ವಿಟ್ಲ: ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸಿದ ಅಯೋಧ್ಯೆ ಶ್ರೀ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಲು ಆಮಂತ್ರಿತರಾಗಿದ್ದ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರ ಸಹಿತ ನಾಲ್ವರು ಸಂತರು ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗಿ ಬಂದಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಕ್ತರಿಂದ ಭವ್ಯ ಸ್ವಾಗತ ನಡೆಯಿತು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯ ಸಮಿತಿಯ ಕೋಶಾಧಿಕಾರಿ ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಅನುಭವ ವ್ಯಕ್ತಪಡಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಿದ ಸುಯೋಗ ಕ್ಷಣ ಮರೆಯುವುದಕ್ಕೆ ಸಾಧ್ಯವಿಲ್ಲ. ಕಿಂಚಿತ್ತೂ ಲೋಪವಿಲ್ಲದ ಅಚ್ಚುಕಟ್ಟಾದ ವ್ಯವಸ್ಥೆ ಆಶ್ಚರ್ಯವನ್ನುಂಟು ಮಾಡಿದೆ. ಭಾರತ ದೇಶದಲ್ಲಿ ಮುಂದೆಂದೂ ಅಚ್ಚಳಿಯದೇ ಇರುವ ದಿನವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಮಂಗಳೂರು ಓಂ ಶ್ರೀ ಮಠದ ಶ್ರೀ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಕೋಟ್ಯಂತರ ಭಕ್ತರು ಐನೂರು ವರ್ಷಗಳಿಂದ ಕಂಡಿದ್ದ ಕನಸ ಸಾಕಾರಗೊಂಡಿದೆ.
ಜಗತ್ತಿನೊಳಗಿರುವ ಹಿಂದೂಗಳ ಪಾಲಿಗೆ ಸ್ಮರಣೀಯ ದಿನ, ಕ್ಷಣವಾಗಿದೆ, ಹಿಂದೂಗಳು ಪಟ್ಟ ಕಷ್ಟ, ರಾಮ ಪ್ರತಿಷ್ಠೆ ಮೂಲಕ ಅಂತ್ಯಗೊಂಡಿದೆ ಎಂದರು.ಕಾರ್ಯದರ್ಶಿ ಉಡುಪಿ ಶಂಕರಪುರ ದ್ವಾರಕಾಮಯಿ ಮಠದ ಶ್ರೀ ಸಾಯೀಶ್ವರ ಗುರೂಜೀ, ಬಾಲರಾಮನ ಪ್ರತಿಷ್ಠೆ ತನ್ನ ಜನ್ಮಭೂಮಿಯಲ್ಲೇ ನಡೆದಿದೆ. ಭಾರತ ಮಾತ್ರವಲ್ಲ, ವಿಶ್ವೋದ್ಧಾರಕ್ಕಾಗಿ ಈ ಪ್ರತಿಷ್ಠಾ ಮಹೋತ್ಸವ ನಡೆದಿದೆ ಎಂದರು.ಅವರೊಂದಿಗೆ ಪ್ರತಿನಿಧಿಸಿದ್ದ ಅಖಿಲ ಉಪಾಧ್ಯಕ್ಷೆ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯದ ಸಹ ಅಧ್ಯಕ್ಷೆ, ಮಂಗಳೂರು ಓಂ ಶ್ರೀ ಮಠದ ಮಾತಾ ಶ್ರೀ ಓಂ ಶ್ರೀ ಶಿವ ಜ್ಞಾನ ಮಹಿ ಸರಸ್ವತಿ ಜೊತೆಗಿದ್ದರು.