ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವ ಸಮಾರೋಪ-ಫಸಲ್ ಬಿಮಾ ಯೋಜನೆಯ ಫಲಾನುಭವಿಗಳ ಸಮಾವೇಶ

0

ಸಹಕಾರಿ ಚಳವಳಿಯಿಂದ ರೈತರ ಬದುಕಿನ ಬದಲಾವಣೆ: ಪ್ರತಾಪ್ ಸಿಂಹ ನಾಯಕ್

ಸಹಕಾರಿ ಚಳುವಳಿಯಿಂದ ರೈತರ ಬದುಕಿನ ಬದಲಾವಣೆ-ಪ್ರತಾಪಸಿಂಹ ನಾಯಕ್
ನಾವು ರೈತರೆಂದು ಎದೆತಟ್ಟಿ ಹೇಳೋಣ-ಕೀಳರಿಮೆ ಬೇಡ-ಅಶೋಕ್ ಕುಮಾರ್ ರೈ
ಸಹಕಾರಿ ಸಂಘಗಳ ಮೂಲಕ ರೈತರ ಬದುಕು ಹಸನು-ಮಠಂದೂರು
ರೈತರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮ-ಪ್ರಸಾದ್ ಕೌಶಲ್ ಶೆಟ್ಟಿ
ಡಿಸಿಸಿ ಬ್ಯಾಂಕ್‌ನಿಂದ 10 ಲಕ್ಷ ರೂ.ದೇಣಿಗೆ-ಶಶಿಕುಮಾರ್ ರೈ ಬಾಲ್ಯೊಟ್ಟು
ಕೃಷಿಯೊಂದಿಗೆ ಹೈನುಗಾರಿಕೆಗೂ ಪ್ರೋತ್ಸಾಹ-ಎಸ್.ಬಿ.ಜಯರಾಮ ರೈ
ಕರ್ನಾಟಕದಲ್ಲೇ ಕಂಪ್ಯೂಟರೀಕರಣಕ್ಕೆ ಮೊದಲ ಹೆಜ್ಜೆಇಟ್ಟ ಸಂಘ-ಎಸ್.ಆರ್.ಸತೀಶ್ಚಂದ್ರ
ಸಹಕಾರಿ ಸಂಘಗಳಿಂದ ರೈತರಿಗೆ ಹೆಚ್ಚಿನ ಸೇವೆ-ಕೆಂಪೇಗೌಡ
ಜಭತ್ತದ ಕೃಷಿ ನಾಶವಾಗಿರುವುದೇ ನೀರಿನ ಬರಕ್ಕೆ ಕಾರಣ-ಬಿ.ಕೆ.ದೇವರಾವ್

ಉಪ್ಪಿನಂಗಡಿ: ರೈತರಲ್ಲಿ ವಿಶ್ವಾಸ ತುಂಬಿ ಅವರ ಬದುಕಿನಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗೆ ಹಾಗೂ ಅವರ ಜೀವನದ ಯಶಸ್ವಿಗೆ ಸಹಕಾರಿ ಚಳವಳಿ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ತಿಳಿಸಿದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಫಲಾನುಭವಿಗಳ ಸಮಾವೇಶ ಮತ್ತು ಸರಕಾರಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಘದ ಗೋದಾಮು ಕಟ್ಟಡವನ್ನು ಉದ್ಘಾಟಿಸಿ, ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರೈತರ ಜೀವನಕ್ಕೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಹಿರಿಯರು ಈ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದಿಂದು ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸಿದ್ದು, ಎಲ್ಲರೂ ಒಗ್ಗಟ್ಟಾಗಿ ದುಡಿದಿರುವುದೇ ಇದಕ್ಕೆ ಕಾರಣ. ಗ್ರಾಹಕರ ಅನುಕೂಲತೆಗೆ ತಕ್ಕಂತೆ ಕಾಲಕ್ಕೆ ತಕ್ಕಂತೆ ಬದಲಾವಣೆಯತ್ತ ಸಾಗುತ್ತಾ, ಅಲ್ಲಿನ ವ್ಯವಸ್ಥೆಗಳನ್ನು ಉನ್ನತೀಕರಿಸುತ್ತಾ ಹೋದಾಗ ಸಂಸ್ಥೆಯೊಂದಕ್ಕೆ ಇಂತಹ ಬೆಳವಣಿಗೆ ಸಾಧ್ಯ ಎಂಬುದಕ್ಕೆ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘವೇ ಉತ್ತಮ ಉದಾಹರಣೆ ಎಂದವರು ಹೇಳಿದರು.


