ಪುತ್ತೂರು: ಒಳಮೊಗ್ರು ಗ್ರಾಮದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವವು ಬೊಳ್ಳಾಡಿ ರಾಜಮಾಡದಲ್ಲಿ ಜ.29 ರಿಂದ ಆರಂಭಗೊಂಡು ಫೆ.3ರವರೆಗೆ ನಡೆಯಲಿದೆ. ಜ.29ರಂದು ಬೆಳಿಗ್ಗೆ ಮುಗೇರು ಕದಿಕೆ ಚಾವಡಿ ಮತ್ತು ಕೈಕಾರ ಕಿನ್ನಿಮಾಣಿ ದೈವಸ್ಥಾನದಲ್ಲಿ ಗಣಪತಿ ಹೋಮ, ಶುದ್ಧ ಕಲಶ ಮತ್ತು ತಂಬಿಲ ಸೇವೆ, ಮುಗೇರು ಕದಿಕೆ ಚಾವಡಿಯಲ್ಲಿ ಕದಿಕೆ ತುಂಬಿಸುವುದು, ಸಂಜೆ 6.30ರಿಂದ ಕೈಕಾರ ಕಿನ್ನಿಮಾಣಿ ದೈವಸ್ಥಾನದಿಂದ ಕಿನ್ನಿಮಾಣಿ ಹಾಗೂ ಪರಿವಾರ ದೈವಗಳ ಕೀರ್ವಾಳು ಭಂಡಾರ ಇಳಿಸಿ ಹೊಸಮಾರು ಕಟ್ಟೆಗೆ ಬರುವುದು ನಡೆಯಲಿದೆ. ರಾತ್ರಿ 8 ಗಂಟೆಯಿಂದ ರಾಜಮಾಡದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. 8.30ರಿಂದ ಮುಗೇರು ಕದಿಕೆ ಚಾವಡಿಯಿಂದ ಶ್ರೀ ಪೂಮಾಣಿ ದೈವದ ಹಾಗೂ ಪಿಲಿಭೂತ ಮಲರಾಯ ದೈವಗಳ ಕೀರ್ವಾಳು ಭಂಡಾರ ಇಳಿಸಿ, ಹೊಸಮಾರುವಿನಿಂದ ಕಿನ್ನಿಮಾಣಿ ಹಾಗು ಪರಿವಾರ ದೈವಗಳ ಕೀರ್ವಾಳು ಭಂಡಾರದೊಂದಿಗೆ ಸೇರಿ ಬೊಳ್ಳಾಡಿ ರಾಜಮಾಡದಲ್ಲಿ ಏರಿಸುವುದು ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಜ.30ರಂದು ಬೆಳಿಗ್ಗೆ ಶ್ರೀ ಕಿನ್ನಿಮಾಣಿ ದೈವದ ನೇಮ, ಗಂಧಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಶ್ರೀ ಪೂಮಾಣಿ ದೈವದ ನೇಮ, ಗಂಧ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಸುಡುಮದ್ದು ಸೇವೆ ನಡೆಯಲಿದೆ. ಬಳಿಕ ಶ್ರೀ ಮಲರಾಯ ದೈವದ ನೇಮ, ಗಂಧ ಪ್ರಸಾದ ವಿತರಣೆ, ವರ್ಣರ ಪಂಜುರ್ಲಿ ದೈವದ ನೇಮ, ಗಂಧ ಪ್ರಸಾದ ವಿತರಣೆ ನಡೆಯಲಿದೆ. ಜ.31ರಂದು ಬೆಳಿಗ್ಗೆ ಶ್ರೀ ಪಿಲಿಭೂತ ದೈವದ ನೇಮ, ಗಂಧ ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಶ್ರೀ ಗುಳಿಗ ದೈವದ ನೇಮ, ಸಂಜೆ 4 ಕ್ಕೆ ಪೂಮಾಣಿ ಕಿನ್ನಿಮಾಣಿ ಹಾಗೂ ಪರಿವಾರ ದೈವಗಳ ಭಂಡಾರ ರಾಜಮಾಡದಿಂದ ಇಳಿಸಿ ಮುಗೇರು ಕದಿಕೆ ಚಾವಡಿ ಹಾಗೂ ಕೈಕಾರ ದೈವಸ್ಥಾನದಲ್ಲಿ ಏರಿಸುವುದು, ಪಿಲಿಭೂತ ದೈವ ಭಂಡಾರ ಪಿಲಿಭೂತ ಮಾಡದಲ್ಲಿ ತಂಬಿಲ ಸೇವೆ ಮಾಡಿ ಕದಿಕೆ ಚಾವಡಿಯಲ್ಲಿ ಏರಿಸುವುದು, ಮಲರಾಯ ದೈವಕ್ಕೆ ಗುತ್ತು ಆವರಣದಲ್ಲಿ ತಂಬಿಲ ಸೇವೆ ಮಾಡಿ ಕದಿಕೆ ಚಾವಡಿಯಲ್ಲಿ ಏರಿಸುವುವ ಕಾರ್ಯಕ್ರಮ ನಡೆಯಲಿದೆ.
ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಉರ್ವದಲ್ಲಿ ನಡೆಯಲಿದೆ. ಫೆ.1ರಂದು ಬೆಳಿಗ್ಗೆ ಉರ್ವದಲ್ಲಿ ಗಣಪತಿ ಹೋಮ, ಶುದ್ಧ ಕಲಶ, ತಂಬಿಲ ಸೇವೆ ನಡೆಯಲಿದೆ.ಸಂಜೆ 6 ಗಂಟೆಗೆ ಶ್ರೀ ದುರ್ಗಾಪೂಜೆ, ರಾತ್ರಿ 9ರಿಂದ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯುವುದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಪಂಜುರ್ಲಿ ದೈವದ ನೇಮ ನಡೆಯಲಿದೆ. ಫೆ.2ರಂದು ಬೆಳಿಗ್ಗೆ ಧೂಮಾವತಿ ದೈವದ ನೇಮ ಮಧ್ಯಾಹ್ನ ಗುಳಿಗ ದೈವದ ನೇಮ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ.3ರಂದು ಬೆಳಿಗ್ಗೆ ಮುಗೇರು ಕಾಯರ್ ಮಜಲಿನಲ್ಲಿ ಇಷ್ಟ ದೇವತೆ ಹಾಗೂ ಪರಿವಾರ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ಹೊಸಮಾರು ರಕ್ತೇಶ್ವರಿ ಕಟ್ಟೆಯಲ್ಲಿ ತಂಬಿಲ ಸೇವೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸುವಂತೆ ಕ್ಷೇತ್ರದ ಮೊಕ್ತೇಸರರುಗಳಾದ ಎ.ಚಿಕ್ಕಪ್ಪ ನಾಕ್ ಅರಿಯಡ್ಕ, ಎ.ಜಿ ವಿಜಯ ಕುಮಾರ್ ರೈ ಮುಗೇರು, ನಿತ್ಯಾನಂದ ಶೆಟ್ಟಿ ಕೈಕಾರ ಹಾಗೂ ಊರ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.7022991219 ಅಥವಾ 9741482875 ಗೆ ಸಂಪರ್ಕಿಸಬಹುದಾಗಿದೆ.
ಹೊರೆಕಾಣಿಕೆ ಸಮರ್ಪಣೆ
ಜ.29ರಂದು ಬೆಳಿಗ್ಗೆ 8.30ಕ್ಕೆ ಮುಗೇರು ಕದಿಕೆ ಚಾವಡಿ ಕದಿಕೆ ತುಂಬಿಸಲು ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ದರ್ಬೆತ್ತಡ್ಕ ಶಾಲೆ, ನೀರ್ಪಾಡಿ, ಅಜಲಡ್ಕ ವಿಠಲ ಪೂಜಾರಿ ಅಂಗಡಿ, ಉಪ್ಪಳಿಗೆ, ಗುಮ್ಮಟೆಗದ್ದೆ, ಸಾಹೇಬರ ಅಂಗಡಿ ಹತ್ತಿರ, ಶ್ರೀ ದೇವಿ ಭಜನಾ ಮಂದಿರ ಮುಂಡೋವುಮೂಲೆ, ಅಜ್ಜಿಕಲ್ಲು, ಬೈರೋಡಿ, ಕಾಪಿಕಾಡು, ತೊಟ್ಲ, ಕೈಕಾರ ಹಾಲಿನ ಸೊಸೈಟಿ, ಕೈಕಾರ ಜುಮಾದಿ ದೈವಸ್ಥಾನದ ಹತ್ತಿರ, ರಾಜ್ ಕಾಂಪ್ಲೆಕ್ಸ್ ಪರ್ಪುಂಜ, ಸದಾಶಿವ ಭಜನಾ ಮಂದಿ, ಕೊಲತ್ತಡ್ಕ ಶಿವಕೃಪಾ, ಕುಂಬ್ರ ಶ್ರೀ ರಾಮ ಭಜನಾ ಮಂದಿರ, ಶೇಖಮಲೆ ಹಾಗೂ ಮುಡಾಲ ಮರಾಟಿ ಮಂದಿರ ಇಲ್ಲಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.