ಪ್ರಸಿದ್ಧ ಕಾರಣಿಕ ಕ್ಷೇತ್ರ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಇಂದು ರಾತ್ರಿ ನೇಮೋತ್ಸವ

0

ಪುತ್ತೂರು: ಪುತ್ತೂರಿನ 2ನೇ ಜಾತ್ರೆಯಾಗಿ ಮೂಡಿ ಬರುತ್ತಿರುವ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಜ.24ರಂದು ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ಜರುಗಲಿದೆ.
ಬೆಳಿಗ್ಗೆ ಗಂಟೆ 9ಕ್ಕೆ ಕಾರ್ಜಾಲು ಗುತ್ತಿನಲ್ಲಿ ಸ್ಥಳಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ, ಬಳಿಕ ಗಂಟೆ 11.30ಕ್ಕೆ ಶ್ರೀ ದೈವಸ್ಥಾನದಲ್ಲಿ ಗಣಹೋಮ ಮತ್ತು ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ ನಡೆಯಲಿದೆ.ಮಧ್ಯಾಹ್ನ ಗಂಟೆ 12.30ರಿಂದ ಕಲ್ಲೇಗ ದೈವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಗಂಟೆ 7.30ಕ್ಕೆ ಶ್ರೀ ದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಡಲಿದೆ. ರಾತ್ರಿ ಗಂಟೆ 9.30ಕ್ಕೆ ದೈವಸ್ಥಾನದಲ್ಲಿ ಗೋಂದೊಲು ಪೂಜೆ, ರಾತ್ರಿ ಗಂಟೆ 12ಕ್ಕೆ ಸರಿಯಾಗಿ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದೆ.

ಹೊರೆಕಾಣಿಕೆ ಸಮರ್ಪಣೆ: ಪ್ರತಿ ವರ್ಷದಂತೆ ನೇಮೋತ್ಸವದ ಒಂದು ದಿನದ ಮೊದಲು ಸಂಜೆ ಹೊರೆಕಾಣಿಕೆ ಸಮರ್ಪಣೆ ನಡೆಯುತ್ತಿದ್ದು,ಈ ಬಾರಿಯೂ ಪೋಳ್ಯದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಪೋಳ್ಯ ಬೈಲು, ಕಲ್ಲೇಗ ಬೈಲು, ಶೇವಿರೆ ಬೈಲು, ಪಲ್ಲತ್ತಾರು ಬೈಲು ಸಹಿತ ಗ್ರಾಮದವರು ಸಂಜೆ ವಾಹನಗಳಲ್ಲಿ ಹೊರೆಕಾಣಿಕೆ ತಂದು ದೈವಸ್ಥಾನದ ನಡೆ ಮುಂದೆ ಸಮರ್ಪಣೆ ಮಾಡಿದರು. ಈ ಸಂದರ್ಭ ದೈವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್, ನಗರಸಭಾ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಕಬಕ ಗ್ರಾ.ಪಂ ಸದಸ್ಯ ವಿನಯ ಕಲ್ಲೇಗ, ಜಿನ್ನಪ್ಪ ಪೂಜಾರಿ, ಬಾಬು ಗೌಡ ಕಲ್ಲೇಗ ಸಹಿತ ಹಲವಾರು ಮಂದಿ ಜೊತೆಗಿದ್ದರು.

ಬಣ್ಣದ ಹೂವುಗಳಿಂದ ಅಲಂಕೃತಗೊಂಡ ದೈವಸ್ಥಾನ: ದೈವಸ್ಥಾನದ ಒಳಾಂಗಣ ಪ್ರಾಕಾರದಲ್ಲಿ ವಿದ್ಯುತ್ ದೀಪಗಳ ಬದಲು ಬಣ್ಣದ ಹೂವುಗಳನ್ನು ಜೋಡಿಸಿ ಅಲಂಕೃತಗೊಳಿಸಲಾಗಿದೆ. ಹೂವುಗಳ ಜೋಡಣೆಯಲ್ಲೇ ದ್ವಾರ ನಿರ್ಮಾಣ ಮತ್ತು ದ್ವಾರದಲ್ಲಿ ಹೂವುಗಳನ್ನು ಪೋಣಿಸಿ ದೈವಸ್ಥಾನದ ನಾಮಫಲಕ ಮಾಡಿರುವುದು ವಿಶೇಷ. ಗುಡಿಗಳನ್ನು ಪೂರ್ಣವಾಗಿ ಹೂವಿನಿಂದ ಅಲಂಕೃತಗೊಳಿಸಲಾಗಿದೆ.

