ಕಡಬದಲ್ಲಿ ಸರಕಾರಿ ಕಛೇರಿಗಳ ಆರಂಭಕ್ಕೆ ಶೀಘ್ರ ಕ್ರಮ-ಸುಳ್ಯದಲ್ಲಿ ಜಿಲ್ಲಾ ಜನತಾ ದರ್ಶನದಲ್ಲಿ ಸಚಿವ ದಿನೇಶ್ ಗುಂಡೂರಾವ್ ಭರವಸೆ

0

*ಬಾಕಿ ಇರುವ 16 ಸರಕಾರಿ ಕಚೇರಿಗಳ ಆರಂಭಕ್ಕೆ ಸೈಯದ್ ಮೀರಾ ಸಾಹೇಬ್ ಅಹವಾಲು ಸಲ್ಲಿಕೆ
*ಅರಣ್ಯ, ಅಕ್ರಮ ಸಕ್ರಮ, ಪ್ಲಾಟಿಂಗ್ ಸಮಸ್ಯೆ ಇತ್ಯರ್ಥಕ್ಕೆ ಪಿ.ಪಿ.ವರ್ಗೀಸ್ ಮನವಿ

ಕಡಬ: ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿಗೆ ಸಂಬಂಧಿಸಿ ಬಾಕಿ ಇರುವ 16 ಸರಕಾರಿ ಕಛೇರಿಗಳನ್ನು ಕೂಡಲೇ ಆರಂಭಿಸಲು ಕ್ರಮಕೈಗೊಳ್ಳುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸುಳ್ಯದಲ್ಲಿ ನಡೆದ ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು.


ಸುಳ್ಯದ ಕೆವಿಜಿ ಪುರಭವನದಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಯಿತು. ಕಡಬದ ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಈ ಬಗ್ಗೆ ಮನವಿ ಸಲ್ಲಿಸಿದರು. ಈಗಾಗಲೇ ಕಡಬ ತಾಲೂಕು ಉದ್ಘಾಟನೆಗೊಂಡಿದ್ದರೂ ತಾಲೂಕು ಮಟ್ಟದ ಹಲವು ಸರಕಾರಿ ಕಛೇರಿಗಳು ಇನ್ನೂ ಆರಂಭಗೊಂಡಿಲ್ಲ. ಕೂಡಲೇ ತಾಲೂಕು ಮಟ್ಟದ ಕಛೇರಿ ಆರಂಭಿಸಿ ಕಾರ್ಯಚಟುವಟಿಕೆ ಆರಂಭವಾಗಲು ಕ್ರಮಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು. ತಾಲೂಕು ಮಟ್ಟದ ಕಛೇರಿಗಳ ಆರಂಭಕ್ಕೆ ಬಜೆಟ್ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಿ ಶೀಘ್ರ ಕಛೇರಿ ಆರಂಭಿಸಲು ಕ್ರಮಕೈಗೊಳ್ಳುವ ಕುರಿತು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಪಿ.ಪಿ.ವರ್ಗೀಸ್‌ರಿಂದ ಸಚಿವರಿಗೆ ಮೂರು ಬೇಡಿಕೆ ಸಲ್ಲಿಕೆ:
ಜಿ.ಪಂ.ಮಾಜಿ ಸದಸ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯರೂ ಆಗಿರುವ ಪಿ.ಪಿ.ವರ್ಗೀಸ್ ಅವರು ಜಿಲ್ಲಾ ಜನತಾ ದರ್ಶನದಲ್ಲಿ ಮೂರು ಬೇಡಿಕೆಗಳನ್ನು ಸಲ್ಲಿಸಿದರು. ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದ ಅರ್ಜಿ ವಿಲೇವಾರಿಗೆ ಇರುವ ಕಾನೂನು ತೊಡಕನ್ನು ನಿವಾರಣೆ ಮಾಡಬೇಕು, ಯಾಕೆಂದರೆ ಪಟ್ಟಣ ಪಂಚಾಯತ್ ಆಗುವ ಮೊದಲೇ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದುದರಿಂದ ಒನ್ ಟೈಮ್ ವಿಲೇವಾರಿ ಅವಕಾಶ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು. ಭೂಮಿಯ ಪ್ಲಾಟಿಂಗ್‌ನಲ್ಲಿ ಸಮಸ್ಯೆ ಇದ್ದು 1/5 ಕಾನೂನನ್ನು ತೆಗೆಯಬೇಕು, ತಹಸೀಲ್ದಾರ್ ಮಟ್ಟದಲ್ಲಿ ಪ್ಲಾಟಿಂಗ್ ಆಗುವಂತೆ ಅವಕಾಶ ನೀಡಬೇಕು ಎಂದೂ ಮನವಿ ಸಲ್ಲಿಸಲಾಯಿತು. ಈಗಾಗಲೇ ಅಕ್ರಮ ಸಕ್ರಮ ಕಡತವನ್ನು ತಂತ್ರಾಂಶದ ಮೂಲಕ ಮಾಡುವ ಕಾನೂನು ಬಂದಿದ್ದು ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆಯಿಂದ ತೊಂದರೆ ಉಂಟಾಗುತ್ತದೆ, ಆದುದರಿಂದ ಹಿಂದೆ ಇದ್ದಂತೆ ಅಳತೆ ಮಾಡಿ ಕಡತ ತಯಾರಿಸಲು ಅವಕಾಶ ಕಲ್ಪಿಸುವಂತೆ ಪಿ.ಪಿ.ವರ್ಗೀಸ್ ಅವರು ಮನವಿ ಸಲ್ಲಿಸಿದರು.