ದ.ಕ. ಉಡುಪಿಯಲ್ಲಿರುವ ಗುಣ ಮಟ್ಟದ ಸಹಕಾರಿ ಸಂಘಗಳು ಬೇರೆಲ್ಲೂ ಇಲ್ಲ -ಅಶೋಕ್ ಕುಮಾರ್ ರೈ:
ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ರೈತ ಎಂದು ಹೇಳುವುದಕ್ಕೆ ಯಾವುದೇ ಕೀಳರಿಮೆ ನಮ್ಮಲ್ಲಿ ಬೇಡ. ಎದೆ ತಟ್ಟಿ ನಾವು ರೈತರು ಎಂದು ಹೇಳೋಣ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿರುವಂತೆ ಗುಣಮಟ್ಟದ ಸಹಕಾರಿ ಸಂಸ್ಥೆಗಳು ಎಲ್ಲೂ ಇಲ್ಲ. ಊರು, ಬ್ಯಾಂಕ್‌ಗಳು ಅಭಿವೃದ್ಧಿಯಾಗಬೇಕಾದರೆ ಕೃಷಿಗೆ ಅನುಗುಣವಾಗಿ ಉದ್ಯಮಗಳು ಬೆಳೆಯಬೇಕು. ಯುವಕರಿಗೆ ಕೆಲಸ ಸಿಗುವ ವ್ಯವಸ್ಥೆಗಳಾಗಬೇಕು. ಈ ನಿಟ್ಟಿನಲ್ಲಿ ಕೊಯಿಲ ಫಾರಂ ಅನ್ನು ಪ್ರಾಣಿಗಳ ವಲಯವನ್ನಾಗಿ ರೂಪಿಸುವ ಉzಶವಿದ್ದು, ಈಗಾಗಲೇ ಕೆಎಂಎಫ್‌ನ ಘಟಕವನ್ನು ಪುತ್ತೂರಿಗೆ ತರಿಸುವ ಕೆಲಸವಾಗಿದೆ. ಯಾವುದೇ ಯೋಜನೆಗಳನ್ನು ಸರಕಾರ ಅನುಷ್ಠಾನ ಮಾಡಿದರೆ, ಅದು ನಾವು ಮಾಡಿದ್ದು, ನಮ್ಮ ಸರಕಾರ ಮಾಡಿದ್ದು ಎಂಬ ರಾಜಕೀಯ ಅದರೊಳಗೆ ಬೆರೆಸಬಾರದು. ನಮಗೆ ಜನರ ಅಭಿವೃದ್ಧಿಯಷ್ಟೇ ಮುಖ್ಯ. ಯಾವುದೇ ಸರಕಾರ ಯೋಜನೆ ತಂದ್ರೂ ಅದು ಜನರ ತೆರಿಗೆಯ ದುಡ್ಡಿನಿಂದಲೇ ಅನ್ನೋದು ನಾವು ಮರೆಯಬಾರದು ಎಂದರು. ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಕೇಂದ್ರದ ಪಾಲು ಶೇ.22 ಆದರೆ ರಾಜ್ಯ ಸರಕಾರದ ಪಾಲು ಶೇ.68 ಇದೆ. ಅದೇನಿದ್ದರೂ ರೈತನಿಗೆ ಅದು ಉಪಯೋಗವಾದರೆ ಮಾತ್ರ ಸಾಕು ಎಂದು ಅಶೋಕ್ ಕುಮಾರ್ ರೈ ನಾನು ಎಲ್ಲರ ಶಾಸಕನಾಗಿದ್ದು, ಪಕ್ಷಾತೀತವಾಗಿ ನಿಮ್ಮೆಲ್ಲರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಅಕ್ರಮ- ಸಕ್ರಮ, 94ಸಿ ಕಡತಗಳು ಬಾಕಿಯಾಗಿದ್ದರೆ ನನಗೆ ತಿಳಿಸಿ. ಅದನ್ನು ವಿಲೇವಾರಿ ಮಾಡುವ ಕೆಲಸ ನಾನು ಮಾಡುತ್ತೇನೆ. ನಾನು ಭ್ರಷ್ಟಾಚಾರದ ವಿರೋಧಿಯಾಗಿದ್ದು, ರೈತನಿಂದ 1 ರೂ. ಲಂಚ ಮುಟ್ಟಿದ್ರೂ ಅಂತಹ ಅಧಿಕಾರಿಗಳನ್ನು ಸಹಿಸಲ್ಲ ಎಂದರು.


ರೈತರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮ-ಪ್ರಸಾದ್ ಕೌಶಲ್:
ಸಹಕಾರಿ ಧ್ವಜಾರೋಹಣ ನೆರವೇರಿಸಿದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ತಾನು ಬೆಳೆಯುವುದರೊಂದಿಗೆ ತನ್ನ ಸದಸ್ಯರು, ಕೃಷಿಕರು ಬೆಳೆಯಬೇಕು ಎಂಬ ಉzಶದಿಂದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘವು ಕಾರ್ಯನಿರ್ವಹಿಸಿದ್ದು, ತನ್ನ 75ನೇ ಸಂಭ್ರಮಾಚರಣೆಯಲ್ಲಿ ರೈತರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತರಬೇತಿ ಶಿಬಿರದ ಮೂಲಕ ಜ್ಞಾನ ಹಂಚುವ ಕೆಲಸ ಮಾಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಡಿಸಿಸಿ ಬ್ಯಾಂಕ್‌ನಿಂದ 10 ಲಕ್ಷ ರೂ. ದೇಣಿಗೆ-ಬಾಲ್ಯೊಟ್ಟು:
ಅಮೃತ ಸಹಕಾರಿ ಮಾರ್ಟ್‌ನ ಉದ್ಘಾಟನೆ ನೆರವೇರಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಐದು ತಾಲೂಕುಗಳಿಗೆ ರಸಗೊಬ್ಬರ ಮತ್ತು ಕೀಟನಾಶಕವನ್ನು ಒದಗಿಸುವ ಏಕೈಕ ಸಂಘವೆಂಬ ಹೆಗ್ಗಳಿಕೆಗೆ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘ ಪಾತ್ರವಾಗಿದೆ. ಎರಡು ಕೋಟಿ ರೂ.ನಲ್ಲಿ ಈ ಸಂಘವು ರಸಗೊಬ್ಬರ ದಾಸ್ತಾನು ಮಾಡಲು ಗೋದಾಮು ಕಟ್ಟಿದ್ದು, ಇದಕ್ಕೆ ಡಿಸಿಸಿ ಬ್ಯಾಂಕ್‌ನಿಂದ 10 ಲಕ್ಷ ರೂ.ವನ್ನು ದೇಣಿಗೆ ರೂಪದಲ್ಲಿ ನೀಡಲಾಗುವುದು ಎಂದರು.


ಕೃಷಿಯೊಂದಿಗೆ ಹೈನುಗಾರಿಕೆಗೆ ಪ್ರೋತ್ಸಾಹ-ಎಸ್.ಬಿ. ಜಯರಾಮ ರೈ:
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ. ಜಯರಾಮ ರೈ ಮಾತನಾಡಿ, ಕೃಷಿಯೊಂದಿಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ, ಬೆಳೆಸುವ ಕಾರ್ಯವಾಗಬೇಕಿದೆ ಎಂದರು.