ಬಣ್ಣದ ದೀಪಗಳಿಂದ ಅಲಂಕೃತಗೊಂಡ ಕಲ್ಲೇಗ: ಕಲ್ಲೇಗ ದೈವಸ್ಥಾನದ ಮುಂದೆ ದ್ವಾರದ ಉದ್ದಕ್ಕೂ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕಂಗೊಳಿಸುತ್ತಿವೆ. ಇದರ ಜೊತೆಗೆ ಭಂಡಾರದ ಮನೆಯಿಂದ ಕಲ್ಲೇಗದ ತನಕ ರಸ್ತೆಯುದ್ದಕ್ಕೂ ಬಾನೆತ್ತರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಜೊತೆಗೆ ಕೇಸರಿ ಬಂಟಿಂಗ್ಸ್ ಈ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ವರ್ಷಂಪ್ರತಿ ರಸ್ತೆಯ ಬದಿಯಲ್ಲಿ ವಿದ್ಯುತ್ ದೀಪ ಅಳವಡಿಸಲಾಗುತ್ತಿತ್ತು. ಈ ಬಾರಿ ರಸ್ತೆಗೆ ಅಡ್ಡಲಾಗಿ ಎತ್ತರದಲ್ಲೇ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಬಣ್ಣದ ಹೂವುಗಳಿಂದ ಅಲಂಕೃತಗೊಂಡ ದೈವಸ್ಥಾನ, ಹೂವಿನಲ್ಲೇ ನಾಮಫಲಕ ವಿಶೇಷ ಜಗಮಗಿಸಿದ ಬಣ್ಣದ ದೀಪಗಳಿಂದ ಅಲಂಕೃತಗೊಂಡ ಕಲ್ಲೇಗ ಭಂಡಾರದ ಮನೆಯಿಂದ ಕಲ್ಲೇಗದ ತನಕ ದಾರಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ

ಭಂಡಾರದ ಸಮಯ ವಾಹನ ಸಂಚಾರ ಮಾರ್ಗ ಬದಲಾವಣೆ
ರಾತ್ರಿ ವೇಳೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಟು ಕಲ್ಲೇಗ ದೈವಸ್ಥಾನ ತಲುಪುವ ಅಂದಾಜು ಸಮಯ 7.45ರಿಂದ 9.15 ಗಂಟೆ ವರೆಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಇದ್ದು ವಾಹನ ಚಾಲಕರು ಕೆಲವು ಸೂಚನೆಗಳನ್ನು ಪಾಲಿಸುವಂತೆ ದೈವಸ್ಥಾನ ಮತ್ತು ಸಂಚಾರ ಪೊಲೀಸ್ ಠಾಣೆಯಿಂದ ಮನವಿ ಮಾಡಲಾಗಿದೆ.

  • ಪುತ್ತೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಮಂಜಲ್ಪಡ್ಪು ಕೋಡಿಪ್ಪಾಡಿ ಕಬಕ ಮೂಲಕ ಮಂಗಳೂರಿಗೆ ತೆರಳುವುದು.
  • ಮಂಗಳೂರಿನಿಂದ ಪುತ್ತೂರು, ಮೈಸೂರು ಕಡೆಗೆ ತೆರಳುವ ವಾಹನಗಳು ಮುರದಿಂದ ರೈಲ್ವೆ ಬ್ರಿಡ್ಜ್ ಮೂಲಕ ಬನ್ನೂರು ಪಡೀಲ್ ಮೂಲಕ ಪುತ್ತೂರಿಗೆ ತೆರಳಬೇಕು.
  • ಕಲ್ಲೇಗ ಜಾತ್ರೆಗೆ ಬರುವ ಭಕ್ತಾದಿಗಳು ವಿವೇಕಾನಂದ ಕಾಲೇಜ್ ಮತ್ತು ಸುದಾನ ವಿದ್ಯಾ ಸಂಸ್ಥೆಯ ಬಳಿ ಹಾಗೂ ಪಾರ್ಕಿಂಗ್ ಯೋಗ್ಯ ಸ್ಥಳದಲ್ಲಿ ಪಾರ್ಕ್ ಮಾಡತಕ್ಕದ್ದು, ರಸ್ತೆಯಲ್ಲಿ ನಿಲ್ಲಿಸಿ ಸಾರ್ವಜನಿಕರ ರಸ್ತೆ ಸಂಚಾರಕ್ಕೆ ತೊಡಕು ಉಂಟು ಮಾಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here