ಮುಂದಿನ ತಿಂಗಳು ಕಡಬದಲ್ಲಿ ಜನತಾದರ್ಶನ ಮಾಡಿ:
ಮುಂದಿನ ತಿಂಗಳು ಕಡಬದಲ್ಲಿ ಜನತಾ ದರ್ಶನ ಕಾರ್ಯಕ್ರಮ ಮಾಡುವಂತೆ ಈ ಭಾಗದ ಪ್ರಮುಖರು ಸಚಿವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಒಪ್ಪಿದ ಸಚಿವರು ಮುಂದಿನ ತಿಂಗಳು ಕಡಬದಲ್ಲಿ ಜನತಾದರ್ಶನ ಕಾರ್ಯಕ್ರಮ ಮಾಡುವ ಬಗ್ಗೆ ಭರವಸೆ ನೀಡಿದರು.

ಕೃಷಿಕರಿಗೆ ಪರಿಹಾರ ನೀಡಿ:
ಅಡಿಕೆಗೆ ಹಳದಿ ಎಲೆ, ಅಡಿಕೆ ಎಲೆಚುಕ್ಕಿ ರೋಗದಿಂದ ಈ ಭಾಗದ ಸಾಕಷ್ಟು ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ನೊಂದು ರೈತರ ಆತ್ಮಹತ್ಯೆಯೂ ನಡೆದಿದೆ. ಆತ್ಮಹತ್ಯೆಗೈದ ಕೃಷಿಕರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ಮಂಜೂರಾತಿ ಮಾಡುವಂತೆ, ಮೆಸ್ಕಾಂ ಹೊರ ಗುತ್ತಿಗೆ ಸಿಬ್ಬಂದಿಗಳನ್ನು ಒಳಗುತ್ತಿಗೆ ಅಡಿಯಲ್ಲಿ ನೇಮಿಸುವಂತೆ, ಚುನಾವಣೆ ಸಂದರ್ಭ ಕೋವಿ ಡೆಪಾಸಿಟ್‌ಗೆ ಹಣ ಪಾವತಿಗೆ ಆದೇಶ ಆಗಿಲ್ಲದಿದ್ದರೂ ಹಣ ಪಡೆಯುತ್ತಿರುವ ವಿಚಾರ ಪ್ರಸ್ತಾಪವಾಗಿ, ಕೋವಿ ಡೆಪಾಸಿಟ್‌ಗೆ ಹಣ ಪಡೆಯದಂತೆ ಆದೇಶ ಮಾಡುವಂತೆ ಸಚಿವರಿಗೆ ಮನವಿ ಮಾಡಲಾಯಿತು. ಈ ಕುರಿತು ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಅರಣ್ಯ ಸಮಸ್ಯೆ ಬಗೆಹರಿಸುವಂತೆ, ಆನೆ ಹಾವಳಿಯಿಂದ ಕೃಷಿ ಹಾನಿಗೊಂಡಿರುವ ಕೃಷಿಕರಿಗೆ ಪರಿಹಾರ ನೀಡುವಂತೆ, ಕಡಬ-ಪಾಲೋಳಿ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡುವಂತೆಯೂ ಮನವಿ ಸಲ್ಲಿಸಲಾಯಿತು. ಕಡಬ,ಪುತ್ತೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಸಾರ್ವಜನಿಕರು ಭಾಗವಹಿಸಿದ್ದರು. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಶಾಸಕ ಡಾ.ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈಮುಗಿಲನ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಆನಂದ್, ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್, ಡಿಎಫ್ಒ ಅಂಥೋನಿ ಮರಿಯಪ್ಪ,‌ ಪುತ್ತೂರು ತಹಶೀಲ್ದಾರ್ ಶಿವಶಂಕರ್, ಸುಳ್ಯ ತಹಸಿಲ್ದಾರ್ ಜಿ.ಮಂಜುನಾಥ್, ಕಡಬ ತಹಸಿಲ್ದಾರ್ ಪ್ರಭಾಕರ ಖಜೂರೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಸ್ವಾಗತಿಸಿ, ಸುಳ್ಯ ನ.ಪಂ. ಮುಖ್ಯಾಧಿಕಾರಿ ಸುಧಾಕರ್ ವಂದಿಸಿದರು. ಕಡಬ ಭಾಗದಿಂದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಜಿ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ ನೆಲ್ಯಾಡಿ, ಕೆ.ಪಿ.ತೋಮಸ್, ಶಿರಾಡಿ ಗ್ರಾ.ಪಂ. ಅಧ್ಯಕ್ಷ ಕಾರ್ತಿಕೇಯನ್, ಮಾಜಿ ತಾ.ಪಂ. ಸದಸ್ಯ ಗಣೇಶ್ ಕೈಕುರೆ, ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ರಾಯ್ ಅಬ್ರಹಾಂ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.