ಕರ್ನಾಟಕದಲ್ಲೇ ಕಂಪ್ಯೂಟರೀಕರಣಕ್ಕೆ ಮೊದಲ ಹೆಜ್ಜೆ ಇಟ್ಟ ಸಹಕಾರಿ ಸಂಘ-ಎಸ್.ಆರ್. ಸತೀಶ್ಚಂದ್ರ:
ಸರಕಾರಗಳಿಗೆ ಅಭಿನಂದನಾ ಭಾಷಣ ಮಾಡಿದ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್, ಕ್ಯಾಂಪ್ಕೋದ ಸಹಕಾರಿ ಭಾರತಿಯ ನಿರ್ದೇಶಕರಾದ ಎಸ್.ಆರ್. ಸತೀಶ್ಚಂದ್ರ, ಕರ್ನಾಟಕದಲ್ಲಿಯೇ ಕಂಪ್ಯೂಟರೀಕರಣಕ್ಕೆ ಮೊದಲ ಹೆಜ್ಜೆ ಇಟ್ಟ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘ ಪಾತ್ರವಾಗಿದೆ. 2017ರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಅನುಕೂಲಕ್ಕಾಗಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಇದು ಇಂದು ಅನೇಕ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಇದನ್ನು ಪಡೆಯಲು ಯಾವ ಎಂಪಿ, ಎಂಎಲ್‌ಎಗಳ ಶಿಫಾರಸ್ಸು ಬೇಕಾಗಿಲ್ಲ. ಯಾವ ಅಧಿಕಾರಿಗಳ ಸಹಿಗೂ ಅಲೆದಾಡಬೇಕಿಲ್ಲ. ಒಂದು ಹೆಕ್ಟೇರ್‌ಗೆ 32 ಸಾವಿರ ಕಟ್ಟಬೇಕಾಗಿದ್ದು, ಅದರಲ್ಲಿ 13 ಸಾವಿರ ಕೇಂದ್ರ ಸರಕಾರ, 13 ಸಾವಿರ ರಾಜ್ಯ ಸರಕಾರ ಕಟ್ಟಿದರೆ, ರೈತ ಕಟ್ಟಬೇಕಾಗಿರುವುದು ಕೇವಲ 6 ಸಾವಿರ ರೂ. ಮಾತ್ರ. ರೈತರು ಸ್ವಾಭಿಮಾನಿಗಳಾಗಿ ಬದುಕಬೇಕೆಂಬ ಉzಶದಿಂದ ಸರಕಾರಗಳು ಆಯುಷ್ಮಾನ್ ಭಾರತ್ ಅನ್ನುವ ಯೋಜನೆಯನ್ನು ಜಾರಿಗೆ ತಂದಿವೆ. ಯಶಸ್ವಿನಿಯನ್ನು ಮತ್ತೆ ಜಾರಿಗೊಳಿಸಿವೆ. ರಾಜ್ಯದಲ್ಲಿ 45 ಸಾವಿರ ಸಹಕಾರಿ ಸಂಸ್ಥೆಗಳಿದ್ದು, ಇವುಗಳು ಪ್ರಜಾಪ್ರಭುತ್ವದ ತೊಟ್ಟಿಲುಗಳಾಗಿವೆ. ದೇಶದ ಜಿಡಿಪಿಯಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಬಹಳಷ್ಟು ಇದೆ. ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿರುವ ಸರಕಾರಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.


ಸಹಕಾರಿ ಸಂಘಗಳಿಂದ ರೈತರಿಗೆ ಹೆಚ್ಚಿನ ಸೇವೆ-ಕೆಂಪೇಗೌಡ:
ಡಿಜಿಟಲ್ ಮಾಹಿತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಎಚ್., ಉಡುಪಿ ಹಾಗೂ ದ.ಕ. ಜಿಲ್ಲೆಗಳಲ್ಲಿ ಸಹಕಾರಿ ಸಂಘಗಳು ರೈತರಿಗೆ
ಹೆಚ್ಚಿನ ಸೇವೆಯನ್ನು ನೀಡುತ್ತಿವೆ. ದ.ಕ. ಜಿಲ್ಲೆಯಲ್ಲಿ ಇರುವ 201 ರಸಗೊಬ್ಬರ ಪರವಾನಿಗೆಗಳಲ್ಲಿ 130 ಪರವಾನಿಗೆಗಳು ಸಹಕಾರಿ ಸಂಘಗಳ ಕೈಯಲ್ಲಿವೆ ಎಂದರು.


