ಕಡಬ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕ ಮತ್ತು ಸ.ಹಿ.ಪ್ರಾ.ಶಾಲೆ ಸುಬ್ರಹ್ಮಣ್ಯ ಇದರ ಸಹಯೋಗದೊಂದಿಗೆ “ಸ್ಪಷ್ಟ ಓದು ಶುದ್ದ ಬರಹ” ಸಾಹಿತ್ಯ ಜಾಗೃತಿ ಕಾರ್ಯಕ್ರಮ ಜ.27ರಂದು ಸುಬ್ರಹ್ಮಣ್ಯ ಶಾಲಾ ಸಭಾಂಗದಲ್ಲಿ ನಡೆಯಿತು.
ಸುಬ್ರಹ್ಮಣ್ಯ ಶಾಲಾ ಮುಖ್ಯಗುರು ಮಾಧವ ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಕ.ಸಾ.ಪ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಪಾಠ ಪ್ರವಚನವನ್ನು ಪೂರ್ಣಗೊಳಿಸಲು ಹೆಚ್ಚು ಒತ್ತನ್ನು ಕೊಡುವ ಬದಲು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಓದಲು ಮತ್ತು ಬರೆಯಲು ಕಲಿಸಿದಾಗ ಕಲಿಕೆಯ ಉದ್ದೇಶ ಈಡೇರಿದಂತಾಗುತ್ತದೆ. ಆ ಮೂಲಕ ಸಾಹಿತ್ಯ ಬೆಳವಣಿಗೆಯೂ ಆಗಬಲ್ಲದು ಎಂದರು.
ಸ್ಪಷ್ಟ ಓದು ಶುದ್ದ ಬರಹ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕ.ಸಾ.ಪ ವತಿಯಿಂದ ನೀಡಲಾದ ಬಹುಮಾನವನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷ ವಿಶ್ವನಾಥ್ ಕೆ. ಅವರು ವಿತರಿಸಿದರು. ಅತಿಥಿಯಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯಿನಿ ಯಶೋಧಾ, ಸುಬ್ರಹ್ಮಣ್ಯ ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಕ.ಸಾ.ಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ರಾಮಕುಂಜ, ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ., ರಾಜ್ಯ ಸಾಹಿತ್ಯ ಪರಿಷತ್ ಸದಸ್ಯ ಶಿವಪ್ರಸಾದ್ರವರು ಸಂದರ್ಭೋಚಿತವಾಗಿ ಮಾತನಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡರು. ಸಹಶಿಕ್ಷಕಿ ವಿನೋದ ಸ್ವಾಗತಿಸಿದರು. ಸಹಶಿಕ್ಷಕ ಪ್ರತಾಪ್ ವಂದಿಸಿದರು. ಸಹಶಿಕ್ಷಕಿ ವಾಣಿ ಕಾರ್ಯಕ್ರಮ ನಿರೂಪಿಸಿದರು.