿನಕ್ಕೊಮ್ಮೆ ಗ್ರಾ.ಪಂ.ಗೆ ಬರುವಂತೆ ಮಾಡುವ ಎಂದು ಅಬ್ದುರ್ರಹ್ಮಾನ್ ಕೆ. ತಿಳಿಸಿದರು. ಆಗ 9/11ಗೆ ಅಧ್ಯಕ್ಷರ ಸಹಿ ಬೇಡ. ಅವರು ಬಾರದಿದ್ದಲ್ಲಿ ಜನರಿಗೆ ಸಮಸ್ಯೆಯಾಗುತ್ತದೆ ಎಂದು ಪಿಡಿಒ ಉತ್ತರಿಸಿದರು. ಅದಕ್ಕೆ ಪ್ರತ್ಯುತ್ತರ ನೀಡಿದ ಅಬ್ದುರ್ರಹ್ಮಾನ್ ಕೆ. ಅವರು, ಇಲ್ಲಿ 9/11ಗೆ ಅರ್ಜಿ ಕೊಟ್ಟಾಗಲೇ ಅವರಿಗೆ ನೀವು 9/11 ಕೊಡುತ್ತೀರೋ? ಅದನ್ನು ಮಾಡಲು ಎರಡ್ಮೂರು ದಿನದ ಕೆಲಸವಾದರೂ ಹಿಡಿಯುತ್ತದೆಯಲ್ಲವೇ? ಅಧ್ಯಕ್ಷರು ಇನ್ನು ಮುಂದೆ ಎರಡು ದಿನಕ್ಕೊಮ್ಮೆ ಗ್ರಾ.ಪಂ.ಗೆ ಬರುತ್ತಾರೆ. ಹಾಗೆ ಇದ್ದಾಗ ಮತ್ತೇನು ತೊಂದರೆ? ಇನ್ನು ಮುಂದೆ ಕಟ್ಟಡ ಪರವಾನಿಗೆ ಹಾಗೂ 9/11ಗೆ ಅಧ್ಯಕ್ಷರ ಹಾಗೂ ಪಿಡಿಒ ಅವರ ಜಂಟಿ ಸಹಿ ಇರಲೇ ಬೇಕು. ಈ ಬಗ್ಗೆ ನಿರ್ಣಯ ದಾಖಲಿಸಿ ಎಂದರು. ಸದಸ್ಯ ಅಬ್ದುರ್ರಶೀದ್ ಕೂಡಾ ಇದನ್ನು ಬೆಂಬಲಿಸಿ ಮಾತನಾಡಿದರು.


ಇಂಗು ಗುಂಡಿಯಿಲ್ಲದೆ ಪೇಟೆಯ ಹೊಟೇಲ್, ವಸತಿ ಸಂಕೀರ್ಣದ ಮಲೀನ ನೀರು ನದಿ ಸೇರುವುದರ ಕುರಿತಾಗಿ ಚರ್ಚೆಯಾಗಿ, ಕಳೆದ ಅವಧಿಯಲ್ಲಿ ಪೇಟೆಯ ನೀರೆಲ್ಲಾ ಒಂದೇ ಕಡೆ ಬಂದು ಅದನ್ನು ಶುದ್ಧೀಕರಿಸುವ 5 ಕೋಟಿಯ ಯೋಜನೆಯೊಂದನ್ನು ಮಾಡಿಕೊಂಡು ಆಗ ಸಚಿವರಾಗಿದ್ದ ಈಶ್ವರಪ್ಪನವರ ಬಳಿಗೆ ಹೋಗಲಾಗಿತ್ತು. ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ ಅವರ ರಾಜೀನಾಮೆಯಿಂದ ಆ ಯೋಜನೆ ಮುಂದಕ್ಕೆ ಹೋಗಲಿಲ್ಲ. ಆದ್ದರಿಂದ ಈಗ ಅದೇ ಯೋಜನೆಯೊಂದಿಗೆ ಪಂಚಾಯತ್‌ನ ನಿಯೋಗವೊಂದು ಪುತ್ತೂರು ಶಾಸಕರ ಬಳಿ ತೆರಳಿ ಈ ಬಗ್ಗೆ ವಿವರಿಸೋಣ. ಅವರು ಸಚಿವರನ್ನು ಭೇಟಿ ಮಾಡಿಸಿ, ಅನುದಾನ ದೊರಕಿಸಿಕೊಡಲು ಮನವಿ ಮಾಡೋಣ ಎಂದು ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಶ್ರೀಮತಿ ಉಷಾ, ಲೊಕೇಶ್ ಬೆತ್ತೋಡಿ, ಶ್ರೀಮತಿ ಶೋಭಾ, ಧನಂಜಯ ಕುಮಾರ್, ಯು.ಕೆ. ಇಬ್ರಾಹೀಂ, ಮೈಸಿದ್ ಇಬ್ರಾಹೀಂ, ವನಿತಾ, ಶ್ರೀಮತಿ ಜಯಂತಿ, ಶ್ರೀಮತಿ ಸೌಧ, ಶ್ರೀಮತಿ ನೆಬಿಸಾ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿದರು. ಕಾರ್ಯದರ್ಶಿ ಗೀತಾ ಶೇಖರ್ ವಂದಿಸಿದರು. ಜ್ಯೋತಿ ಸಹಕರಿಸಿದರು.

LEAVE A REPLY

Please enter your comment!
Please enter your name here