ಭತ್ತದ ಕೃಷಿನಾಶವಾಗಿರುವುದೇ ನೀರಿನ ಬರಕ್ಕೆ ಕಾರಣ-ಬಿ.ಕೆ. ದೇವರಾವ್:
ರಾಷ್ಟ್ರಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಸಸ್ಯತಳಿ ಸಂರಕ್ಷಕ ರೈತರಾದ ಬಿ.ಕೆ. ದೇವರಾವ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಭತ್ತದ ಕೃಷಿ ಯಾವತ್ತೂ ಬತ್ತಲು ಸಾಧ್ಯವಿಲ್ಲ. ಇಂದು ನೀರಿನ ಬರಕ್ಕೆ ಭತ್ತದ ಗದ್ದೆಗಳು ನಾಶವಾಗಿರುವುದೇ ಕಾರಣವಾಗಿದೆ. ನನಗೆ ಸನ್ಮಾನ ಮಾಡುವುದಕ್ಕಿಂತ ಭತ್ತದ ಬೆಳೆಯನ್ನು ಬೆಳೆಸುವ ಕೆಲಸ ಮಾಡಿ. ಭತ್ತದ ಬೆಳೆ ಇದ್ದರೆ ದಾರಿದ್ರ್ಯ ಅನ್ನೋದೇ ಇರೋದಿಲ್ಲ ಎಂದರು.


ಸಹಕಾರಿ ಸಂಘಗಳ ಮೂಲಕ ರೈತರ ಬದುಕು ಹಸನು-ಮಠಂದೂರು:
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಕೃಷಿಕನ ಬದುಕು ಎಷ್ಟು ಉತ್ತಮ ಎನ್ನುವುದನ್ನು ಕೊರೋನಾ ಬಂದಾಗ ಜಗತ್ತು ಕಂಡಿದೆ. ಇಂದು ಪ್ರತಿಯೋರ್ವ ರೈತನಲ್ಲಿ, ಭೌಗೋಳಿಕವಾಗಿ ಎಲ್ಲಾ ಕಡೆಯೂ ಸಹಕಾರಿ ಸಂಘಗಳು ಹಬ್ಬುವ ಮೂಲಕ ರೈತನ ಬದುಕನ್ನು ಹಸನುಗೊಳಿಸಿವೆ. ಸರಕಾರಗಳು ಕೂಡಾ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಫಸಲ್ ಬಿಮಾ ಯೋಜನೆ, ರೈತ ಸಂಜೀವಿನಿ ಹೀಗೆ ಹತ್ತಾರು ಯೋಜನೆಗಳನ್ನು ರೈತರಿಗಾಗಿ ಜಾರಿಗೆ ತಂದಿವೆ. ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಹಕಾರಿ ಇಲಾಖೆಯನ್ನು ಸೃಷ್ಟಿ ಮಾಡಿ, ಸಹಕಾರಿ ಸಚಿವರನ್ನು ನೀಡುವ ಮೂಲಕ ಸಹಕಾರಿ ಕ್ಷೇತ್ರವನ್ನು ಗಟ್ಟಿಗೊಳಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಸರಕಾರವು ಕಳೆದ ಬಜೆಟ್‌ನಲ್ಲಿ ಶೇ.0 ಬಡ್ಡಿದರದಲ್ಲಿ ರೈತರ ಸಾಲವನ್ನು 5 ಲಕ್ಷಕ್ಕೆ ಏರಿಸಿದ್ದು, ಶೇ.3ರ ಬಡ್ಡಿ ದರದಲ್ಲಿ 15 ಲಕ್ಷ ಸಾಲವನ್ನು ನೀಡುವುದಾಗಿ ಘೋಷಿಸಿದೆ. ಆದರೆ ಅದಿಂದು ರೈತರ ಪಾಲಿಗೆ ಗಗನಕುಸುಮವಾಗಿದ್ದು, ಆದಷ್ಟು ಬೇಗ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದರು.


ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ರಾವ್, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ನ್ಯಾಯವಾದಿ ಕೆ. ಗೋಪಾಲಕೃಷ್ಣ ಭಟ್, ಪೆಲಪ್ಪಾರು ವೆಂಕಟ್ರಮಣ ಭಟ್, ಚಂದ್ರಶೇಖರ ತಾಳ್ತಜೆ, ಯಶವಂತ ಜಿ. ಅವರನ್ನು ಹಾಗೂ ಹಾಲಿ ಅಧ್ಯಕ್ಷ ಕೆ.ವಿ. ಪ್ರಸಾದ ಅವರನ್ನು ಮತ್ತು ಸಂಘದ ನಿವೃತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಪಿ. ಶೇಷಪತಿ ರೈ, ಗೋಪಾಲ ಹೆಗ್ಡೆ, ಎಂ. ರಘುವೀರ್ ರಾವ್, ಆರ್. ಜತ್ತಪ್ಪ ಗೌಡ, ಕ್ಲೇರಿ ವೇಗಸ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.


ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಪಿ.ಎನ್., ೩೪ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್, ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ನಿರ್ದೇಶಕರಾದ ಯಶವಂತ ಜಿ., ಜಗದೀಶ್ ರಾವ್ ಎಂ., ರಾಜೇಶ್, ಯತೀಶ್ ಶೆಟ್ಟಿ ಯು., ರಾಮ ನಾಯ್ಕ, ಶ್ಯಾಮಲ ಶೆಣೈ ಎನ್., ದಯಾನಂದ ಎಸ್., ಕುಂಞ ಎಂ.ಎನ್., ಸಚಿನ್ ಎಂ., ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಪ್ರತಿನಿಧಿ ಶರತ್ ಡಿ. ಅವರು ಉಪಸ್ಥಿತರಿದ್ದರು.


ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಶ್ರಾವ್ಯ ಪ್ರಾರ್ಥಿಸಿದರು. ಡಾ| ತಾಳ್ತಜೆ ವಸಂತಕುಮಾರ್, ಗೋಪಾಲ ಹೆಗ್ಡೆ, ಪುಷ್ಪರಾಜ ಶೆಟ್ಟಿ, ಶಶಿಧರ ಹೆಗ್ಡೆ, ಸ್ಮರಣ ಸಂಚಿಕೆಯ ಗೌರವ ಸಂಪಾದಕ ತಾಳ್ತಜೆ ಚಂದ್ರಶೇಖರ, ಜಯಂತ ಪೊರೋಳಿ, ಶಶಿಧರ ಹೆಗ್ಡೆ, ಪೆಲಪ್ಪಾರು ವೆಂಕಟ್ರಮಣ ಭಟ್, ಗುರುರಾಜ್ ಭಟ್, ಹಮ್ಮಬ್ಬ ಶೌಕತ್ ಅಲಿ, ಉದಯಕುಮಾರ್ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಅಝೀರ ಬಸ್ತಿಕ್ಕಾರ್, ರವೀಂದ್ರ ದರ್ಬೆ, ಧರ್ನಪ್ಪ ನಾಯ್ಕ, ಮುಕುಂದ ಗೌಡ ಬಜತ್ತೂರು, ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸಂಘದ ಸಿಬ್ಬಂದಿ ಪುಷ್ಪರಾಜ್ ಶೆಟ್ಟಿ ಸನ್ಮಾನಿತ ರೈತ ಬಿ.ಕೆ. ದೇವರಾವ್ ಅವರ ಸನ್ಮಾನ ಪತ್ರ ವಾಚಿಸಿದರು. ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ವಂದಿಸಿದರು. ಸ್ಮರಣ ಸಂಚಿಕೆಯ ಸಂಪಾದಕ, ಉಪನ್ಯಾಸಕ ಗಣರಾಜ ಕುಂಬ್ಳೆ ಹಾಗೂ ಡಾ. ಗೋವಿಂದ ಪ್ರಸಾದ ಕಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ `ಮಾನಿಷಾದ’ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here