ಪುಣಚ ಗ್ರಾಮದಲ್ಲಿ 75 ಲಕ್ಷ ರೂ ವಿವಿಧ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

0

ಪುಣಚ ಗ್ರಾಮದ ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸಲು ಸಾದ್ಯವೇ ಇಲ್ಲದಂತಿದೆ – ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಪುಣಚ ಗ್ರಾಮದಲ್ಲಿನ ಒಳ ರಸ್ತೆಗಳು ಕಾಂಕ್ರೀಟ್ ಮಾಡಿಲ್ಲ, ಕೆಲವೊಂದು ರಸ್ತೆಗಳಿಗೆ ಇದುವರೆಗೂ ಯಾವುದೇ ಅನುದಾನ ನೀಡಿಲ್ಲ, ಗ್ರಾಮದ ಅಭಿವೃದ್ದಿಗೆ ಜನಪ್ರತಿನಿಧಿಗಳ ಅನುದಾನ ಶೂನ್ಯವೆಂದೇ ಹೇಳಿದರೂ ತಪ್ಪಾಗಲಾರದು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.

ಅವರು ಪುಣಚ ಗ್ರಾಮದ ವಿವಿಧ ರಸ್ತೆಗಳಿಗೆ ಒಟ್ಟು 75 ಲಕ್ಷ ಅನುದಾನವನ್ನು ಬಿಡುಗಡೆಮಾಡಿದ್ದು ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ನಾವು ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಜನರ ಬೇಡಿಕೆ ಏನಿತ್ತೋ ಅಲ್ಲಿಗೆ ಅನುದಾನವನ್ನು ನೀಡುವ ಕೆಲಸವನ್ನು ಮಾಡಿದ್ದೇನೆ. ಅನುದಾನ ಹಂಚಿಕೆಯಲ್ಲಿ ನಾನೆಂದೂ ರಾಜಕೀಯ ಮಾಡಲಾರೆ ಎಂದು ಈ ಹಿಂದೆಯೇ ಹೇಳಿದ್ದೇನೆ. ಜನಪ್ರತಿನಿಧಿಗಳು ಪುಣಚ ಗ್ರಾಮವನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಹೇಳಿದರೂ ತಪ್ಪಾಗಲಾರದು ಎಂದು ಹೇಳಿದರು.

ಹಂತ ಹಂತವಾಗಿ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮಗಳಿಗೂ ಅನುದಾನವನ್ನು ನೀಡಲಿದ್ದೇನೆ. ಈಗಾಗಲೇ ಅರಿಯಡ್ಕ, ಪಾಣಾಜೆ, ನೆಟ್ಟಣಿಗೆ ಮುಡ್ನೂರು, ಕಬಕ, ಕೊಡಿಪ್ಪಾಡಿ, ಕೋಡಿಂಬಡಿ, ಹಿರೆಬಂಡಾಡಿ, ಉಪ್ಪಿನಂಗಡಿ, ಒಳಮೊಗ್ರು, ಆರ್ಯಾಪು, ನಿಡ್ಪಳ್ಳಿ, ಬೆಟ್ಟಂಪಾಡಿ, ಕೊಳ್ತಿಗೆ ಗ್ರಾಮ ಸೇರಿದಂತೆ ಹೆಚ್ಚಿನ ಎಲ್ಲಾ ಗ್ರಾಮಗಳಿಗೆ ಅನುದಾನವನ್ನು ನೀಡಲಾಗಿದೆ. ಜನರ ಬಹುಕಾಲದ ಬೇಡಿಕೆಯ ರಸ್ತೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

ಗುದ್ದಲಿಪೂಜೆ ಮಾಡಿರುವ ರಸ್ತೆಗಳು
ಅಜ್ಜಿನಡ್ಕ ಪಟ್ಟಿಕಲ್ಲು ರಸ್ತೆ, ನಾರ್ಣಡ್ಕ ನಡ್ಸಾರ್ ರಸ್ತೆ, ಮಲೆತ್ತಡ್ಕ ಪೊಯ್ಯಮೂಲೆ ರಸ್ತೆ , ಕೊಲ್ಲಪದವು ಅಮೈ ರಸ್ತೆಗೆ ಗುದ್ದಲಿಪೂಜೆ ನಡೆಸಲಾಗಿದ್ದು ಪುಣಚ ದೇವಸ್ಥಾನ ರಸ್ತೆ ಅಭಿವೃದ್ದಿಗೆ ರೂ. 50 ಲಕ್ಷವನ್ನು ಬಿಡುಗಡೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಬಾಕಿ ಇರುವ ಎಲ್ಲಾ ರಸ್ತೆಗಳಿಗೂ ಹಂತ ಹಂತವಾಗಿ ಅನುದಾನವನ್ನು ಒದಗಿಸುವುದಾಗಿ ಶಾಸಕರು ತಿಳಿಸಿದರು.