406 ಅಹವಾಲು ಸಲ್ಲಿಕೆ-ಕಂದಾಯ ಇಲಾಖೆ ನಂಬರ್ 1
ಜಿಲ್ಲಾ ಜನತಾ ದರ್ಶನದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಒಟ್ಟು 406 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಕಂದಾಯ ಇಲಾಖೆಗೆ ಸಂಬಂಽಸಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಂದಾಯ ಇಲಾಖೆಗೆ ಸಂಬಂಧಿಸಿ 146 ಅರ್ಜಿಗಳು ಸಲ್ಲಿಕೆಯಾಗಿವೆ. ಉಳಿದಂತೆ, ನಗರಾಭಿವೃದ್ಧಿ-70, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್-26, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್-21, ಕೃಷಿ ಇಲಾಖೆ-3, ಶಿಕ್ಷಣ-8, ಸಮಾಜ ಕಲ್ಯಾಣ-7, ಇಂಧನ-10, ಆಹಾರ ಮತ್ತು ನಾಗರಿಕ ಪೂರೈಕೆ-10, ಅರಣ್ಯ, ಪರಿಸರ, ಜೀವಿಶಾಸ್ತ್ರ-4, ಆರೋಗ್ಯ ಮತ್ತು ಕುಟುಂಬಕಲ್ಯಾಣ-20, ಲೋಕೋಪಯೋಗಿ-21, ತೋಟಗಾರಿಕೆ-2, ಕೆಎಸ್‌ಆರ್‌ಟಿಸಿ-7, ಕೆಆರ್‌ಐಡಿಎಲ್-1, ಧಾರ್ಮಿಕ ದತ್ತಿ-5, ಐಟಿಡಿಪಿ-1, ಸಹಕಾರಿ-4, ಮಹಿಳಾ ಮತ್ತು ಮಕ್ಕಳ ಕಲ್ಯಾಣ-8, ಸರ್ವೆ-19, ಬಿಎಸ್‌ಎನ್‌ಎಲ್-1, ಗಣಿ-1, ಬಿಸಿಎಂ-1 ಅರ್ಜಿ ಸಲ್ಲಿಕೆಯಾಗಿದೆ. ಬೆಳಗ್ಗೆ 11.30ರ ಬಳಿಕ ಆರಂಭಗೊಂಡ ಅಹವಾಲು ಸ್ವೀಕಾರ ಮಧ್ಯಾಹ್ನ ಊಟದ ವಿರಾಮ ಹೊರತು ಪಡಿಸಿ 4.45ರ ವರೆಗೆ ನಿರಂತರವಾಗಿ ನಡೆಯಿತು. ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ವ್ಯವಸ್ಥೆ ಹಾಗೂ ಅಹವಾಲು ಸಲ್ಲಿಸುವವರಿಗೆ ಟೋಕನ್ ನೀಡಿ ಸರದಿಯಂತೆ ಸಚಿವರನ್ನು ಮುಖತಃ ಭೇಟಿಗೆ ಅವಕಾಶ ನೀಡಲಾಗಿತ್ತು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 406 ಅರ್ಜಿಗಳು ಸಲ್ಲಿಕೆಯಾಗಿವೆ.

LEAVE A REPLY

Please enter your comment!
Please enter your name here