ಗ್ರಾಪಂ ಅಧ್ಯಕ್ಷರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು
ಶಾಸಕರ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಪುಣಚ ಗ್ರಾಪಂ ಅಧ್ಯಕ್ಷೆ ಬೇಬಿ ಭಾಗವಹಿಸಿದ್ದು, ಗ್ರಾಮದ ಎಲ್ಲಾ ಗುದ್ದಲಿಪೂಜೆಯಲ್ಲಿ ಭಾಗವಹಿಸುವ ಮೂಲಕ ಶಾಸಕರ ಮೆಚ್ಚುಗೆಗೆ ಪಾತ್ರರಾದರು. ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಾಸಕರು ಗ್ರಾಪಂ ಅಧ್ಯಕ್ಷೆ ಬಿಜೆಪಿ ಬೆಂಬಲಿತರಾದರೂ ಅಭಿವೃದ್ದಿ ವಿಚಾರದಲ್ಲಿ ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಅವರು ಅಧ್ಯಕ್ಷರಾಗಿರುವ ಗ್ರಾಮಗಳ ಗುದ್ದಲಿಪೂಜೆಯಲ್ಲಿ ಭಾಗವಹಿಸಿದ್ದು ಅವರನ್ನು ನಾನು ಅಭಿನಂದಿಸುವುದಾಗಿ ಶಾಸಕರು ತಿಳಿಸಿದರು.

ಪುಣಚ ಗ್ರಾಮ ಈ ಬಾರಿ ಅಭಿವೃದ್ದಿ: ಎಂ ಎಸ್
ಪುಣಚ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ದಿ ಕೆಲಸಗಳು ಆಗಲಿದೆ. ಹಲವಾರು ವರ್ಷಗಳಿಂದ ಅಭಿವೃದ್ದಿಯಾಗದ ಅನೇಕ ರಸ್ತೆಗಳಿಗೆ ಅನುದಾನ ನೀಡುವ ಮೂಲಕ ಶಾಸಕರು ಪುಣಚ ಗ್ರಾಮದಲ್ಲಿಯೂ ಅಭಿವೃದ್ದಿ ಪರ್ವ ಆರಂಭಿಸಿದ್ದಾರೆ ಇದಕ್ಕಾಗಿ ಶಾಸಕರನ್ನು ಅಭಿನಂದಿಸುವುದಾಗಿ ಹೇಳಿದರು. ಅಭಿವೃದ್ದಿ ಅಂದರೆ ಅದು ಕಾಂಗ್ರೆಸ್. ಕಾಂಗ್ರೆಸ್ ನಿಂದ ಮಾತ್ರ ಪಕ್ಷಾತೀತ ಅಭಿವೃದ್ದಿ ಸಾಧ್ಯವಾಗುತ್ತದೆ ಎಂಬುದನ್ನು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಭಿವೃದ್ದಿ ಪರ ಇರುವ ಕಾಂಗ್ರೆಸ್‌ಗೆ ಸಹಕಾರ ನೀಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಬಾಲಕೃಷ್ಣ ಪೂಜಾರಿ ಹಿತ್ತಿಲು, ವಲಯ ಕಾರ್ಯದರ್ಶಿ ಮಹಮ್ಮದ್ ಸಿರಾಜ್ ಮನಿಲ, ಗ್ರಾಪಂ ಅಧ್ಯಕ್ಷೆ ಬೇಬಿ, ಸದಸ್ಯರಾದ ಲಲಿತಾ, ಗಿರಿಜ, ರಾಜೇಂದ್ರ ರೈ ಬೈಲು, ಬಾಲಕೃಷ್ಣ ರೈ ಬೈಲು, ಎಂ ಎಸ್ ಹಮೀದ್, ನಾರಾಯಣ ನಾಯ್ಕ, ಅಲ್ಬರ್ಟ್ ಡಿಸೋಜಾ, ಕ್ಷೇವಿಯರ್ ಡಿಸೋಜಾ, ವೆಂಕಪ್ಪ ಗೌಡ ಅಜೇರು ಮಜಲು, ಸೀತಾರಾಮ ಪಟಿಕಲ್ಲು, ಮಹಾಲಿಂಗ ನಾಯ್ಕ, ಕರೀಂ ಕುದ್ದುಪದವು, ಮೌರಿಸ್‌ಟೆಲ್ಲಿಸ್, ಶರೀಫ್ ಕೊಲ್ಲಪದವು, ಶ್ರೀನಿವಾಸ ನಾರ್ಣಡ್ಕ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here